
ರಾಮನಗರ (ಡಿ.21): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಇಚ್ಛಾಶಕ್ತಿ ಮತ್ತು ಪರಿಶ್ರಮದಿಂದ ಹೇಮಾವತಿ ನೀರು ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಮಾಗಡಿ ಕೆರೆಗಳಿಗೆ ಹರಿದಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್‌ನಿಂದ ಮಾಗಡಿ ತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಶ್ರೀರಂಗ ಯೋಜನೆಯಾಗಿದೆ. ಇದರ ಜೊತೆಗೆ ಶೀಘ್ರದಲ್ಲೇ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕೂಡಾ ಆರಂಭವಾಗುತ್ತದೆ. ಶ್ರೀರಂಗ ಯೋಜನೆ ಸಾಕಾರಕ್ಕೆ ಡಿಕೆ ಸಹೋದರರ ಇಚ್ಛಾಶಕ್ತಿ ಪ್ರಮುಖ ಕಾರಣ ಎಂದರು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮಾಗಡಿಗೆ ಹೇಮಾವತಿ ನೀರು ಬರಲ್ಲ, ಅದೊಂದು ಬೋಗಸ್ ಸ್ಕೀಂ ಅಂತ ಹೇಳಿದ್ದರು. ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಸಹ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದಾಗ ಮಾಗಡಿಗೆ ಹೇಮಾವತಿಯಿಂದ ನೀರು ಬರುವುದಿಲ್ಲ ಎಂದು ಹೇಳಿದ್ದರು. ಕುಮಾರಸ್ವಾಮಿ ಅವರು ಈ ಡವ್ ಮತ್ತು ಸುಳ್ಳು ರಾಜಕಾರಣ ಬಿಡಬೇಕು ಎಂದು ಹೇಳಿದರು. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡುತ್ತಿದ್ದರು. ಆದರೂ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರಿಗೆ ಕೆಲಸ ಮಾಡಲು ಇಚ್ಛಾಶಕ್ತಿ ಇರಲಿಲ್ಲ. ಕೇವಲ ಬುರುಡೆ ಹೊಡೆಯುವವರು, ಕಣ್ಣೀರು ಸುರಿಸುವವರಿಂದ ಅಭಿವೃದ್ಧಿ ಆಗಲ್ಲ.
ನಮ್ಮ ಜಿಲ್ಲೆ ಅದೋಗತಿಗೆ ಹೋಗಲು ಕುಮಾರಸ್ವಾಮಿ ಕಾರಣ. ಜನ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು. ಮಂಡ್ಯದಲ್ಲಿ 100 ಎಕರೆ ಜಾಗ ಕೊಡಿ ಕೈಗಾರಿಕೆ ತರುತ್ತೇವೆ ಎಂದಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನಸ್ಸು ಮಾಡಿದರೆ ಅವರ ಸ್ವಂತ ಹಣದಲ್ಲಿಯೇ 100 ಎಕರೆ ಜಾಗ ಖರೀದಿ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಇದರಿಂದ ಮಂಡ್ಯ ಜನರ ಋಣ ತೀರಿಸಿದಂತಾಗುತ್ತದೆ. ಇದು ಆಗದಿದ್ದರೆ ಹೇಳಲಿ, ನಾವೇ ರೈತರ ಬಳಿ ಭಿಕ್ಷೆ ಬೇಡಿ ಹಣ ಕೊಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಡಿನ್ನರ್ ಪಾರ್ಟಿ ಹೆಸರಿನಲ್ಲಿ ಯಾರೂ ರಾಜಕೀಯ ಮಾಡುತ್ತಿಲ್ಲ. ಇದೆಲ್ಲಾ ಮಾಧ್ಯಮಗಳ ಊಹೆ ಅಷ್ಟೆ, ನಮ್ಮನ್ನೂ ಡಿನ್ನರ್ ಪಾರ್ಟಿಗೆ ಕರೆದಿದ್ದರು, ಕಾರಣಾಂತರಗಳಿಂದ ಹೋಗಲಾಗಲಿಲ್ಲ, ಡಿನ್ನರ್ ಪಾರ್ಟಿ ಯಾರೂ ಮಾಡಿದರೆ ನಮಗೇನು, ನಮಗೆ ಊಟ ಸಿಕ್ಕರೆ ಸಾಕು ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹಾಸ್ಯ ಚಟಾಕಿ ಹಾರಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಸಿದಂತೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸದ್ಯದಲ್ಲಿಯೇ ಪರಿಹಾರ ಸೂಚಿಸಲಿದೆ.
ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅನಗತ್ಯವಾಗಿ ಮಾತನಾಡಿ ಗೊಂದಲ ಸೃಷ್ಟಿಸುವವರ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು. ಬಿಜೆಪಿ ನಾಯಕರು ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷದವರು ಆಡಳಿತ ಪಕ್ಷದ ವಿರುದ್ಧವೇ ಮಾತನಾಡಬೇಕು. ಆದ್ದರಿಂದ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಅವರು ಹಾಗೆಯೇ ಹೇಳುತ್ತಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.