
ವಿಜಯಪುರ (ಡಿ.21): ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಒಂದು ಸಾವಿರ ಹಾಗೂ ನೇರ ನೇಮಕಾತಿ 9000 ಸೇರಿದಂತೆ ಹತ್ತು ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದರು. ನಗರದ ದರಬಾರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 102 ನೂತನ ನಗರ ಸಾರಿಗೆ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ನಗರಗಳ ವ್ಯಾಪ್ತಿ ವೃದ್ಧಿಸುತ್ತಿದೆ. ಬೆಳೆಯುತ್ತಿರುವ ನಗರಗಳಲ್ಲಿನ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಮತ್ತು ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿ 112 ಬಸ್ ಹಂಚಿಕೆ ಮಾಡಲಾಗಿದೆ. ಪ್ರಸ್ತುತವಾಗಿ ನೂತನ 102 ಹೊಸ ನಗರ ಸಾರಿಗೆ ವಾಹನ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ 27 ಬಸ್‌ಗಳು ವಿಜಯಪುರ ವಿಭಾಗಕ್ಕೆ ಹಂಚಿಕೆಯಾಗಿದ್ದು ಇಂದು ನೂತನ ಸಾರಿಗೆ ವಾಹನಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ಎರಡು ತಿಂಗಳಲ್ಲಿ 20 ನಾನ್ ಎಸಿ ಸ್ಲೀಪರ್, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಸೇರಿದಂತೆ ಒಟ್ಟು 56 ಹೊಸ ವಾಹನಗಳ ಖರೀದಿಗೆ ಆದೇಶ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಂತ-ಹಂತವಾಗಿ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದರಿಂದ ನಗರದಿಂದ ನಗರಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಕೆಕೆಆರ್‌ಟಿಸಿ 400 ಬಸ್‌ಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂದಿನ ಎರಡ್ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ 2000 ಬಸ್‌ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಈ ಪೈಕಿ ಕೆಕೆಆರ್‌ಟಿಸಿಗೆ 400 ಬಸ್‌ಗಳನ್ನು ಹಾಗೂ ಕೆಎಸ್‌ಆರ್‌ಟಿಸಿಗೆ 900, ವಾಯುವ್ಯ ಕರ್ನಾಟಕ ಸಾರಿಗೆಗೆ 700 ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು ಪಿಎಂ ಇಸೇವಾ ಯೋಜನೆಯಡಿ 225 ವಿದ್ಯುತ್ ಚಾಲಿತ್ ಬಸ್‌ಗಳನ್ನು ಖರೀದಿಸಲಾಗುತ್ತಿದ್ದು, ಈ ಪೈಕಿ ಕಲ್ಬುರ್ಗಿ 100, ವಿಜಯಪುರಕ್ಕೆ 75 ಹಾಗೂ ಬಳ್ಳಾರಿಗೆ 50 ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು.
-ರಾಮಲಿಂಗಾ ರೆಡ್ಡಿ, ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.