ಮುಂದಿನ ಐದು ವರ್ಷಗಳಲ್ಲಿ ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸಿದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದರು.
ನಾಗಮಂಗಲ (ಜು.18): ಮುಂದಿನ ಐದು ವರ್ಷಗಳಲ್ಲಿ ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸಿದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಜಾರಿಯಲ್ಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕಾವೇರಿ ನೀರನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ದೊರಕಿಸಿಕೊಟ್ಟರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಅವರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ನಿಶ್ಚಿತವಾಗಿ ಹೇಳಿದರು.
ಮಂಡ್ಯ ಜಿಲ್ಲೆಯ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಅವರ ಕರ್ತವ್ಯ. ಅದನ್ನು ಬಿಟ್ಟು ಬೇಜವಾಬ್ದಾರಿತನದಿಂದ ಮಾತನಾಡುವ ಮೂಲಕ ಜಿಲ್ಲೆಯ ಜನರಿಗೆ ಅಗೌರವ ತಂದಿದ್ದಾರೆ. ಜೊತೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಸಭೆಗೆ ಹೋಗಬೇಕಿತ್ತಾ ಎಂದು ಲಘುವಾಗಿ ಮಾತನಾಡಿರುವುದು ಸಭ್ಯತೆಯಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಇವರೂ ಕೂಡ ಸರ್ವಪಕ್ಷ ಸಭೆ ಕರೆದಿದ್ದರು. ಆ ಸಮಯದಲ್ಲಿ ಯಾರೂ ಕೂಡ ಈ ರೀತಿ ವರ್ತನೆ ಮತ್ತು ಬೇಜವಾಬ್ದಾರಿತನದ ಹೇಳಿಕೆ ನೀಡಿರಲಿಲ್ಲ.
undefined
ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ
ಜಿಲ್ಲೆಯ ಸಂಸದರಾಗಿರುವ ಅವರಿಗೆ ಅವರ ಜವಾಬ್ದಾರಿಯನ್ನು ನೆನಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿರುವ ಅವರು, ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವುದರೊಂದಿಗೆ ಕೇಂದ್ರ ಮಟ್ಟದಲ್ಲಿ ನೀರಿನ ಸಮಸ್ಯೆ ವಿಚಾರದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೆ, ಸಮಸ್ಯೆ ಬಗ್ಗೆ ಇವರಿಗೆ ಇರುವ ಆಸಕ್ತಿಯನ್ನು ತೋರ್ಪಡಿಸುತ್ತಿತ್ತು ಎಂದು ತಿಳಿಸಿದರು. ಸಂಸದರಾಗಿ ಒಂದೇ ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ನಾವ್ಯಾರೂ ಒತ್ತಾಯಿಸಿಲ್ಲ. ಸರ್ವಪಕ್ಷ ಸಭೆಗೆ ಬಂದು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂಬುದಷ್ಟೇ ನಮ್ಮ ಕಳಕಳಿಯಾಗಿತ್ತು.
ಅದನ್ನು ಬಿಟ್ಟು ಒಂದು ಗಂಭೀರ ವಿಷಯದ ಬಗ್ಗೆ ಉದ್ಧಟತನದ ಮಾತುಗಳನ್ನಾಡುವುದು ಮುಖ್ಯಮಂತ್ರಿಯಾಗಿದ್ದವರಿಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು. ಅಭಿನಂದನಾ ಸಮಾರಂಭ, ಬಾಡೂಟ ಇನ್ನೊಂದು ದಿನ ಮಾಡುವುದಕ್ಕೂ ಅವಕಾಶವಿತ್ತು. ಸರ್ವಪಕ್ಷ ಸಭೆ ಯಾವಾಗಲೂ ನಡೆಯುವುದಿಲ್ಲ. ಹಿರಿಯ ನಾಯಕರು ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಎಚ್ಡಿಕೆ ರಾಜಕೀಯವಾಗಿ ಆ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಿತ್ತು ಎಂದು ನೇರವಾಗಿ ಹೇಳಿದರು.
ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೆ ಶೀಘ್ರ ನೀಲನಕ್ಷೆ: ರೈಲ್ವೆ ಸಚಿವ ಸೋಮಣ್ಣ
ನನ್ನಿಂದ ಈ ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ. ರಾಜಕೀಯ ಕಾರಣದಿಂದ ಆ ಮಾತನ್ನು ಹೇಳಬೇಕಾಯಿತು ಎಂದು ಹೇಳಿ ಬಿಡಲಿ. ಮುಂದೆ ಯಾವತ್ತೂ ಕೂಡ ಅವರನ್ನು ಈ ವಿಚಾರವಾಗಿ ಪ್ರಶ್ನಿಸುವುದೇ ಇಲ್ಲ. ನಮ್ಮ ಪಾಡಿಗೆ ನಾವು ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಸಂಸದರಾಗಿ ಅವರ ಜವಾಬ್ದಾರಿ ನಿರ್ವಹಿಸಲಿ ಎಂದು ಹೇಳಿದರು. ಕುಮಾರಸ್ವಾಮಿ ಅವರು ಮೊದಲು ತಮ್ಮ ಹಿಂಬಾಲಕರ ಬಾಯಿಯನ್ನು ಕಟ್ಟಿ ಹಾಕಲಿ. ಅವರಿಂದಲೇ ಹಾಳಾಗುತ್ತಿದ್ದಾರೆ. ಸ್ವಂತ ವಿವೇಚನೆಯಿಂದ ಕಾರ್ಯನಿರ್ವಹಿಸುವುದು ಅವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಸಲಹೆ ನೀಡಿದರು.