ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ

By Kannadaprabha News  |  First Published Jul 18, 2024, 3:29 PM IST

ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಟಿಕೆಟ್ ಕಗ್ಗಂಟು ಮುಂದುವರಿದಿದ್ದು, ತಮ್ಮ ಪಕ್ಷಕ್ಕೆ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿ-ಜೆಡಿಎಸ್ ಮುಖಂಡರು ಪೈಪೋಟಿ ನಡೆಸಿದ್ದಾರೆ. 


ಚನ್ನಪಟ್ಟಣ (ಜು.18): ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಟಿಕೆಟ್ ಕಗ್ಗಂಟು ಮುಂದುವರಿದಿದ್ದು, ತಮ್ಮ ಪಕ್ಷಕ್ಕೆ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿ-ಜೆಡಿಎಸ್ ಮುಖಂಡರು ಪೈಪೋಟಿ ನಡೆಸಿದ್ದಾರೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿದ್ದು, ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯಿಸಿದರೆ, ಯೋಗೇಶ್ವರ್ ಪರ ಬ್ಯಾಟ್ ಬೀಸಿರುವ ಬಿಜೆಪಿ ಮುಖಂಡರು ಒಂದು ಹೆಜ್ಜೆ ಮುಂದಿಟ್ಟು ಫ್ರೆಂಡ್ಲಿ ಫೈಟ್‌ಗೆ ಜೆಡಿಎಸ್‌ಗೆ ಪಂಥಾಹ್ವಾನ ನೀಡಿದ್ದಾರೆ.

ಕ್ಷೇತ್ರವನ್ನು ತಮ್ಮ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಲು ಜೆಡಿಎಸ್ ಮುಖಂಡರು ನಿಖಿಲ್ ಅಸ್ತ್ರ ಪ್ರಯೋಗಿಸಿದ್ದು, ಉಪಚುನಾವಣೆಯಲ್ಲಿ ನಿಖಿಲ್ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದರೆ, ಇದರ ಬೆನ್ನೆಲ್ಲೆ ಅಖಾಡಕ್ಕಿಳಿದ ಬಿಜೆಪಿ ಮುಖಂಡರು ಯೋಗೇಶ್ವರ್‌ಗೆ ಎನ್‌ಡಿಎ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದು, ಇದಾಗದಿದ್ದಲ್ಲಿ ಫ್ರೆಂಡ್ಲಿ ಫೈಟ್‌ಗೂ ಸಿದ್ಧ ಎಂಬ ಸಂದೇಶ ರವಾನಿಸಿರುವುದು ಮೈತ್ರಿ ಪಕ್ಷದಲ್ಲಿ ಒಡಕು ಮೂಡಿರುವುದು ತೋರಿಸುತ್ತದೆ.

Tap to resize

Latest Videos

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ಎಚ್‌ಡಿಕೆ ತ್ಯಜಿಸಿದ ಕ್ಷೇತ್ರದಲ್ಲೇ ಒಡಕು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲೇ ಮೈತ್ರಿ ಪಕ್ಷಗಳಲ್ಲಿ ಒಡಕು ಮೂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕುಮಾರಸ್ವಾಮಿಯಿಂದ ತೆರವಾದ ಕ್ಷೇತ್ರವನ್ನು ಜೆಡಿಎಸ್‌ನಲ್ಲೇ ಉಳಿಸಿಕೊಳ್ಳಬೇಕು ಎಂಬುದು ಜೆಡಿಎಸ್ ಮುಖಂಡರ ಒತ್ತಾಸೆಯಾಗಿದೆ. ಇದಕ್ಕಾಗಿ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಜೆಡಿಎಸ್‌ನಿಂದ ಬೇರೆಯವರ ಹೆಸರು ಮುನ್ನೆಲೆಗೆ ಬಂದಲ್ಲಿ ಪಕ್ಷದಲ್ಲೇ ಒಡಕು ಮೂಡಬಹುದು ಎಂಬ ಹಿನ್ನೆಲೆಯಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಹೇರಿದ್ದಾರೆ. ನಿಖಿಲ್ ಸ್ಪರ್ಧಿಸಿದ್ದಲ್ಲಿ ಪಕ್ಷದಲ್ಲಿ ಗೊಂದಲ ಮೂಡದು ಎಂಬ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ.

ಕ್ಷೇತ್ರ ಬಿಟ್ಟುಕೊಡಲು ಒಲ್ಲದ ಜೆಡಿಎಸ್: ೨೦೦೯ರಿಂದ ೨೦೧೮ರವರೆಗೆ ಚನ್ನಪಟ್ಟಣ ಕ್ಷೇತ್ರ ಯೋಗೇಶ್ವರ್ ಹಿಡಿತದಲ್ಲಿ ಇತ್ತು. ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಬಲಿಷ್ಠವಾಗಿದ್ದರೂ ಸಿಪಿವೈ ತೆಕ್ಕೆಯಿಂದ ಕ್ಷೇತ್ರ ಬಿಡಿಸಿಕೊಳ್ಳಲು ಜೆಡಿಎಸ್ ವಿಫಲವಾಗಿತ್ತು. ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ಮರಳಿ ಪಡೆಯುವ ನಿಟ್ಟಿನಲ್ಲಿ ೨೦೧೮ರಲ್ಲಿ ಖುದ್ದು ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಮನಗರ ಚನ್ನಪಟ್ಟಣ ಎರಡು ಕಡೆ ಗೆಲುವು ಸಾಧಿಸಿದ್ದ ಅವರು ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರದ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಹಳ ಪ್ರಯಾಸದಿಂದ ಗೆಲುವು ಸಾಧಿಸಿದ ಕ್ಷೇತ್ರವನ್ನು ಮತ್ತೆ ಸಿಪಿವೈಗೆ ಬಿಟ್ಟುಕೊಡಲು ಜೆಡಿಎಸ್ ಕೆಲ ಮುಖಂಡರಿಗೆ ಇಷ್ಟವಿಲ್ಲದ ಕಾರಣ ಮೈತ್ರಿ ಟಿಕೆಟ್ ಕಗ್ಗಂಟ್ಟಾಗಿದೆ.

ಸೈನಿಕನ ಭದ್ರಕೋಟೆ: ಚನ್ನಪಟ್ಟಣ ಕ್ಷೇತ್ರಕ್ಕೆ ಯೋಗೇಶ್ವರ್ ಆರಂಗೇಟ್ರಂ ಮಾಡಿದ ಮೇಲೆ ೨೦೧೮ರ ವಿಧಾನಸಭೆ ಚುನಾವಣೆಯವರೆ ಕ್ಷೇತ್ರ ಯೋಗೇಶ್ವರ್ ಹಿಡಿತದಲ್ಲೇ ಇತ್ತು. ೨೦೦೯ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಸಿಪಿವೈ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಎದುರಾದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಸಿ.ಅಶ್ವತ್ಥ್ ಗೆಲುವು ಸಾಧಿಸಿದ್ದು, ಹೊರತುಪಡಿಸಿದರೆ, ೨ ದಶಕಗಳ ಕಾಲ ಚನ್ನಪಟ್ಟಣ ಸೈನಿಕನ ಭದ್ರಕೋಟೆಯಾಗಿತ್ತು. ಆನಂತರ ೨೦೧೮ ಹಾಗೂ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕುಮಾರಸ್ವಾಮಿ ವಿರುದ್ಧ ಪರಾಜಿತರಾದರು. ಇದೀಗ ಎಚ್‌ಡಿಕೆ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಸಿಪಿವೈ ಕನಸು. ಕ್ಷೇತ್ರವನ್ನು ತಮ್ಮ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕೆಬುದು ಜೆಡಿಎಸ್ಎಂ ಪಟ್ಟು. ಬಿಜೆಪಿ-ಜೆಡಿಎಸ್‌ ಪರಸ್ಪರ ಪೈಪೋಟಿಗಿಳಿದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದಲ್ಲಿ ಒಡಕು ಮೂಡಿದ್ದು, ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ಅಭಿವೃದ್ಧಿಗೆ ವೇಗ: ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ವಾಗ್ದಾಳಿ

ಮೈತ್ರಿಗೆ ಬುನಾದಿ ಬಿದ್ದ ಕ್ಷೇತ್ರದಲ್ಲೇ ಬಿರುಕು: ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮುನ್ನೆಲೆಗೆ ಬಂದಿತ್ತು. ಅಲ್ಲಿಯವರೆಗೆ ಪರಸ್ಪರ ರಾಜಕೀಯ ವಿರೋಧ ಮಾಡಿಕೊಂಡು ಬಂದಿದ್ದ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಮೊದಲ ಬಾರಿ ಗೆಳೆತನದ ಹಸ್ತ ಚಾಚಿದ್ದರು. ಒಂದರ್ಥದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಚನ್ನಪಟ್ಟಣ ಕ್ಷೇತ್ರದಲ್ಲೇ ಬುನಾದಿ ಬಿದ್ದಿದ್ದು, ಹಳೇ ಮೈಸೂರು ಭಾಗದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಮೈತ್ರಿ ಬಹಳಷ್ಟು ಸಹಕಾರಿಯಾಗಿತ್ತು. ಮೈತ್ರಿ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದರೆ, ಮಂಡ್ಯದಲ್ಲಿ ಎಚ್‌ಡಿಕೆ ಗೆಲುವಿನ ನಗೆ ಬೀರಿದ್ದರು. ಆದರೆ, ಇದೀಗ ಉಪಚುನಾವಣೆ ಘೋಷಣೆಗೂ ಮುನ್ನವೇ ಮೈತ್ರಿಗೆ ಬುನಾದಿ ಬಿದ್ದ ಕ್ಷೇತ್ರದಲ್ಲೇ ಬಿರುಕು ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

click me!