
ಕೋಲಾರ (ಅ.20): ದೀಪಾವಳಿಯ ಕೊಡುಗೆ ಕೊಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ‘ಎ’ ಖಾತಾ ನೆಪದಲ್ಲಿ ₹15,000 ಕೋಟಿ ಸುಲಿಗೆ ಮಾಡಿ, ಅದರಿಂದ ಬೆಂಗಳೂರಿನ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಗುಂಡಿ ಮುಚ್ಚಲು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಬಿ’ ಖಾತಾದಿಂದ ‘ಎ’ ಖಾತಾಕ್ಕೆ ಪರಿವರ್ತನೆ ಮಾಡುವ ಅರ್ಜಿಗೆ ₹500 ಶುಲ್ಕ ವಿಧಿಸಲಾಗುತ್ತಿದ್ದು, ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿಗಳ ಸುಲಿಗೆ ಮಾಡುತ್ತಿದೆ. 30/40 ಅಳತೆಯ ನಿವೇಶನಕ್ಕೆ 4ರಿಂದ 8 ಲಕ್ಷ ರು.ವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10ರಿಂದ 13 ಸಾವಿರ ರು. ಅಷ್ಟೇ ಕಟ್ಟಬೇಕಿತ್ತು. ಈಗ ‘ಎ’ ಖಾತಾ ಮೂಲಕ ₹15,000 ಕೋಟಿ ವಸೂಲಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತೆ: ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುತ್ತೆ. ಯಾವುದೇ ಗೊಂದಲವಿಲ್ಲ. ಮೈತ್ರಿ ಗಟ್ಟಿಯಾಗಿದೆ. ಈಗಾಗಲೇ ದೇವೇಗೌಡರು ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು. ರಾಜ್ಯದಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಜೆಡಿಎಸ್, ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ, ಈ ಬಗ್ಗೆ ಹೋರಾಟ ಮಾಡುತ್ತೇವೆ. ಆದರೆ, ಸದನದಲ್ಲಿ ಕುಮಾರಸ್ವಾಮಿಯವರಂತಹ ನಾಯಕರ ಕೊರತೆ ಕಾಡುತ್ತಿದೆ. ಕುಮಾರಸ್ವಾಮಿಯವರು ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಜೆಡಿಎಸ್ ಮಂಕಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಯೋಗ್ಯತೆಗೆ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಆಗುತ್ತಿಲ್ಲ. ಬಿಡದಿಯಲ್ಲಿ ಅದೆಂತದೋ ಎಐ ಸಿಟಿ ಮಾಡುತ್ತೇವೆ ಅನ್ನುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರು ಗುಂಡಿ ಬಗ್ಗೆ ರಾಷ್ಟ್ರದ್ಯಂತ ಚರ್ಚೆ ಆಗುತ್ತಿದೆ. ಉಪಮುಖ್ಯಮಂತ್ರಿಗಳೇ ನಿಮ್ಮ ಯೋಗ್ಯತೆಗೆ ಮೊದಲು ಬೆಂಗಳೂರು ಗುಂಡಿ ಮುಚ್ಚಿ ಅದಕ್ಕೂ ಕೇಂದ್ರದಿಂದ ಹಣ ಕೊಡಿಸಬೇಕಾ ಹೇಳಿ ಕೊಡಿಸುತ್ತೇವೆ ಎಂದರು. ಈ ಟೌನ್‌ಶಿಪ್ ಯೋಜನಗೆ ನಿಮ್ಮ ಬಳಿ ಹಣ ಇದಿಯಾ. ರೈತರ ಜಮೀನನ್ನು ಖಾಸಗಿಯವರಿಗೆ ಅಡವಿಟ್ಟು ಹಣ ತರಲು ಹೋಗುತ್ತಿದ್ದೀರಿ.
9 ಸಾವಿರ ಎಕರೆಯಲ್ಲಿ ಎರಡು-ಮೂರು ಸಾವಿರ ಎಕರೆ ಸರ್ಕಾರಿ ಜಮೀನು ಬರುತ್ತದೆ ಎಂದು ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ಡಿ.ಕೆ.ಶಿವಕುಮಾರ್ ಅವರು ಸೌಜನ್ಯಕ್ಕಾಗದರು ರೈತರ ಜೊತೆ ಒಂದು ಸಭೆ ಮಾಡಿಲ್ಲ. ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಕಿಡಿಕಾರಿದರು. ಜಿಬಿಡಿಎಗೆ ನಿಮ್ಮ ಸಹೋದರನನ್ನು ಸದಸ್ಯನನ್ನಾಗಿ ಮಾಡಿದ್ದಾರೆ. ಈಗ ನಿಮ್ಮ ಸಹೋದರ ಜನಪ್ರತಿನಿಧಿಯಾ. ಹಾಲಿ ಸಂಸದರನ್ನು ಏಕೆ ಜಿಬಿಡಿಎಗೆ ಸದಸ್ಯರನ್ನಾಗಿ ಮಾಡಿಲ್ಲ. ಮುಂದೆ ಜಿಬಿಡಿಎಗೆ ನಿಮ್ಮ ಸಹೋದರನ ಅಧ್ಯಕ್ಷರನ್ನಾಗಿ ಮಾಡಲು ಹೀಗೆ ಮಾಡಿದ್ದೀರಿ. ನೀವು ಉದ್ದಾರ ಆಗೋದಕ್ಕೆ ಅಮಾಯಕ ರೈತರ ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.