'ಸಮ್ಮಿಶ್ರ ಸರ್ಕಾರ ಬೀಳಿಸಿದ್ದೆ ಡಿ.ಕೆ. ಶಿವಕುಮಾರ್‌'

By Kannadaprabha News  |  First Published Oct 29, 2020, 8:47 AM IST

ಶಾಂತಿಯುತ ರಾಜಕಾರಣ ಬಿಜೆಪಿ ಸಿದ್ಧಾಂತ| ವೈಯಕ್ತಿಕ ನಿಂದನೆ ಬಿಟ್ಟು, ಪ್ರಚಾರ ನಡೆಸಲಿ| ಪ್ರಚೋದನಕಾರಿ ಹೇಳಿಕೆ ನೀಡುವುದು ಬೇಡ: ಅಶೋಕ| ಡಿಕೆಶಿ ಮಾತ್ರ ಒಕ್ಕಲಿಗರಾ?| ಪ್ರಚಾರ ಸಭೆಯಲ್ಲಿ ತಾಯಿಯನ್ನೇ ಮುನಿರತ್ನ ಮಾರಿಕೊಂಡರು ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಒಳ್ಳೆ ಸಂಸ್ಕೃತಿಯಲ್ಲ| 


ಬೆಂಗಳೂರು(ಅ.29): ಸಮ್ಮಿಶ್ರ ಸರ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮ್ಯಾಚ್‌ ಫಿಕ್ಸಿಂಗ್‌ ಮಾಡಿರುವ ಅನುಮಾನ ಮೂಡುತ್ತಿದ್ದು, ಸರ್ಕಾರ ಬೀಳಿಸಿದ್ದೆ ಶಿವಕುಮಾರ್‌ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮ್ಮಿಶ್ರ ಸರ್ಕಾರ ಬೀಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಹೀರೋ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದನ್ನು ನೋಡಿದರೆ ಡಿಕೆಶಿ ಅವರು ಮ್ಯಾಚ್‌ ಫಿಕ್ಸಿಂಗ್‌ ಮಾಡಿರುವ ಅನುಮಾನ ಇದೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ನೇರವಾಗಿ ಶಿವಕುಮಾರ್‌ ಕೂಡ ಕಾರಣ ಎಂದು ದೂರಿದ್ದಾರೆ.

Latest Videos

undefined

ಶಿರಾದಲ್ಲಿ ಕಾಂಗ್ರೆಸ್‌ ಸೋಲಬೇಕು ಎಂದು ಶಿವಕುಮಾರ್‌, ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ ಸೋಲಬೇಕು ಎಂದು ಸಿದ್ದರಾಮಯ್ಯ ಒಳತಂತ್ರ ರೂಪಿಸಿದ್ದಾರೆ. ಅಲ್ಲದೆ, ಖಾಲಿ ಇಲ್ಲದ ಖುರ್ಚಿಗೆ ಟವೆಲ್‌ ಹಾಕುವ ಪ್ರಯತ್ನ ನಿಲ್ಲಿಸಲಿ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಆಗುತ್ತಿಲ್ಲ. ಕೇವಲ ಪ್ರತಿಭಟನೆ ಮಾಡಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಆ ಪಕ್ಷಕ್ಕೆ ಮತ ಕೇಳಲು ಕಾರ್ಯಕರ್ತರಿಲ್ಲ, ಬೂತ್‌ಮಟ್ಟದಲ್ಲಿ ಏಜೆಂಟ್‌ ಇಲ್ಲ. ಹೊರಗಿನಿಂದ ಕರೆ ತಂದವರನ್ನು ಪ್ರತಿಭಟನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನೂರಿ ಕುಸ್ತಿ ಅಂದ್ರೆ ಏನು ಅಂತ ಅಶೋಕ್ ಅವರನ್ನೇ ಕೇಳ್ರಿ: ಡಿಕೆ ಸುರೇಶ್ ಟಾಂಗ್!

ಪ್ರಚಾರ ಸಭೆಯಲ್ಲಿ ತಾಯಿಯನ್ನೇ ಮುನಿರತ್ನ ಮಾರಿಕೊಂಡರು ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಒಳ್ಳೆ ಸಂಸ್ಕೃತಿಯಲ್ಲ. ಶಾಂತಿಯುತ ರಾಜಕಾರಣ ಮಾಡುವುದು ಬಿಜೆಪಿ ಸಿದ್ಧಾಂತ. ಕಾಂಗ್ರೆಸ್‌ ನಾಯಕರು ವೈಯಕ್ತಿಕ ನಿಂದನೆ ಬಿಟ್ಟು, ಪ್ರಚಾರ ನಡೆಸಲಿ. ಪ್ರಚೋದನಕಾರಿ ಹೇಳಿಕೆ ನೀಡುವುದು ಬೇಡ. ಸೋಲಿನ ಹತಾಶೆಗೊಳಗಾಗಿ ಕಾಂಗ್ರೆಸ್‌ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ. ಶಿರಾ ಮತ್ತು ಆರ್‌.ಆರ್‌.ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಲಿದ್ದಾರೆ. ಯಡಿಯೂರಪ್ಪ ಅವರೇ ನಮ್ಮ ನಾಯಕರಾಗಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.

ಡಿಕೆಶಿ ಮಾತ್ರ ಒಕ್ಕಲಿಗರಾ?

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಕಪಾಲ ಬೆಟ್ಟದಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಈ ಬಗ್ಗೆ ಹೋರಾಟಗಳು ನಡೆದು, ಸಂಘಟನೆಗಳು ಕೋರ್ಟ್‌ ಮೆಟ್ಟಿಲೇರಿವೆ. ಶಿವಕುಮಾರ್‌ ನಾನು ಒಕ್ಕಲಿಗ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ನಾವೆಲ್ಲಾ ಏನು? ಕಾಲಭೈರವೇಶ್ವರ ಯಾರು? ಬೆಟ್ಟದಲ್ಲಿ ಡಿ.ಕೆ.ಶಿವಕುಮಾರ್‌ ಮಾಡಿದ್ದು ಏನು. ಕಪಾಲಬೆಟ್ಟಕಾಲಭೈರವೇಶ್ವರನ ಬೆಟ್ಟನಾ ಅಥವಾ ಯೇಸು ಬೆಟ್ಟನಾ ಎಂದು ಡಿ.ಕೆ.ಶಿವಕುಮಾರ್‌ ಉತ್ತರಿಸಲಿ. ಅಲ್ಲಿ ತನಕ ತಮ್ಮ ಜೇಬಿನಲ್ಲಿರುವ ಕಾರ್ಡ್‌ಗಳನ್ನು ಹಾಗೆಯೇ ಇಟ್ಟುಕೊಂಡರೆ ಒಳಿತು ಎಂದು ಛೇಡಿಸಿದರು.
 

click me!