
ಮಂಡ್ಯ (ಮಾ.18): ಮುಖ್ಯಮಂತ್ರಿಯಾಗಲು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರೇ ನನ್ನ ಬಳಿ ಕೈಕಟ್ಟಿಕೊಂಡು ನಿಂತಿದ್ದರು. ಅಂದು ಜನ ಗೆಲ್ಲಿಸಿದ್ದಕ್ಕೆ ನಾನು ಸಚಿವನಾಗಿ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು. ನಗರದಲ್ಲಿ 43 ಕೋಟಿ ವೆಚ್ಚದಲ್ಲಿ ಇಲ್ಲಿನ ಫ್ಯಾಕ್ಟರಿ ಸರ್ಕಲ್ ಹಾಗೂ ಜಯಚಾಮರಾಜ ಒಡೆಯರ್ ಹೈಟೆಕ್ ಮಾದರಿ ವೃತ್ತ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದ ನಂತರ ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದದ್ದರು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಕಿಡಿಕಾರಿದರು.
ಸಾವಿರ ಕೋಟಿ ಅನುದಾನ ತಂದಿದ್ದೀನಿ ಎಂದು ಬರಿ ಬಾಯಲ್ಲಿ ಹೇಳುವುದಿಲ್ಲ. ಅಭಿವೃದ್ಧಿ ಬಗ್ಗೆ ನಾವು ಮಾತನಾಡಿ ಅನುದಾನ ತಂದು ಕೆಲಸ ಮಾಡುತ್ತಿದ್ದೇವೆ. ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ದುಂಬಾಲು ಬಿದ್ದಿದ್ದರು ಎಂದು ಹೇಳುವ ಅವರು, ಸಿಎಂ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿದ್ದರು. ಅವರಪ್ಪ, ಅವರ ಭಾವ ಬೇಡ ಎಂದಾಗ 39 ಜನ ಶಾಸಕರ ಬಳಿ ಅವರು ಹೇಗೆ ನಿಂತಿದ್ದರು ಅವರನ್ನೇ ಕೇಳಿ ಎಂದು ಪ್ರಶ್ನೆಗೆ ಉತ್ತರಿಸಿದರು. ನನ್ನನ್ನು ಜನ ಗೆಲ್ಲಿಸಿದ್ದಕ್ಕೆ ಮಂತ್ರಿ ಮಾಡಿದ್ದರು. ಈಗಲೂ ಜನ ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ. ಇದರಲ್ಲಿ ದುಂಬಾಲು ಬೀಳುವುದೇನಿದೆ.? ಜೆಡಿಎಸ್‌ನವರು ಹಳೇ ಭಾಷಣ ಹೊಡೆಯುತ್ತಿದ್ದಾರೆ. ಭಾಷಣದಲ್ಲಿ ಅವರು ಮುಂದೆ ಇದ್ದರೆ, ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿಕೆ ಅಥವಾ ನಿಖಿಲ್ ಸ್ಪರ್ಧೆ: ಸುಳಿವೇನು?
ನಾವು ಬರೀ ಬಾಯಲ್ಲಿ ಹೇಳಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ಕೆಲವರಿಗೆ ಮಂಡ್ಯ ಅಭಿವೃದ್ಧಿ ಬೇಕಿಲ್ಲ. ಹೊಸ ಫ್ಯಾಕ್ಟರಿ ಬೇಡ, ಕೃಷಿ ವಿವಿಯೂ ಬೇಡ ಅವರಿಗೆ, ಇವರು ಮೆಡಿಕಲ್ ಕಾಲೇಜನ್ನು ಶಿಫ್ಟ್ ಮಾಡಲು ಹೇಳುತ್ತಾರೆ. ಅಭಿವೃದ್ಧಿ ಆದರೆ ಜಿಲ್ಲೆ ಇವರ ಹಿಡಿತಕ್ಕೆ ಸಿಗಲ್ಲಿಲ್ಲವಲ್ಲ ಎಂದು ಡಿ.ಸಿ.ತಮ್ಮಣ್ಣರ ವಿರೋಧಕ್ಕೆ ಟಾಂಗ್ ನೀಡಿದರು. ಯಾರು ಯಾರ ಮನೆಯನ್ನೂ ಒಡೆದಿಲ್ಲ. ಯಾವಾಗ ಮನೆ ಒಡೆದಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಅವರ ತರಹ ಅಭ್ಯರ್ಥಿಯನ್ನು ಒಂದು ತಿಂಗಳ ನಂತರ ಕಾಂಗ್ರೆಸ್ ಹಾಕಿಲ್ಲ. ನಾವು ಮೊದಲೇ ಘೋಷಣೆ ಮಾಡಿದ್ದೇವೆ. ಅವರು ಇನ್ನೂ ಘೋಷಣೆ ಮಾಡಿಲ್ಲ. ಏಕೆಂದರೆ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ಅದಕ್ಕೆ ಡಾ. ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದರು.
ಜೆಡಿಎಸ್ ನವರು ಹೊಟ್ಟೆ ನೋವು ತಡೆಯಲಾರದೆ ಏನೇನೋ ಮಾತನಾಡುತ್ತಾರೆ. ಅದಕ್ಕೆ ವೈದ್ಯರೇ ಮೆಡಿಷನ್ ಕೊಡಬೇಕು. ಚುನಾವಣೆಯೆ ಷಡ್ಯಂತ್ರ, ಸ್ಟಾಟರ್ಜಿ, ಜನರು ನಮ್ಮನ್ನ ನಂಬಬೇಕು. ಜನ ಅವರನ್ನ ನಂಬಲಿಲ್ಲ, ನಮ್ಮ ಗ್ಯಾರಂಟಿ ನಂಬಿದರು. ಅವರ ಆಡಳಿತವನ್ನು ಜನ ಒಪ್ಪಲಿಲ್ಲ. ಮಲಗಿದ್ದರೂ, ಎದ್ದರೂ ಚಲುವರಾಯಸ್ವಾಮಿ ಜಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಟೀಕೆ ಮಾಡಿದರೆ ಅದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ. ಮಾಜಿ ಶಾಸಕ ಸುರೇಶ್‌ಗೌಡನ ಬಗ್ಗೆ ಮಾತನಾಡಲ್ಲ. ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥನಾಗಿದ್ದೆ. ನಾನು ಯಾರೊಂದಿಗೂ ಸೇರಿ ಚುನಾವಣೆ ಮಾಡಲಿಲ್ಲ. ಆಗ ಮೈತ್ರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗಲೂ ಜೆಡಿಎಸ್ - ಬಿಜೆಪಿ ಮೈತ್ರಿಯನ್ನು ಈ ಭಾಗದಲ್ಲಿ ಜನ ಒಪ್ಪಲ್ಲ. ಎದುರಾಳಿ ನೋಡಿ ನಾವು ಚುನಾವಣೆ ಮಾಡಲ್ಲ. ಯಾರೆ ಅಭ್ಯರ್ಥಿ ಆದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಜನರ ಮೇಲೆ ನಮಗೆ ನಂಬಿಕೆ ಇದೆ. ಬಿಜೆಪಿ-ಜೆಡಿಎಸ್ ಒಡೆದ ಮಡಿಕೆಯಾಗಿದೆವೆ. ಮೈತ್ರಿ ಧಿಕ್ಕರಿಸಿ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕುಮಾರ್‌ಗೆ ನೀಡಿದಷ್ಟೇ ಗೌರವ ಅಂಬರೀಶ್‌ಗೆ ಕೊಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
ಜಾತಿ ರಾಜಕಾರಣವನ್ನು ಜನರು ಒಪ್ಪಲ್ಲ: ಯಾರನ್ನೋ ಕೇಳಿ ನಾನು ತೀರ್ಮಾನ ಮಾಡಬೇಕಾಗಿಲ್ಲ. ಜನರ ಅಗತ್ಯಗಳಿಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಮಾತನ್ನು ಎಚ್‌ಡಿಕೆ ಹೇಳುತ್ತಾರೆ. ಹಾಗಾದರೆ ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಲ್ಲವೇ? ನಾವು ಒಕ್ಕಲಿಗರಲ್ಲವಾ?. ಜಾತಿ ರಾಜಕಾರಣವನ್ನು ಜನ ಈಗ ಒಪ್ಪಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಟ್ಟೆಪಾಡಿಗಾಗಿ ಜೆಡಿಎಸ್‌ನವರು ಬಿಜೆಪಿ ಜೊತೆ ಹೋಗಿದ್ದಾರೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಆ ಮಾತನ್ನು ನಾನು ಹೇಳಿದ್ದರೆ ಬೇರೆ ರೀತಿ ಹೇಳಿರುತ್ತೇನೆ ಅಷ್ಟೇ. ಬೆಂಗಳೂರು ಗ್ರಾಮಾಂತರ ಇವರ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಚಿಹ್ನೆ ಬಳಸದೇ ಬಿಜೆಪಿ ಚಿಹ್ನೆ ಬಳಸಿ ಡಾ.ಮಂಜುನಾಥ್ ಅವರನ್ನು ನಿಲ್ಲಿಸಿರುವುದು ಏಕೆ? ಮಂಜುನಾಥ್ ಅವರ ಬಗ್ಗೆ ಅಪಾರ ಗೌರವವಿದೆ. ಇವರ ಪಕ್ಷದ ಚಿಹ್ನೆ ಮೇಲೆ ವಿಶ್ವಾಸವಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.