
ಬೆಂಗಳೂರು (ಜು.18): ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ದಲಿತ ಹಣವನ್ನು ಕೊಳ್ಳೆ ಹೊಡೆದು ಮಾನ ಕಳೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಈಗ ಮೀಸಲಾತಿ ತುಪ್ಪವನ್ನು ಕನ್ನಡಿಗರಿಗೆ ಮೂಗಿಗೆ ಸವರುವ ಮೂಲಕ ಮಾನ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ನಿಮ್ಮ ಮಾನ ವಾಪಸ್ಸು ಬರುವುದಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು' ಎಂಬ ಕನ್ನಡದ ಗಾದೆ ಮಾತು ಕೇಳಿರಬೇಕಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಇದು ನಿಮಗೆ ಬಹಳ ಸೂಕ್ತವಾಗಿ ಅನ್ವಯಿಸುತ್ತದೆ. ದಲಿತರ ದೊಡ್ಡು ಹೊಡೆದು ಕಳೆದುಕೊಂಡಿರುವ ಮಾನ ಕನ್ನಡಿಗರ ಮೂಗಿಗೆ ತುಪ್ಪ ಸವರಿದರೆ ವಾಪಸ್ಸು ಬರುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ: ರಾಜ್ಯಾದ್ಯಕ್ಷ, ವಿಪಕ್ಷ ನಾಯಕನ ವಿರುದ್ಧವೇ ತೊಡೆ ತಟ್ಟಿದ ಶಾಸಕರು.!
ದಲಿತರ ದುಡ್ಡು ಹೊಡೆದಿರುವ ಬಗ್ಗೆ ಉತ್ತರ ಕೋಡಿ ಸ್ವಾಮಿ ಅಂದರೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಹೊಸ ನಾಟಕ ಶುರು ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕರ್ನಾಟಕದ ಜನತೆ ನಿಮ್ಮ ಕುತಂತ್ರಗಳನ್ನ ಅರಿಯದಷ್ಟು ದಡ್ಡರು, ಅಮಾಯಕರು ಎಂದು ತಿಳಿದಿದ್ದೀರಾ? ಚುನಾವಣೆ ಬಂದಾಗಲೆಲ್ಲಾ ಅಥವಾ ನಿಮ್ಮ ಸರ್ಕಾರ/ಪಕ್ಷ ಮುಜುಗರಕ್ಕೆ ಒಳಗಾದಾಗಲೆಲ್ಲ ಪ್ರತ್ಯೇಕ ಧರ್ಮ, ಪ್ರತ್ಯೇಕ ಧ್ವಜ, ನಂದಿನಿ - ಅಮುಲ್, 'ನನ್ನ ತೆರಿಗೆ ನನ್ನ ಹಕ್ಕು', ಎಂಬ ಇಲ್ಲಸಲ್ಲದ ವಿಚಾರಗಳನ್ನ ಹುಟ್ಟುಹಾಕಿ ಜನರ ಗಮನ ಬೇರೆಡೆ ಸೆಳೆಯುವ ನಿಮ್ಮ ಗೋಸುಂಬೆ ರಾಜಕೀಯ ಕನ್ನಡಿಗರಿಗೆ ಗೊತ್ತಿಲ್ಲ ಎಂಬ ಭ್ರಮೆಯಲ್ಲಿದ್ದೀರಾ?
ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ, ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಸಿದ್ದರಾಮಯ್ಯನವರೇ, ನಿಮ್ಮ ಮುಖವಾಡ ಕಳಚಿದೆ, ಆಟ ಮುಗಿದಿದೆ. ಈ ನಾಟಕವೆಲ್ಲಾ ಬಿಟ್ಟು ತೆಪ್ಪಗೆ ರಾಜೀನಾಮೆ ಕೊಟ್ಟು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ, ರಾಜ್ಯದ ಗೌರವವನ್ನೂ ಉಳಿಸಿ' ಎಂದು ಟೀಕೆ ಮಾಡಿದ್ದಾರೆ.
ವಾಲ್ಮೀಕಿ ಸಮುದಾಯದ 187 ಕೋಟಿ ಲೂಟಿ ಮಾಡಿರುವ ಮೂಲಕ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅತೀ ದೊಡ್ಡ ಭ್ರಷ್ಟಾಚಾರ ಎಸಗಿದೆ. ದಲಿತರ ಪರ ಎಂದು ಹೇಳುತ್ತಾ ಶೋಷಿತ ಸಮುದಾಯಕ್ಕೆ ದ್ರೋಹ ಬಗೆದಿದೆ.
- ಆರ್. ಅಶೋಕ್, ವಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.