Latest Videos

ಹುಬ್ಬಳ್ಳಿ-ಧಾರವಾಡವನ್ನು ಕೇಂದ್ರ ಸಚಿವ ಜೋಶಿ ಸಿಂಗಾಪುರ ಮಾಡಿದ್ದಾರಾ?: ಸಚಿವ ಲಾಡ್ ಪ್ರಶ್ನೆ

By Kannadaprabha NewsFirst Published Jun 30, 2024, 6:16 PM IST
Highlights

ಮುಖ್ಯಮಂತ್ರಿ ಬದಲಾಯಿಸುವ ಕುರಿತು ಲಿಂಗಾಯತ ಸ್ವಾಮೀಜಿ ಹಾಗೂ ಒಕ್ಕಲಿಗ ಸ್ವಾಮೀಜಿ ಅವರವರ ಅಭಿಪ್ರಾಯ ಹೇಳಿದ್ದಾರೆ. ಇದರಿಂದ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು. 

ಹುಬ್ಬಳ್ಳಿ (ಜೂ.30): ಮುಖ್ಯಮಂತ್ರಿ ಬದಲಾಯಿಸುವ ಕುರಿತು ಲಿಂಗಾಯತ ಸ್ವಾಮೀಜಿ ಹಾಗೂ ಒಕ್ಕಲಿಗ ಸ್ವಾಮೀಜಿ ಅವರವರ ಅಭಿಪ್ರಾಯ ಹೇಳಿದ್ದಾರೆ. ಇದರಿಂದ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅವರವರ ಅಭಿಪ್ರಾಯ ಹೇಳಬಹುದಾಗಿದೆ. ಅದೇ ರೀತಿ ಸ್ವಾಮೀಜಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರಷ್ಟೇ. ಹಾಗಂತ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ ಎನ್ನುವುದು ಸರಿಯಲ್ಲ. 

ಸರ್ಕಾರದಲ್ಲಿ ಯಾವುದೇ ಬಗೆಯ ಗೊಂದಲಗಳಿಲ್ಲ ಎಂದರು. ಏನೇ ಇದ್ದರೂ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾನೇನು ಹೇಳುವುದಿಲ್ಲ. ಉಪಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕೆನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಸರಿಯಾಗಿ ಬರುತ್ತಿಲ್ಲ ಎಂದು ದೂರಿದ ಸಚಿವರು, ಬೇರೆ ರಾಜ್ಯಕ್ಕೆ ಹೋಲಿಕೆ‌ ಮಾಡಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಹಾಲಿನ ದರ ಕಡಿಮೆ ಇದೆ. 

ಸಿಎಂ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ: ಸಚಿವ ಸತೀಶ್‌ ಜಾರಕಿಹೊಳಿ

ನಾವು ಸರ್ಕಾರ ನಡೆಸಬೇಕು. ಅದಕ್ಕೆ ಬೆಲೆ ಏರಿಕೆ ಮಾಡಬೇಕು. ₹60 ಸಾವಿರ ಕೋಟಿ ಗ್ಯಾರಂಟಿಗೆ ಆದಾಯ ಬೇಕು. ಗ್ಯಾರಂಟಿ ಯೋಜನೆಗಳಿಂದ ನಮ್ಮ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿಜೆಪಿ ಸಂಸದರು ಏನು ಸಂತೋಷವಾಗಿದ್ದಾರಾ? ವೈಯಕ್ತಿಕವಾಗಿ ಒಬ್ಬ ಸಂಸದರು ಎಷ್ಟು ಅನುದಾನ ತಂದಿದ್ದಾರೆ? ಹುಬ್ಬಳ್ಳಿ-ಧಾರವಾಡವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇನೂ ಸಿಂಗಾಪುರ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಜನಸ್ನೇಹಿ, ಪಾರದರ್ಶಕ ಆಡಳಿತಕ್ಕೆ ಆದ್ಯತೆ: ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಬೇಕು-ಬೇಡಿಕೆಗಳಿಗೆ ಸ್ಪಂದಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಮಟ್ಟದಲ್ಲಿ ಐದು ಜನಸಂಪರ್ಕ ಸಭೆ ಜರುಗಿಸಿ, ಜನರ ಅಹವಾಲು ಸ್ವೀಕರಿಸಿ ಶೇ. 75ರಷ್ಟು ದೂರುಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳು ಸರ್ಕಾರ, ಇಲಾಖೆಗಳ ಹಂತದಲ್ಲಿ ಆಗಬೇಕಿದೆ ಮತ್ತು ಕೆಲವು ನ್ಯಾಯಾಲಯ ಪ್ರಕರಣಗಳು ಇವೆ. ಇವುಗಳನ್ನು ಹಂತ-ಹಂತವಾಗಿ ಪರಿಹರಿಸುವುದಾಗಿ ಸಚಿವರು ತಿಳಿಸಿದರು.

263ಕ್ಕೂ ಹೆಚ್ಚು ಅರ್ಜಿ ಸ್ವೀಕೃತ: ಕಾರ್ಯಕ್ರಮದಲ್ಲಿ ಒಟ್ಟು 263ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು ಶೇ. 40ರಷ್ಟು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಉಳಿದಂತೆ ಬಹುತೇಕ ಅರ್ಜಿಗಳು ವಾಸಕ್ಕೆ ಮನೆ, ಜಮೀನು ಸರ್ವೇ, ಫೌತಿ, ಪೊಡಿಗಾಗಿ ಅರ್ಜಿ ಸಲ್ಲಿಕೆ ಆಗಿವೆ. ಇವುಗಳನ್ನು ಸಹ ಮುಂದಿನ ದಿನಗಳಲ್ಲಿ ನಿಯಮಾನುಸಾರ, ಕಾನೂನುಬದ್ಧವಾಗಿ ಪರಿಶೀಲಿಸಿ, ಇತ್ಯರ್ಥಪಡಿಸಲಾಗುವುದು ಎಂದರು.

ದಾರಿ ತಪ್ಪಿದ ಮಗನಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಣ್ಣೀರಾದ ಸಚಿವ: ವಯಸ್ಕ ಮಗ ವಿಶೇಷಚೇತನನಿದ್ದು ಏಳಲು, ಅಡ್ಡಾಡಲು ಆಗುವುದಿಲ್ಲ. ಮಗನನ್ನು ಸಾಕಲು ಸಹಾಯ ಮಾಡಿ ಎಂದು ತಾಲೂಕಿನ ದೇವಿಕೊಪ್ಪ ಗ್ರಾಮದ ವಿಶೇಷಚೇತನ ನಾಗರಾಜ ತಾಯಿ ಕಸ್ತೂರಿ ತುಂಬ್ರಿಕೊಪ್ಪ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು. ಅವರ ಪರಿಸ್ಥಿತಿ ನೋಡಿ ಕಣ್ಣೀರಾದ ಸಚಿವರು, ತಮ್ಮ ಫೌಂಡೇಶನ್‌ ವತಿಯಿಂದ ಸಹಾಯ ಮಾಡುವ ಭರವಸೆ ನೀಡಿದರು. ಜತೆಗೆ ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನಗಳ ಸಹಾಯ ಮಾಡಿಸುವುದಾಗಿ ತಿಳಿಸಿದರು. ಅಗತ್ಯ ಚಿಕಿತ್ಸೆ, ಔಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

click me!