
ಕಲಬುರಗಿ (ನ.17): ‘ಆರ್‌ಎಸ್‌ಎಸ್‌ನವರಿಗೆ ನಾವು ಚಿತ್ತಾಪುರದಲ್ಲಿ ಪಥ ಸಂಚಲನ ಮಾಡ್ಬೇಡಿ ಅಂತ ಎಲ್ಲಿ ಹೇಳಿದ್ವಿ?, ಅನುಮತಿ ಕೇಳ್ರಪ್ಪ ಅಂತ ಹೇಳಿದ್ವಿ, ಆದ್ರೆ ಅವರು ಮಾಹಿತಿಗಾಗಿ ಅಂತ ಅರ್ಜಿ ಕೊಟ್ಟರು, ತಾಲೂಕು ಆಡಳಿತ ಅನುಮತಿ ನಿರಾಕರಿಸಿತು. ಕೋರ್ಟ್‌ಗೆ ಹೋಗಿದ್ದು ಅವರೆ ತಾನೆ, ಅನುಮತಿ ಕೋರಿ ಹೊಸ ಅರ್ಜಿ ಹಾಕಿದ್ರು, ಅನುಮತಿ ಕೊಟ್ವಿ, ಹೈಕೋರ್ಟ್ ಷರತ್ತು ಹಾಕಿದೆ. ಇದರಲ್ಲಿ ಗೊಂದಲ ಏನಿಲ್ಲ’ ಎಂದು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರೆಸ್ಸೆಸ್ ಪಥ ಸಂಚಲನ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಹೇಳಿದ ಪ್ರಕಾರವೇ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಡೀತಿದೆ ಎಂದರು.
ಆರೆಸ್ಸೆಸ್ ಜೊತೆಗಿನ ಸಂಘರ್ಷ ಇದೀಗ ಆರಂಭವಾಗಿದೆ. ಇದು ಆರಂಭ ಮಾತ್ರ. ಇನ್ನೂ ಸ್ವಲ್ಪ ದಿನ ತಡೀರಿ, ಆದಾಯದ ವಿಚಾರದಲ್ಲಿ ಆರೆಸ್ಸೆಸ್ ಹೇಗೆ ಸುರಕ್ಷಿತವಾಗಿದೆ ಎಂಬುದನ್ನು ಬಯಲು ಮಾಡುವೆ ಎಂದರು. ಸಂಘಟನೆಯ ನೋಂದಣಿ ವಿಚಾರದಲ್ಲಿ ಸರಸಂಘ ಸಂಚಾಲಕ ಮೋಹನ ಭಾಗವತ್‌ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರು ಕ್ಲಬ್ ಕೂಡಾ ಕೆಲವರ ಸಂಘವಾದರೂ ಅದು ನೋಂದಣಿಯಾಗಿದೆ. ಇವರಿಗ್ಯಾಕೆ ನೋಂದಣಿ ಕಾನೂನು ಅನ್ವಯಿಸೋದಿಲ್ಲ. ಇವರು ಹೇಳಿದ್ದೇ ಸಂವಿಧಾನನಾ?. ಸಂವಿಧಾನದಲ್ಲಿದ್ದಂತೆ ಇವರು ಪಾಲಿಸಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಆರೆಸ್ಸೆಸ್ ಯಾಕೆ ನೋಂದಣಿಯಾಗಿಲ್ಲವೆಂದರೆ, ನೋಂದಣಿ ಆದ ಮರುಕ್ಷಣವೇ ಐಟಿ ಇತ್ಯಾದಿ ಜಾಲದಡಿ ಬರಬೇಕು. ಗುರುದಕ್ಷಿಣೆ ಕೂಡಾ ಲೆಕ್ಕವಾಗಬೇಕು, ಹೀಗಾಗಿ ಇದರಿಂದ ದೂರವಿರಲು ಇವೆಲ್ಲ ತಂತ್ರಗಾರಿಕೆ ಎಂದು ಖರ್ಗೆ ಆರೋಪಿಸಿದರು. ದೇವಸ್ಥಾನಗಳ ಹುಂಡಿ ಹಣವನ್ನು ಲೆಕ್ಕ ಮಾಡುತ್ತೇವೆ. ಆದರೆ, ಸಂಘಕ್ಕೆ ಬರೋ ದೇಣಿಗೆ ಲೆಕ್ಕವಾಗಬಾರದಾ?. ಏನಿದು ಕಾನೂನು?. ಅವ್ರು ಹೇಳಿದ್ಹಂಗೆ ಕೇಳಿಕೊಂಡು ಇರಬೇಕಾ?. ಕಲಬುರಗಿ ಭಾಗದಲ್ಲೇ ಕೆಕೆಆರ್‌ಡಿಬಿ ಹಣ 100 ಕೋಟಿ ರು.ಗಳನ್ನು ಆರೆಸ್ಸೆಸ್ ಮೂಲದವರು ಹೇಗೆ ಲೂಟಿ ಹೊಡೆದರು ಅನ್ನೋದನ್ನು 1 ತಿಂಗಳಲ್ಲಿ ಬಹಿರಂಗ ಮಾಡ್ತೀನಿ. ಆಗ ನಿಮಗೇ ಗೊತ್ತಾಗುತ್ತೆ ಅವರೆಷ್ಟು ದೊಡ್ಡ ದರೋಡೆಕೋರರು ಎಂದು. ಅವರ ಹಗರಣವನ್ನೆಲ್ಲಾ ಬಯಲು ಮಾಡ್ತೀನಿ ಎಂದು ಖರ್ಗೆ ಹೇಳಿದರು.
ಸಂವಿಧಾನದ ಪ್ರಕಾರ ಸಂಘ-ಸಂಸ್ಥೆಗಳವರು ತಮ್ಮ ಪ್ರತಿಭಟನೆ, ಪಥ ಸಂಚಲನ ಮಾಡಲು ಹಕ್ಕಿದೆ. ಅದಕ್ಕೆ ಅನುಮತಿ ಕೋರುವುದಕ್ಕೂ ಪದ್ಧತಿಯಿದೆ. ಹೀಗಾಗಿ ಯಾರೇ ಇರಲಿ, ಈ ನೆಲದ ಕಾನೂನಿನಂತೆಯೇ ನಡೆದುಕೊಳ್ಳಬೇಕು. ಚಿತ್ತಾಪುರದಲ್ಲಿ ಆರೆಸ್ಸೆಸ್‌ಗೆ ನಾವು ಹೇಳಿದ್ದು ಇದನ್ನೇ ಎಂದು ಸಚಿವ ಖರ್ಗೆ ಹೇಳಿದರು. 3 ಲಕ್ಷ ಜನ ಚಿತ್ತಾಪುರಕ್ಕೆ ಬರ್ತೀನಿ ಅಂದರು. ಈಗ ಎಷ್ಟು ಬರ್ತಿದ್ದಾರೆ, ಕೇವಲ 300 ಮಂದಿ. ಅವ್ರು ಹೇಳಿದ ಹಾಗೆ ಆಗೋದಿಲ್ಲ. ನೆಲದ ಕಾನೂನು ಎಲ್ಲರಿಗೂ ಒಂದೇ. ಬೆಂಗಳೂರು, ಮೈಸೂರು ಬಿಡಿ, ಪಕ್ಕದ ಕಲಬುರಗಿ ಜನರೇ ಚಿತ್ತಾಪುರಕ್ಕೆ ಹೋಗದಂತೆ ಹೈಕೋರ್ಟ್ ಆದೇಶವಿದೆ. ಇದನ್ನೆಲ್ಲ ಈಗಲಾದರೂ ಅವರು ಅರಿಯಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.