
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.10): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಕರ್ಮಭೂಮಿಯಾಗಿರುವ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಗಾರಿಕೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೆಗಲಿಗೆ ವಹಿಸಿರುವುದು ಅಚ್ಚರ ಮೂಡಿಸಿದೆ. ಕನಕಪುರ(ಸಾತನೂರು - 3ಬಾರಿ) ಕ್ಷೇತ್ರದಿಂದ 8ನೇ ಬಾರಿ ಗೆದ್ದು ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಪಟ್ಟಅಲಂಕರಿಸಿರುವ ಡಿ.ಕೆ.ಶಿವಕುಮಾರ್ ಅವರೇ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಂದು ಎಲ್ಲರು ಭಾವಿಸಿದ್ದರು. ರಾಮಲಿಂಗಾರೆಡ್ಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆಂದು ಕೇಳಿ ಬಂದಿತ್ತು.
ಆದರೀಗ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅಲಂಕರಿಸಿ, ಹೊರಗಿನವರಾದ ರಾಮಲಿಂಗಾರೆಡ್ಡಿ ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಪಟ್ಟಕಟ್ಟಲಾಗಿದೆ. ಅಷ್ಟಕ್ಕೂ ರಾಮಲಿಂಗಾರೆಡ್ಡಿರವರು ಡಿಕೆ ಸಹೋದರರೊಂದಿಗೆ ಉತ್ತಮ ಒಡನಾಟವನ್ನೇ ಹೊಂದಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ, ವಿಧಾನ ಪರಿಷತ್ , ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಗಳ ಹಂಚಿಕೆ ನಡೆದಿದೆ ಎನ್ನಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಪ್ರತ್ಯೇಕ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೇ ನಾಲ್ಕು ನಿಗಮದ ಸಾರಥ್ಯ ನೀಡಲಾಗಿದೆ. ಇದರ ಜೊತೆಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯೂ ಹೆಗಲಿಗೆ ಬಿದ್ದಿದೆ.
ಇಂದು- ನಾಳೆ ಡಿ.ಕೆ.ಶಿವಕುಮಾರ್ ಮಧ್ಯಪ್ರದೇಶದಲ್ಲಿ ಟೆಂಪಲ್ ರನ್
ಹೊರಗಿನವರ ಹೆಗಲಿಗೆ ಉಸ್ತುವಾರಿ ಹೊರೆ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2007ರಲ್ಲಿ ರಾಮನಗರ ಜಿಲ್ಲೆಯನ್ನು ರಚಿಸಿದರು. ಆಗ ಆಯಕಟ್ಟಿನ ಡಬಲ… ಖಾತೆಗಳ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರಿಗೆ ಹಾಸನದ ಜತೆಗೆ ರಾಮನಗರದ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಮೊದಲಿಗೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಬೆಂಗಳೂರು ಜತೆಗೆ ರಾಮನಗರದ ಹೆಚ್ಚುವರಿ ಹೊಣೆ ವಹಿಸಿಕೊಂಡರು. ನಂತರದಲ್ಲಿ ಉಮೇಶ್ ಕತ್ತಿ, ಬಿ.ಶ್ರೀರಾಮುಲು ಹಾಗೂ ಬಿ.ಎನ್.ಬಚ್ಚೇಗೌಡ ರಾಮನಗರದಲ್ಲಿ ಉಸ್ತುವಾರಿ ಸಚಿವರಾಗಿ ದರ್ಬಾರ್ ನಡೆಸಿದ್ದರು.
ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅಧಿಕಾರದಲ್ಲಿದ್ದಾಗ ಜಿಲ್ಲೆಯವರೇ ಆದ ಸಿ.ಪಿ.ಯೋಗೇಶ್ವರ್ ಇಲ್ಲಿನ ಉಸ್ತುವಾರಿ ಸಚಿವರಾದರು. ಇವರೇ ರಾಮನಗರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಮೊಟ್ಟಮೊದಲ ಸ್ಥಳೀಯ ಸಚಿವ ಎನಿಸಿಕೊಂಡಿದ್ದರು. ಸದಾನಂದಗೌಡ ಪದತ್ಯಾಗದ ಬಳಿಕ ಸಿಎಂ ಹುದ್ದೆಗೇರಿದ ಜಗದೀಶ್ ಶೆಟ್ಟರ್ ಉಸ್ತುವಾರಿಗಳನ್ನು ಬದಲಿಸಿದರು. ಯೋಗೇಶ್ವರ್ ಅವರನ್ನು ನೆರೆಯ ಮಂಡ್ಯಕ್ಕೆ ಎತ್ತಂಗಡಿ ಮಾಡಿ, ಈ ಜಿಲ್ಲೆಗೆ ಹೊನ್ನಾಳಿಯವರಾದ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಪ್ರತಿಷ್ಠಾಪಿಸಿದ್ದರು.
ಡಿಕೆಶಿ ಬದಲು ಬೇರೊಬ್ಬರಿಗೆ ಸಾರಥ್ಯ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಡಿಕೆಶಿ ಬದಲಿಗೆ ಬೇರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೊಣೆಗಾರಿಕೆ ನೀಡಿರುವುದು 2ನೇ ಬಾರಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಿದ್ದಾಗ ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯರವರ ಸರ್ಕಾರದಲ್ಲಿ ಒಂದು ವರ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಕೃಷ್ಣಬೈರೇಗೌಡ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸಿದ್ದರು.
ಆನಂತರ ಇಂಧನ ಸಚಿವರಾದ ಡಿಕೆಶಿ ಜಿಲ್ಲಾ ಉಸ್ತುವಾರಿ ಸಚಿವರಾದರು. 2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ನೀರಾವರಿ ಸಚಿವರಾಗುವುದರ ಜೊತೆಗೆ ಉಸ್ತುವಾರಿ ಹೊಣೆಯನ್ನು ಹೊತ್ತಿದ್ದರು. 2019ರಿಂದ 2021ರಲ್ಲಿ ಯಡಿಯೂರಪ್ಪ ಹಾಗೂ 2021-23ರವರೆಗೆ ಬಸವರಾಜಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಗಡಿ ಮೂಲದವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈಗ ರಾಮನೂರಿನ ಉಸ್ತುವಾರಿ ಹೊಣೆ ಅನುಭವಿ ರಾಜಕಾರಣಿಯಾಗಿರುವ ರಾಮಲಿಂಗಾರೆಡ್ಡಿ ಹೆಗಲಿಗೆ ಬಿದ್ದಿದೆ.
ಹೊರಗಿನವರ ಸಾಧನೆ ಏನು ಇಲ್ಲ: ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಹೊರತು ಪಡಿಸಿ ಬೇರೆಯವರು ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲೇ ಇಲ್ಲ. ಜಿಲ್ಲೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಮಸ್ಯೆ ಬಗೆಹರಿಸಿ, ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದರಲ್ಲಿ ಉಸ್ತುವಾರಿ ಸಚಿವರೇ ಬದಲಾವಣೆಯಾದ ಉದಾಹರಣೆಗಳಿದೆ. ಆಗೊಂದು ಈಗೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳ ತಲೆ ಎಣಿಸಿದ್ದೇ ಉಸ್ತುವಾರಿ ಸಚಿವರ ಸಾಧನೆಯಾಗಿತ್ತು. ಯೋಗೇಶ್ವರ್ ತಮ್ಮ ಅವಧಿಯಲ್ಲಿ ಒಂದಿಷ್ಟುಯೋಜನೆಗಳನ್ನು ಚನ್ನಪಟ್ಟಣಕ್ಕೆ ಸೀಮಿತವಾಗಿ ಮಂಜೂರು ಮಾಡಿಸಿಕೊಂಡರು. ಡಿ.ಕೆ.ಶಿವಕುಮಾರ್ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರು ಅಭಿವೃದ್ಧಿ ವಿಚಾರದಲ್ಲಿ ಇಡೀ ಜಿಲ್ಲೆಗೆ ನ್ಯಾಯ ಕೊಡಿಸಿದರು. ಹೊರಗಿನ ಉಸ್ತುವಾರಿಗಳು ಈ ಜಿಲ್ಲೆಯ ಉಸಾಬರಿ ಬಗ್ಗೆ ಉತ್ಸಾಹವನ್ನೇ ತೋರಲಿಲ್ಲ. ಎಲ್ಲ ಹಂತದಲ್ಲೂ ಅವರು ಹೊರೆ ಎನಿಸಿಕೊಂಡರಷ್ಟೇ.
ಈಡೇರುವುದೇ ಜಿಲ್ಲೆಯ ಜನರ ನಿರೀಕ್ಷೆಗಳು?
* ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. ಈ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.
* ರಾಮನಗರ ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಒದಗಿಸುವುದು, ಹಳೇಯ ಜಿಲ್ಲಾಸ್ಪತ್ರೆಯನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು. ಸುಸಜ್ಜಿತವಾದ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಾಣ.
* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ. ಆರ್ಥಿಕತೆಯ ದೃಷಿಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ (ಕೆ.ಆರ್.ಮಾರ್ಕಟ್ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿಸಿಕೊಳ್ಳುವುದು.
* ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡಲಾಗಿ ಜಲಾಶಯ ನಿರ್ಮಾಣ, ಸತ್ತೇಗಾಲ ನೀರಾವರಿ ಯೋಜನೆಗೆ ವೇಗ ನೀಡುವುದು. ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು.
*ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕೆ ಪ್ರದೇಶ ಸಾಕಷ್ಟುಅಭಿವೃದ್ದಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಕೆಂಗೇರಿಯಿಂದ ಮೆಟ್ರೋ ರೈಲು ವಿಸ್ತರಣೆ.
ಬೆಂಗಳೂರಿನಿಂದ ಕನಕಪುರ - ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ರೇಲ್ವೆ ಸಂಪರ್ಕ ಕಲ್ಪಿಸುವುದು.
* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಬೆಂಗಳೂರು - ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ವೇಗ ನೀಡುವುದು.
*ವಂದಾರಗುಪ್ಪೆ ಬಳಿ ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆ ಹಾಗೂ ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕವನ್ನು ತ್ವರಿಗತಿಯಲ್ಲಿ ನಿರ್ಮಾಣ ಮಾಡುವುದು.
ವಸತಿ ಶಾಲೆ ಪ್ರವೇಶ, ಕೆಇಎನಿಂದ ಪಟ್ಟಿ ಬಿಡುಗಡೆ ವಿಳಂಬ: ಪೋಷಕರ ಪರದಾಟ
*ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ, ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿ ಪಡಿಸುವುದು.
* ಪ್ರವಾಸೋಮದ್ಯಮಕ್ಕೆ ಸಾಕಷ್ಟುಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿಫಾಲ್ಸ್ , ಮಾವತ್ತೂರು ಕೆರೆ ಅಭಿವೃದ್ಧಿ, ಕಣ್ವ ಜಲಾಶಯದಲ್ಲಿ ಚಿಲ್ಡ್ರನ್ ಪಾರ್ಕ್ ಸ್ಥಾಪನೆ, ಮಂಚನಬೆಲೆ ಜಲಾಶಯ ಬಳಿ ಉದ್ಯಾನವನ ನಿರ್ಮಾಣ, ಟ್ರಕ್ಕಿಂಗ್ ಗೆ ಹೆಸರಾದ ಬೆಳಿಕಲ್ ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.