ಸರ್ಕಾರ ಟಾರ್ಗೆಟ್‌ ಮಾಡುವುದೇ ಬಿಜೆಪಿ ಅಜೆಂಡಾ: ಸಚಿವ ಸಂತೋಷ ಲಾಡ್‌

By Kannadaprabha News  |  First Published Oct 5, 2023, 1:00 AM IST

ಕಳೆದ 10 ವರ್ಷದಯಲ್ಲಿ ಬಿಜೆಪಿಯವರು 11 ಸರ್ಕಾರಗಳನ್ನು ಉರುಳಿಸಿದ್ದಾರೆ. ಈವರೆಗೆ ಸುಮಾರು ಒಂದು ಸಾವಿರ ಶಾಸಕರನ್ನು ಖರೀದಿಸಿ ಬಿಜೆಪಿ ವ್ಯವಹಾರ ಮಾಡಿದೆ ಎಂದು ಟೀಕಿಸಿದ ಸಚಿವ ಸಂತೋಷ ಲಾಡ್‌ 


ಬೆಳಗಾವಿ(ಅ.05):  ಬೇರೆ ಪಕ್ಷದ ಶಾಸಕರನ್ನು ಸೆಳೆಯುವುದು, ಸರ್ಕಾರವನ್ನು ಟಾರ್ಗೆಟ್‌ ಮಾಡುವುದೇ ಬಿಜೆಪಿ ಅಜೆಂಡಾ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 10 ವರ್ಷದಯಲ್ಲಿ ಬಿಜೆಪಿಯವರು 11 ಸರ್ಕಾರಗಳನ್ನು ಉರುಳಿಸಿದ್ದಾರೆ. ಈವರೆಗೆ ಸುಮಾರು ಒಂದು ಸಾವಿರ ಶಾಸಕರನ್ನು ಖರೀದಿಸಿ ಬಿಜೆಪಿ ವ್ಯವಹಾರ ಮಾಡಿದೆ ಎಂದು ಟೀಕಿಸಿದರು.

ಸಂಕ್ರಾಂತಿ ಒಳಗೆ ಸರ್ಕಾರ ಬೀಳಲಿದೆ ಎನ್ನುವ ವದಂತಿ ಬಗ್ಗೆ ಬಿಜೆಪಿಯವರನ್ನೇ ಪ್ರಶ್ನಿಸಿ. ಸರ್ಕಾರ ಬೀಳುತ್ತದೆ ಎಂಬ ಭವಿಷ್ಯ ನಮ್ಮಲ್ಲಿಲ್ಲ. ರಾಜ್ಯದ ಜನತೆಯ ಆಶೀರ್ವಾದದೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದ್ದೇವೆ. 2024ರ ಲೋಕಸಭಾ ಚುನಾವಣೆ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಚುನಾವಣೆ ದೇಶದ ಪ್ರತಿಷ್ಠೆಯೂ ಆಗಿದೆ. ಸುಳ್ಳು ಹೇಳುವ ಬಿಜೆಪಿಯವರನ್ನು ಜನರು ಮನೆಗೆ ಕಳುಹಿಸುತ್ತಾರೆ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದಿಲ್ಲ. ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರಿಗೆ ಹಿಂದು ವಿಚಾರದ ಬಗ್ಗೆನೇ ಮಾತನಾಡುವುದನ್ನ ಬಿಟ್ಟರೆ ಏನೂ ಗೊತ್ತಿಲ್ಲ ಎಂದು ಹರಿಹಾಯ್ದರು.

Latest Videos

undefined

ಬೆಳಗಾವಿ: ಬೆಳ್ಳಿಕಿರೀಟ, ಪೇಟಾ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಅಧಿಕಾರಿಗಳ ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಶಾಮನೂರು ಶಿವಶಂಕರಪ್ಪ ಹೇಳಿಕೆ ವೈಯಕ್ತಿಕವಾದದ್ದು. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಬಿಜೆಪಿಯವರು ತಮ್ಮಲ್ಲಿನ ಭ್ರಷ್ಟಾಚಾರದ ಬಗ್ಗೆ ಮೊದಲು ಮಾತನಾಡಿ ನಂತರ ಬೇರೆಯವರಿಗೆ ಬುದ್ಧಿ ಹೇಳಲಿ. ರಾತ್ರೋರಾತ್ರಿ ರೂ.500,1000 ಮುಖಬೆಲೆಯ ನೋಟ್ ಬ್ಯಾನ್ ಮಾಡಿ ₹ 3 ಲಕ್ಷ ಕೋಟಿ ಕಪ್ಪುಹಣ ವೈಟ್ ಮಾಡಿದ್ದಾರೆ. ಇದರಲ್ಲಿ ಭಾಗಿಯಾದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ದ್ವಾರಕಾ ಕಾರಿಡಾರ್‌ನ 18 ಕಿ.ಮೀ ರಸ್ತೆಗೆ ₹250 ಕೋಟಿ ವೆಚ್ಚ ಕೇಂದ್ರ ಸರ್ಕಾರದ ಅಡಿಯಲ್ಲಿ ಸಿಎಜಿ ದೋಷಿಸಿದೆ. ಮಧ್ಯಪ್ರದೇಶದಲ್ಲಿ ಪಿಎಂ ಸ್ವಾಸ್ಥ್ಯ ಯೋಜನೆಯಲ್ಲಿ ಬಿಜೆಪಿ ಸಂಸದರೊಬ್ಬರ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಸಿ, 7 ಲಕ್ಷ ಫಲಾನುಭವಿಗಳನ್ನು ತೋರಿಸಿ ಸತ್ತವರ ನೆತ್ತಿಯ ಮೇಲೆ ಬೆಣ್ಣೆ ತಿಂದಿದ್ದಾರೆ. ಇಂತಹ ಹಲವು ಭ್ರಷ್ಟಾಚಾರ ಬಿಜೆಪಿ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಎಲ್ಲವೂ ಮೋದಿ, ಬಿಜೆಪಿ ಮತ್ತು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಅನುಕೂಲವಾಗಿದೆ. ದೇಶದ ಬಡ ರೈತರಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಥವಾ ನಿರುದ್ಯೋಗಿಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಮಾದರಿ ಇಎಸ್‌ಐ ಆಸ್ಪತ್ರೆ

ಬೆಳಗಾವಿಯಲ್ಲಿ ಅತ್ಯಾಧುನಿಕ ಮಾದರಿಯ ಇಎಸ್‌ ಐ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ಕರ್ನಾಟಕದಲ್ಲಿ ಜೊಮಾಟೊ, ಸ್ವಿಗ್ಗಿ, ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಸೇವೆಗಳನ್ನು ಒದಗಿಸುವ ಖಾಸಗಿ ಕಂಪನಿಗಳಲ್ಲಿ 3 ರಿಂದ 4 ಲಕ್ಷ ಉದ್ಯೋಗಿಗಳನ್ನು ಹೊಂದಿವೆ. ಅವರಿಗೆ ಕಾರ್ಮಿಕ ಇಲಾಖೆ ಮೂಲಕ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಸಂತೋಷ ಲಾಡ್‌ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಫ್‌ ಸೇಠ್, ಮಹೇಂದ್ರ ತಮ್ಮಣ್ಣವರ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಕಮಿಟಿ ಅಧ್ಯಕ್ಷ ವಿನಯ ನಾವಲಗಟ್ಟಿ ಮೊದಲಾದವರು ಇದ್ದರು.

click me!