ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ನನ್ನ ಸಹೋದರ ಎಂದು ರಾಜು ಕಪನೂರ್ ಉದ್ದೇಶಿಸಿ ಹೇಳಿರುವ ವಿಡಿಯೋ, ಶಾಸಕ ಮತ್ತಿಮಡು ಮತ್ತು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಅವರೊಂದಿಗೆ ಇರುವ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ಜ.01): ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಂಚಾಳ ಬರೆದಿದ್ದ ಎನ್ನಲಾಗಿರುವ ಡೆತ್ ನೋಟ್‌ನಲ್ಲಿ ಹೆಸರಿರುವ ರಾಜು ಕಪನೂರಗೆ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಹೆಚ್ಚು ಪರಮಾಪ್ತರು ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಸವರಾಜ್ ಮತ್ತಿಮಡು ಅವರ ರಾಜೀನಾಮೆ ಯಾವಾಗ ಪಡೆಯುತ್ತೀರಿ ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದಾರೆ.
ಬಿಜೆಪಿ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಖರ್ಗೆ, ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ನನ್ನ ಸಹೋದರ ಎಂದು ರಾಜು ಕಪನೂರ್ ಉದ್ದೇಶಿಸಿ ಹೇಳಿರುವ ವಿಡಿಯೋ, ಶಾಸಕ ಮತ್ತಿಮಡು ಮತ್ತು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಅವರೊಂದಿಗೆ ಇರುವ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ದುರಂಹಕಾರ ಮಾತಿನಲ್ಲೇ ಗೊತ್ತಾಗುತ್ತದೆ: ಜಗದೀಶ್ ಶೆಟ್ಟರ್
ನಿಮ್ಮದೇ ಪಕ್ಷದ ಅಭ್ಯರ್ಥಿಗಳು ಯಾರು, ನಿಮ್ಮದೇ ಪಕ್ಷದ ಶಾಸಕರು ಯಾರು, ನಿಮ್ಮದೇ ಪಕ್ಷದ ಮುಖಂಡರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುವುದಾದರೆ ಈ ಫೋಟೋಗಳಲ್ಲಿ ಇರುವ ನಿಮ್ಮವರನ್ನು ಗುರುತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಹಲವು ಬಿಜೆಪಿ ಮುಖಂಡರು, ಶಾಸಕರು ರಾಜು ಕಪನೂರಗೆ ಪರಮಾಪ್ತರಿದ್ದಾರೆ, ಅವರ ರಾಜೀನಾಮೆಯನ್ನು ಯಾವಾಗ ಕೇಳುವಿರಿ ಎಂದು ಬಿಜೆಪಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಕಲಬುರಗಿಯ ತಮ್ಮ ಮನೆಗೆ ಮುತ್ತಿಗೆ ಹಾಕಲು ಬರುವಾಗ ವಿಜಯೇಂದ್ರರವರು ತಮ್ಮ ಪಕ್ಷದ ಯಾವ ಯಾವ ಶಾಸಕರು ರಾಜು ಕಪನೂರ ಜೊತೆಗೆ ಆಪ್ತರಾಗಿದ್ದಾರೆ ಎನ್ನುವ ಬಗ್ಗೆ ಹೋಮ್ ವರ್ಕ್ ಮಾಡಿಕೊಂಡು ಬರುವುದು ಉತ್ತಮ. ಕಲಬುರಗಿ ಮನೆಗೆ ಮುತ್ತಿಗೆಗೆ ಬರುವಾಗ ಈ ಎಲ್ಲಾ ಫೋಟೋಗಳನ್ನೂ ಹಿಡಿದು ಬರಬೇಕು ಎಂದು ಸಚಿವ ಖರ್ಗೆ ಬಿವೈವಿಗೆ ಮನವಿ ಮಾಡಿದ್ದಾರೆ.
ಪ್ರಿಯಾಂಕ್ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗಿಲ್ಲ: ಶರಣಗೌಡ
ಕಮಲಾಪುರ: ಸಚಿವ ಪ್ರಿಯಾಂಕ್ ಖರ್ಗೆ ಸತತ ಮೂರು ಬಾರಿ ಶಾಸಕರಾಗಿ, ವಿವಿಧ ಇಲಾಖೆ ಸಚಿವರಾಗಿ ಜನಪರವಾದ ಕೆಲಸ ಮಾಡುತ್ತಿರುವುದು ಬಿಜೆಪಿ ಮುಖಂಡರಿಗೆ ಅರಗಿಸಿಕೊಳ್ಳಲಾಗದೆ ಪ್ರತಿಯೊಂದು ವಿಷಯಕ್ಕೂ ಸಚಿವರ ಹೆಸರು ಥಳಕು ಹಾಕಿ ರಾಜೀನಾಮೆ ಕೇಳುತ್ತಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶರಣಗೌಡ ಡಿ. ಪಾಟೀಲ್ ಹೇಳಿದ್ದಾರೆ.
ಪಟ್ಟಣದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿರುವ ಅವರು, ಇತ್ತೀಚೆಗೆ ಬೀದರ್ ಜಿಲ್ಲೆ ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಪ್ರಿಯಾಂಕ್ ಖರ್ಗೆ ಆಪ್ತರ ಹೆಸರು ಡೆತ್ ನೋಟ್‌ಲ್ಲಿ ಹೆಸರು ಉಲ್ಲೇಖವಾಗಿದೆ. ಆಪ್ತರು ಎನ್ನುವ ಒಂದೇ ಕಾರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಮುಖಂಡರು ಸಚಿವರ ರಾಜೀನಾಮೆ ಕೇಳುವ ಮೂಲಕ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ವಿರೋಧ ಪಕ್ಷದ ನಾಯಕರಿಗೆ ಪ್ರಶ್ನಿಸಿದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಸಚಿವ ಪ್ರಿಯಾಂಕ್ ವಿರುದ್ಧ ಪೋಸ್ಟರ್ ವಾರ್!
ಸಚಿವ ಪ್ರಿಯಾಂಕ್ ಖರ್ಗೆ ಅವರೇ ಖುದ್ದಾಗಿ ಗೃಹ ಸಚಿವರಿಗೆ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಇಲಾಖೆಗೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣೀಕರ್ತರು ಯಾರೇ ಆಗಲಿ ಅವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲೆಂದು ಸಚಿವರು ಮೊದಲ ದಿನದಿಂದಲೂ ಹೇಳುತ್ತಿದ್ದಾರೆ.
ಸಂಪೂರ್ಣ ತನಿಖೆ ಮುಗಿಯುವವರೆಗೂ ಸಹನೆ ತೋರದೆ, ಬಿಜೆಪಿಯವರು ಸಚಿವರ ರಾಜೀನಾಮೆ ಕೇಳುವ ಮುಖಾಂತರ ಸಚಿನ್ ಸಾವಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಇಂತಹ ನೂರು ಸುಳ್ಳು ಆರೋಪಗಳನ್ನು ಬಿಜೆಪಿಯವರು ಮಾಡಿದ್ದರು. ಪ್ರಿಯಾಂಕ್ ಖರ್ಗೆ ಹೀಗೆ ಬಿಜೆಪಿ ನಾಯಕರು ವಿನಾ ಕಾರಣ ಆರೋಪ ಮಾಡುತ್ತಿರುವುದು ಮುಂದುವರಿದರೆ ಬಿಜೆಪಿ ನಾಯಕರ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಪಾಟೀಲ್ ಎಚ್ಚರಿಸಿದ್ದಾರೆ.