ಸಂಕಷ್ಟ ಪರಿಸ್ಥಿತಿಯ ಅರಿವಿದ್ದರೂ ಬಿಜೆಪಿಯವರು ನೀರಿನ ವಿಚಾರದಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಮಾಡಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮದ್ದೂರು (ಸೆ.09): ಸಂಕಷ್ಟ ಪರಿಸ್ಥಿತಿಯ ಅರಿವಿದ್ದರೂ ಬಿಜೆಪಿಯವರು ನೀರಿನ ವಿಚಾರದಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಮಾಡಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಘಟ್ಟಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬಿಜೆಪಿಯವರು ಇಲ್ಲಿ ಬಂದು ಮಾಡುವುದಾದರೂ ಏನು. ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಎಲ್ಲ ಸಂಸದರು ದೆಹಲಿಗೆ ಹೋಗಿ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಬೇಕು.
ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿ ಇದೆ. ಪ್ರಾಧಿಕಾರ ನೀಡಿರುವ ನೀರು ಬಿಡುಗಡೆ ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರುವಂತೆ ತಿಳಿಸಿದರು. ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಅಗತ್ಯವಿದ್ದರೆ ತಂಡವೊಂದನ್ನು ಕಳುಹಿಸಿ ಪರಿಸ್ಥಿತಿಯ ಅಧ್ಯಯನ ನಡೆಸುವಂತೆ ಗಮನ ಸೆಳೆಯಬೇಕು. ಕನಿಷ್ಠ ಪಕ್ಷ ಜಲಾಶಯವನ್ನು ನೋಡಿದ ಮೇಲಾದರೂ ಕೇಂದ್ರ ಸರ್ಕಾರದ ಬಳಿಗೆ ಹೋಗುವುದಕ್ಕೆ ಬಿಜೆಪಿ ಪಕ್ಷದವರು ಮನಸ್ಸು ಮಾಡಲಿ. ಅದನ್ನು ಬಿಟ್ಟು ಕೇವಲ ರಾಜಕೀಯಕ್ಕೋಸ್ಕರ ವೀಕ್ಷಣೆ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಜ್ಯಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡ ಜೆಡಿಎಸ್: ಸಿಎಂ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಅತ್ಯಂತ ಆತ್ಮೀಯರು, ಸಮರ್ಥರು, ನೀರಾವರಿ ಸಚಿವರಾಗಿದ್ದವರು. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ಅರಿತಿರುವವರು. ಅವರು ನೀರು ನಿಲುಗಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಅದನ್ನು ಬಿಟ್ಟು ರಾಜಕೀಯವನ್ನೇ ಮಾಡುತ್ತೇವೆ ಎಂದರೆ ಅದನ್ನೇ ಮಾಡಲಿ ಎಂದರು. ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ. ಜೂನ್‌ನಿಂದ ಆಗಸ್ಟ್‌ವರೆಗೂ ಮಳೆ ಕೊರತೆಯಾಗಿದೆ. ಬಿಜೆಪಿಯ 26 ಸಂಸದರು ಏನು ಮಾಡುತ್ತಿದ್ದಾರೆ. ಇವರೆಲ್ಲರೂ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿದ್ದಾರಾ. ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಿದ್ದಾರಾ.
ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರಾ. ಕಾವೇರಿ ವಿಷಯವಾಗಿ ಒಬ್ಬರೂ ಒಂದೇ ಒಂದು ಮಾತನಾಡಿಲ್ಲ. ಸಂಕಷ್ಟ ಸೂತ್ರ ರಚನೆಯಾಗಬೇಕೆಂದು ಕೇಳಿದ್ದಾರಾ. ಕೆಆರ್‌ಎಸ್ ಜಲಾಶಯದಲ್ಲಿ 100 ಅಡಿಗಿಂತಲೂ ಕಡಿಮೆ ನೀರಿದೆ. ಇಲ್ಲಿ ನೀರಿನ ಪರಿಸ್ಥಿತಿ ಹೇಗಿದೆ, ತಮಿಳುನಾಡಿನ ಪರಿಸ್ಥಿತಿ ಏನು ಎಂದು ಕೇಂದ್ರದವರು ಅಧ್ಯಯನ ಮಾಡಿ ಸಂಕಷ್ಟ ಸೂತ್ರ ಕೊಡಬೇಕು. ಈ ವಿಷಯದಲ್ಲಿ ಜವಾಬ್ದಾರಿ ಮರೆತಿರುವವರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸಂಸದರೇ ಹೊರತು ನಾವಲ್ಲ ಎಂದರು.
ನಾವು ಸುಪ್ರೀಂ ಕೋರ್ಟ್‌ಗೆ, ಪ್ರಾಧಿಕಾರಕ್ಕೆ ನೀರಿನ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ರೈತರ ಹಿತ ಕಾಪಾಡುವುದಕ್ಕೆ ಹೋರಾಟ ನಡೆಸುತ್ತಿದ್ದೇವೆ. ಒಂದು ಕಡೆ ಬೆಳೆಗೂ ನೀರು ಕೊಡಬೇಕು, ಕುಡಿಯುವ ನೀರನ್ನೂ ಕಾಪಾಡಬೇಕು. ಅದು ನಮ್ಮ ಕರ್ತವ್ಯ. ಅದನ್ನು ಮಾಡೇ ಮಾಡುತ್ತೇವೆ. ಇದರ ಮಧ್ಯದಲ್ಲಿ ರಾಜಕಾರಣ ಮಾಡುವುದು ಬೇಡ. ನೀರಿನ ವಿಚಾರದಲ್ಲಿ ಸರ್ಕಾರ ಮತ್ತು ರೈತರ ಪರವಾಗಿ ನಿಲ್ಲಲಿ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ ಎಂದರು.
ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ: ಸಂಸದ ಬಚ್ಚೇಗೌಡ ಆರೋಪ
ಸ್ಟಾಲಿನ್ ಮನವೊಲಿಕೆಗೆ ಕಾಂಗ್ರೆಸ್ ನೀರು ಬಿಟ್ಟಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ನೀರು ಬಿಡಲು ಆದೇಶ ಮಾಡಿರುವುದು ಪ್ರಾಧಿಕಾರ. ಈ ಪ್ರಾಧಿಕಾರ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಸ್ಟಾಲಿನ್‌ಗೂ ಬಿಜೆಪಿಗೂ ಸಂಬಂಧವಿಲ್ಲ. ಅಂದ ಮೇಲೆ ಕೇಂದ್ರ ಸರ್ಕಾರ ನೀರು ಬಿಡುಗಡೆ ಆದೇಶ ಹಿಂಪಡೆಯುವಂತೆ ಪ್ರಾಧಿಕಾರಕ್ಕೆ ಸೂಚಿಸಲಿ ಎಂದು ತಿರುಗೇಟು ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಸೇರಿದಂತೆ ಇತರರಿದ್ದರು.