ಮುಖ್ಯಮಂತ್ರಿಯಾಗುತ್ತಲೇ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಎಂಬ ಯೋಜನೆ ಜಾರಿಗೆ ತಂದು ರೈತರ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ: ಸಚಿವ ಪ್ರಭು ಚವ್ಹಾಣ್
ಬೀದರ್(ನ.16): ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಪಕ್ಷದ ಎಲ್ಲ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಕರೆ ಕೊಟ್ಟರು. ಅವರು ನಗರದ ಝೀರಾ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಗೊಂಡಿವೆ ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದರೆ ಈ ಹಿಂದೆ ಸುಭಾಷ ಕಲ್ಲೂರ ಜಿಲ್ಲಾಧ್ಯಕ್ಷರಿದ್ದಾಗ ಜಿಲ್ಲೆಯ 6 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಗೆಲವು ಸಾಧಿಸಿದಂತೆ ಈಗಲೂ ಅದು ಸಾಧ್ಯ ಎಂದರು.
ಮುಖ್ಯಮಂತ್ರಿಯಾಗುತ್ತಲೇ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಎಂಬ ಯೋಜನೆ ಜಾರಿಗೆ ತಂದು ರೈತರ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕಳೆದ 50 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಎಸ್‌ಸಿ/ಎಸ್‌ಟಿಗೆ ಸಿಎಂ ಅವರು ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಒಂದೇ ದಿನ 7,600 ಶಾಲಾ ಕೋಣೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇಂತಹ ಕಾಮನ್ ಮ್ಯಾನ್ ಮುಖ್ಯಮಂತ್ರಿಯ ಯೋಜನೆಗಳು ಎಲ್ಲ ವರ್ಗಗಳಿಗೆ ಸಹಕಾರಿಯಾಗಿವೆ ಎಂದರು.
ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ
ಪಶು ಸಂಗೋಪನಾ ಇಲಾಖೆಯ ಪುಣ್ಯ ಕೋಟಿ ಯೋಜನೆ ಜಾರಿಗೊಳಿಸಿ ಸುಮಾರು 100 ಕೋಟಿ ರು. ಅನುದಾನ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 100 ಗೋಶಾಲೆ ತೆರೆಯಲು ಯೋಜನೆ ಹಾಕಿಕೊಳ್ಳಲಾಗಿದೆ ಇಲ್ಲಿಯವರೆಗೆ 30 ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಭಾರತ ಜೋಡೋ ಮಾಡುವ ಬದಲು ಕಾಂಗ್ರೆಸ್ ಜೋಡೋ ಮಾಡಿಕೊಳ್ಳಲಿ ಎಂದ ಅವರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವದಲ್ಲದೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಸಂಕಲ್ಪ ತೊಡಬೇಕು. 2023ರ ಚುನಾವಣೆಯಲ್ಲಿ ಕೂಡ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಇದಕ್ಕಾಗಿ ಈಗಿನಿಂದಲೇ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಎಂದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದೆ. ಹೀಗಾಗಿ ನಾವು ಬಿಜೆಪಿ ಕಾರ್ಯಕರ್ತರಿದ್ದೇವೆ ಎಂಬ ಹೆಮ್ಮೆ ನಮಗಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 6ಕ್ಕೆ 6 ಸ್ಥಾನಗಳನ್ನು ಗೆಲ್ಲಲು ಸಂಕಲ್ಪ ಮಾಡಬೇಕಾಗಿದೆ.
ಬಿಜೆಪಿಯ ಒಬಿಸಿ ಸಮಾವೇಶ ಯಾವ ಪುರುಷಾರ್ಥಕ್ಕಾಗಿ: ಎಚ್‌ಎಂ ರೇವಣ್ಣ
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ:
ಬಿಜೆಪಿಯಿಂದ ಅನೇಕ ಯೋಜನೆಗಳು ಜಾರಿಗೊಂಡಿವೆ ಆದರೆ ಅದರ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ಇಲ್ಲ. ಅದನ್ನು ತಿಳಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು. ರಾಜ್ಯದ ಸುಮಾರು 2.5 ಕೋಟಿ ಜನರಿಗೆ ಯಶಸ್ವಿನಿ ಯೋಜನೆ ಕಾರ್ಡ ಕೊಟ್ಟಿದೆ. ಬೀದರ್ ಕ್ಷೇತ್ರದಲ್ಲಿ ನಮ್ಮ ತಂಡದಿಂದ 36 ಸಾವಿರ ಜನರ ಆಯುಷ್ಮಾನ ಭಾರತ ಕಾರ್ಡ್‌ಗಾಗಿ ನೋಂದಣಿ ಮಾಡಿಸಿದ್ದೇನೆ. 2553 ಜನರಿಗೆ ವಿಕಲಚೇತನರಿಗೆ ಪಿಂಚಣಿ ಮಾಡಿಸಿದ್ದೇನೆ 3 ತಿಂಗಳಿನಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿದ್ದೇನೆ ಎಂದು ತಿಳಿಸಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತಾಡಿದರು. ವಿಜಯಕುಮಾರ ಪಾಟೀಲ್ ಗಾದಗಿ ನಿರೂಪಿಸಿದರೆ ಮಲ್ಲಿಕಾರ್ಜುನ ಕುಂಬಾರ ವಂದಿಸಿದರು. ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕ ಶರಣು ಸಲಗರ, ಈಶ್ವರಸಿಂಗ್ ಠಾಕೂರ, ವಿದ್ಯಾಸಾಗರ ಶಾಬಾದಿ, ಡಾ. ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ಸೂರ್ಯಕಾಂತ ನಾಗಮಾರಪಳ್ಳಿ, ಶಿವರಾಜ ಗಂದಗೆ, ಗುರುನಾಥ ಜ್ಯಾಂತಿಕರ್, ಜಯಕುಮಾರ ಕಾಂಗೆ, ವಿಜಯಕುಮಾರ ಪಾಟೀಲ್ ಗಾದಗಿ, ಸೋಮನಾಥ ಪಾಟೀಲ್, ಅರಹಂತ ಸಾವಳೆ, ಮಲ್ಲಿಕಾರ್ಜುನ ಕುಂಬಾರ, ಶಶಿ ಹೊಸಳ್ಳಿ ಇದ್ದರು.