
ಬೆಂಗಳೂರು (ಅ.20): ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಕುರಿತಂತೆ ಹೈಕೋರ್ಟ್ ನಿರ್ದೇಶನದಿಂದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇವತ್ತೇ ಪಥ ಸಂಚಲನ ನಡೆಸಬಹುದು ಎಂದು ಕೋರ್ಟ್ ಆದೇಶ ನೀಡಿಲ್ಲ. ವಿಜಯೇಂದ್ರ ಅವರೇ, ಸ್ವಂತ ಬುದ್ಧಿ ಉಪಯೋಗ ಮಾಡಿ ಹೇಳಿಕೆ ನೀಡದಿದ್ದರೆ ನಗೆಪಾಟಲಿಗೀಡಾಗುತ್ತೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
ತಾವು ಕೇಳಿರುವ 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥ ಸಂಚಲನ ಮಾಡಲಿ. ಸುಮ್ಮನೆ ರಿಪಬ್ಲಿಕ್ ಆಫ್ ಕಲಬುರಗಿ, ರಿಪಬ್ಲಿಕ್ ಆಫ್ ಚಿತ್ತಾಪುರ, ಸರ್ವಾಧಿಕಾರಿ ಧೋರಣೆ ಎಂದು ಕರೆಯುತ್ತೀರಾ? ಕೋರ್ಟ್ ಆದೇಶದಲ್ಲಿ ಇವತ್ತು ಪಥ ಸಂಚಲನ ಮಾಡಬೇಕು ಎಂದು ಎಲ್ಲಿ ಹೇಳಿದೆ? ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಹೇಳಿದೆ. ಮೆರವಣಿಗೆ ಮಾಡಲು ಭೀಮ್ ಆರ್ಮಿ, ದಲಿತ ಪ್ಯಾಂಥರ್ಸ್, ಆರ್‌ಎಸ್‌ಎಸ್, ಕಾಂಗ್ರೆಸ್‌ಗೂ ಹಕ್ಕಿದೆ. ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.
ಪಥ ಸಂಚಲನದಲ್ಲಿ ಎಷ್ಟು ಜನ ಸೇರುತ್ತಾರೆ ಎಂಬ ಮಾಹಿತಿಯನ್ನು ತಹಸೀಲ್ದಾರ್‌ಗೆ ನೀಡಿಲ್ಲ. ಸ್ಥಳದ ಎನ್‌ಒಸಿ ಕೊಟ್ಟಿಲ್ಲ, ದಾಖಲೆ ನೀಡಿಲ್ಲ, ಅನುಮತಿ ಕೇಳಿಲ್ಲ, ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದ ಅವರು, ನನಗೆ ಬುದ್ಧಿ ಕಲಿಸಬೇಕೆಂದು ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ನಿರ್ಧರಿಸಲಾಗಿದೆ ಎಂದರು.
ಆರ್‌ಎಸ್‌ಎಸ್ ನಿಷೇಧ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಿಯೂ ಹೇಳಿಲ್ಲ. ಸರ್ಕಾರಿ ಜಾಗ, ಶಾಲಾ ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಎಂದು ಹೇಳಿದರು. ಕೆರಗೋಡು ಗಣೇಶೋತ್ಸವ ವೇಳೆ ಆರ್‌ಎಸ್‌ಎಸ್ ಸ್ಕೂಲ್‌ನಿಂದ ಡಿಜೆ ಹೊರಬಂತು. ಸ್ಕೂಲ್‌ಗೂ ಡಿಜೆಗೂ ಏನು ಸಂಬಂಧ. ಸ್ಕೂಲ್ ಮಕ್ಕಳಿಗೆ ಶಿಕ್ಷಣ ಕೊಡಬೇಕು. ರಾಜಕಾರಣ ಅಲ್ಲ. ಆರ್‌ಎಸ್‌ಎಸ್ ಕೋಮು ವಿಷಬೀಜ ಬಿತ್ತುತ್ತಿದೆ. ಅದಕ್ಕಾಗಿ ಸರ್ಕಾರಿ ಜಾಗ, ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಕೇಳಿದ್ದಾರೆ ಎಂದರು.
ಆರ್‌ಎಸ್‌ಎಸ್ ಯಾವ ದೇವಸ್ಥಾನ ಅಭಿವೃದ್ಧಿ ಮಾಡಿದ್ದಾರೆ, ಯಾವ ಹಿಂದುತ್ವ ಉಳಿಸುತ್ತಿದ್ದಾರೆ. ನಾವು ಗಣೇಶನಿಗೆ ದುಡ್ಡು ಕೊಡುವುದಿಲ್ಲವೇ, ಪೂಜೆ ಮಾಡಲ್ಲವೇ, ನೀವು ಮಾತ್ರ ಭಕ್ತರಾ? ನಿಮ್ಮದು ಡ್ರಾಮ, ನಮ್ಮದು ನಿಜವಾದ ಹಿಂದುತ್ವ ಎಂದು ಹರಿಹಾಯ್ದರು. ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋಮುದ್ವೇಷ ಸೃಷ್ಟಿಸಿ ಮುಚ್ಚಿ ಹಾಕುತ್ತಿದ್ದಾರೆ. ಕರಾವಳಿ ರೀತಿ ಮಂಡ್ಯದ ಮೇಲೂ ಪ್ರಯೋಗ ಮಾಡುತ್ತಿದ್ದಾರೆ. ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು. ನವೆಂಬರ್ ನಲ್ಲಿ ರಾಜಕೀಯ ಕ್ರಾಂತಿ ಆಗುವುದು ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರಿಗೂ 140 ಶಾಸಕರ ಬೆಂಬಲವಿದೆ. ಯಾರು, ಯಾವಾಗ ಏನಾಗಬೇಕು ಅನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.