ಜನರ ಪ್ರೀತಿ ವಿಶ್ವಾಸ ಕಾಪಾಡಿಕೊಳ್ಳುತ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ| ಸಭೆಯಲ್ಲಿ ಗದ್ಗದಿತರಾದ ಕುಸುಮಾ| ನೀವು ತೋರಿದ ಪ್ರೀತಿ, ವಿಶ್ವಾಸ, ಗೌರವಕ್ಕೆ ಎಂದಿಗೂ ಚ್ಯುತಿ ತರದಂತೆ ಕೆಲಸ ಮಾಡುತ್ತೇನೆ|
ಬೆಂಗಳೂರು(ಅ.29): ನಾನು ಕೇವಲ ಭರವಸೆ ನೀಡುವುದಿಲ್ಲ, ನುಡಿದಂತೆ ನಡೆಯುತ್ತೇನೆ. ಕೊಟ್ಟ ಭರವಸೆಯಂತೆ ಸದಾ ಜನರೊಟ್ಟಿಗಿದ್ದು ಅವರ ಕಷ್ಟಗಳನ್ನು ಪರಿಹರಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಕಠಿ ಬದ್ಧವಾಗಿ ದುಡಿಯುತ್ತೇನೆ. ಜನ ಸೇವೆಗೆ ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ರಾಜರಾಜೇಶ್ವರಿ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬುಧವಾರ ಕ್ಷೇತ್ರದ ಜ್ಞಾನಭಾರತಿ ವಾರ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಪಕ್ಷದ ಹಲವು ನಾಯಕರೊಂದಿಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ, ಪ್ರಚಾರ ಸಭೆ ನಡೆಸಿದ ಕುಸುಮಾ, ಕೆಲವೆಡೆ ಮುಂಜಾನೆಯೇ ಪಾರ್ಕ್‌ಗಳಿಗೆ ತೆರಳಿ ವಾಯುವಿಹಾರಕ್ಕೆ ಬಂದಿದ್ದ ಮತದಾರರಲ್ಲಿ ಮತಯಾಚಿಸಿದರು.
undefined
ಸಿದ್ದು ಧಾಟಿ:
ಈ ವೇಳೆ, ಮತದಾರರನ್ನುದ್ದೇಶಿಸಿ ಮಾತನಾಡಿದ ಕುಸುಮಾ ಅವರು ಥೇಟ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧಾಟಿಯಲ್ಲಿ ‘ನಾನು ಕೇವಲ ಭರವಸೆ ನೀಡಿ ಹೋಗುವವಳಲ್ಲ. ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಒಂದೇ ಒಂದು ಅವಕಾಶ ಮಾಡಿಕೊಡಿ ನುಡಿದಂತೆ ನಡೆಯುತ್ತೇನೆ. ನೀವು ತೋರಿದ ಪ್ರೀತಿ, ವಿಶ್ವಾಸ, ಗೌರವಕ್ಕೆ ಎಂದಿಗೂ ಚ್ಯುತಿ ತರದಂತೆ ಕೆಲಸ ಮಾಡುತ್ತೇನೆ’ ಎಂದು ವಾಗ್ದಾನ ನೀಡಿದ್ದಾರೆ.
ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ ಅಂತ ಬಿಜೆಪಿಯವರಿಗೆ ಗೊತ್ತಿಲ್ಲ ಅಂತ ಕಾಣ್ಸತ್ತೆ: ಕುಸುಮಾ
ನಾನೊಬ್ಬ ನೊಂದ ಮಹಿಳೆಯಾಗಿ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಲು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಿಮ್ಮ ನಿರೀಕ್ಷೆಯನ್ನು ನಾನು ಹುಸಿ ಮಾಡುವುದಿಲ್ಲ. ನಿಮ್ಮ ಮನೆ ಮಗಳಿಗೆ ನೀವು ಹೇಗೆ ಪೋ›ತ್ಸಾಹ ನೀಡುತ್ತೀರೋ ಅದೇ ರೀತಿ ನನಗೂ ಪೋ›ತ್ಸಾಹಿಸಿ, ಆಶೀರ್ವಾದ ಮಾಡಿ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಯೋಜನೆ, ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಇದು ಸಾಕಾರಗೊಳ್ಳಲು ನಿಮ್ಮ ಬೆಂಬಲ ಅಗತ್ಯ. ನ.3ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಜನರ ಪ್ರೀತಿಗೆ ಕಣ್ಣೀರಾದ ಕುಸುಮಾ!
ಕ್ಷೇತ್ರದಲ್ಲಿ ಬುಧವಾರ ನಡೆದ ಮಂಗಳಮುಖಿಯರ ಸಭೆಯಲ್ಲಿ ಜನರಿಂದ ತಮಗೆ ಸಿಗುತ್ತಿರುವ ಪ್ರೀತಿ ವಿಶ್ವಾಸವನ್ನು ನೆನೆದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಗದ್ಗದಿತರಾದ ಘಟನೆ ನಡೆಯಿತು.
ಮಂಗಳಮುಖಿಯರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕುಸುಮಾ ಅವರು, ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರು ನನ್ನ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಮಹಿಳೆಯರು ಅರಿಶಿನ ಕುಂಕುಮ ಇಟ್ಟು, ಅವರೇ ಹೂ ಮುಡಿಸಿ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. 2015ರ ಘಟನೆ ನಂತರ ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವಿತ್ತು. ಆದರೆ, ಇಂದು ಎಲ್ಲೇ ಹೋದರು ಸ್ವತಃ ಮಹಿಳೆಯರೇ ಬಂದು ಅರಿಶಿಣ-ಕುಂಕುಮ ನೀಡಿ ಹೂ ಮುಡಿಸಿ ಆಶೀರ್ವದಿಸುತ್ತಿರುವುದರಿಂದ ಎಲ್ಲೋ ಒಂದು ಕಡೆ ಸಂತೋಷ ಆಗುತ್ತಿದೆ. ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದೇನೆ. ಅರಿಶಿಣ ಕುಂಕುಮದ ವಿಚಾರದಲ್ಲಿ ಒಬ್ಬ ಮಹಿಳೆಯಾಗಿ ನಾನು ಬಹಳ ನೊಂದಿದ್ದೇನೆ. ನೋವು ಅನುಭವಿಸಿದ್ದೇನೆ ಎಂದು ಗದ್ಗದಿತರಾಗಿ ಕಣ್ಣೀರು ಸುರಿಸಿದರು.
ಸಭೆಯಲ್ಲಿ ಗದ್ಗದಿತರಾದ ಕುಸುಮಾ
ಈ ವೇಳೆ ಸಭೆಯಲ್ಲಿದ್ದ ಮಹಿಳೆಯರು ಅವರನ್ನು ಸಮಾಧಾನ ಪಡಿಸಿದರು ಬಳಿಕ ಸಾವರಿಸಿಕೊಂಡು ಮಾತು ಮುಂದುವರೆಸಿದ ಕುಸುಮಾ ಅವರು, 2015ರಲ್ಲಿ ಯಾವ ದೇಶದ ಜನ ನನ್ನ ಅಸಹಾಯಕ ಸ್ಥಿತಿಯನ್ನು ಕಂಡಿತ್ತೋ ಇಂದು ಅದೇ ಮಹಿಳೆಯರು ನನ್ನ ಶಕ್ತಿಯಾಗಿ ನಿಂತಿದ್ದಾರೆ. ನನ್ನದು ಯಾವ ಪೂರ್ವಜನ್ಮದ ಪುಣ್ಯವೋ ಏನೋ. ನನ್ನ ಮೊದಲ ಚುನಾವಣಾ ಸ್ಪರ್ಧೆಯಲ್ಲೇ ನಿರೀಕ್ಷೆಗೂ ಮೀರಿದ ಜನ ಬೆಂಬಲ ಸಿಗುತ್ತಿದೆ. ಜನ ನನ್ನನ್ನು ತಮ್ಮ ಮನೆ ಮಗಳಂತೆ ಕಾಣುತ್ತಿದ್ದಾರೆ. ನಿಮ್ಮ ಪ್ರೀತಿ ಕಂಡು ಹೆಮ್ಮೆಯಾಗುತ್ತಿದೆ. ನೀವು ನನ್ನ ಶಕ್ತಿಯಾಗಿರುವಾಗ ನಾನು ಕುಗ್ಗುವುದಿಲ್ಲ. ಸಧೃಢವಾಗಿ ನಿಲ್ಲುತ್ತೇನೆ. ನಾವು ಮನುಷ್ಯರನ್ನು ಮನುಷ್ಯರನ್ನಾಗಿ ನೋಡೋಣ. ಲಿಂಗದಿಂದ ತಾರತಮ್ಯ ಮಾಡುವುದು ಬೇಡ ಎಲ್ಲರ ಗೌರವದಿಂದ ನೋಡೋಣ. ಮಂಗಳಮುಖಿಯರ ಹೋರಾಟಗಳಲ್ಲಿ ಸದಾ ಭಾಗಿಯಾಗುತ್ತೇನೆ. ನಾನು ನಿಮ್ಮ ಗೌರವ ರಕ್ಷಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.