ಬಿಜೆಪಿಯವರ ಎಲ್ಲ ದೌರ್ಬಲ್ಯವೂ ಯತ್ನಾಳ್‌ಗೆ ಗೊತ್ತು: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Jan 1, 2024, 2:00 AM IST
Highlights

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿಯವರ ಎಲ್ಲಾ ದೌರ್ಬಲ್ಯಗಳೂ ಗೊತ್ತಿದ್ದಂತಿದೆ. ಕಳೆದ 5 ವರ್ಷದಲ್ಲಿ ಯತ್ನಾಳ್‌ ಹೇಳಿದ್ದೆಲ್ಲಾ ಸತ್ಯವಾಗಿದೆ. ಹೀಗಾಗಿಯೇ ಯತ್ನಾಳ್‌ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. 

ಬೆಂಗಳೂರು (ಜ.01): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿಯವರ ಎಲ್ಲಾ ದೌರ್ಬಲ್ಯಗಳೂ ಗೊತ್ತಿದ್ದಂತಿದೆ. ಕಳೆದ 5 ವರ್ಷದಲ್ಲಿ ಯತ್ನಾಳ್‌ ಹೇಳಿದ್ದೆಲ್ಲಾ ಸತ್ಯವಾಗಿದೆ. ಹೀಗಾಗಿಯೇ ಯತ್ನಾಳ್‌ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದರಿಂದ ಬಿಜೆಪಿ ಎಷ್ಟು ದುರ್ಬಲ ಎಂಬುದು ಸಾಬೀತಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಕಾಂಗ್ರೆಸ್‌ ಏಜೆಂಟ್‌ ಎಂಬುದು ಸುಳ್ಳು. ಒಂದು ವೇಳೆ ಅವರು ಕಾಂಗ್ರೆಸ್ ಏಜೆಂಟ್‌ ಆಗಿದ್ದರೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯವನ್ನು ಪ್ರಶ್ನಿಸಿದರು.

ಬಿಜೆಪಿಯವರು ಅವರ ಮೇಲೆ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿರುವುದು ನೋಡಿದರೆ ಯತ್ನಾಳ್‌ ಬಳಿ ಎಲ್ಲಾ ದಾಖಲೆ ಇದ್ದಂತಿದೆ. ಈ ಬಗ್ಗೆ ಸರ್ಕಾರ ಕೂಡ ತನಿಖೆ ಮಾಡುತ್ತಿದೆ. ಕೊರೋನಾ ವೇಳೆ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪ ಸೇರಿದಂತೆ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದರು.

ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ

ಗಲಾಟೆ ಮಾಡಿದರೆ ಹೂಡಿಕೆಗೆ ಅಡ್ಡಿ: ಕನ್ನಡ ನಾಮಫಲಕಗಳನ್ನು ಯಾರೇ ಆಗಲಿ ಅಭಿಮಾನದಿಂದ ಹಾಕಬೇಕು. ಕನ್ನಡಪರ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ವಿಡಿಯೋಗಳನ್ನು ನೋಡಿದರೆ ವಿದೇಶದಿಂದ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಆತಂಕ ವ್ಯಕ್ತಪಡಿಸಿದ್ದಾರೆ. ಈಗ ನಡೆಯುತ್ತಿರುವುದೆಲ್ಲಾ ವೈರಲ್ ಆಗಿ ವಿದೇಶಗಳಿಗೆ ಹೋದರೆ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ. ಹೀಗಾಗಿ ಅಂಗಡಿಕಾರರೇ ಕನ್ನಡ ನಾಡಲ್ಲಿ ಇದ್ದೇವೆ ಎಂದು ಅಭಿಮಾನದಿಂದ ನಾಮಫಲಕಗಳನ್ನು ಹಾಕಬೇಕು ಎಂದರು.ಕೈಗಾರಿಕಾ ಇಲಾಖೆಯಲ್ಲಿ ಬಂಡವಾಳ ಆಕರ್ಷಣೆಗೆ ಭಾರೀ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಯಾರಿಗೂ ಯಾವ ರಾಜ್ಯ, ದೇಶವೂ ಅನಿವಾರ್ಯವಲ್ಲ. ಇದನ್ನು ಕನ್ನಡಪರ ಸಂಘಟನೆಯವರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ವೀರಶೈವ ಅಧಿವೇಶನ ಬಗ್ಗೆ ಅಸಮಾಧಾನ ಇಲ್ಲ: ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಲ್ಇ ಸೊಸೈಟಿ ಅಧ್ಯಕ್ಷ ಪ್ರಭಾಕರ ಕೋರೆ ಅವರ 50ನೇ ವಿವಾಹ ವಾರ್ಷಿಕೋತ್ಸವ ಮತ್ತು ವಿಜಯಪುರದಲ್ಲಿ ತಮ್ಮ‌ ನೇತೃತ್ವದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮಗಳು ಪೂರ್ವನಿಗದಿಯಾಗಿದ್ದವು. ಹೀಗಾಗಿ, ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ತಿಳಿಸಿದರು.

ಅಧಿವೇಶನದಲ್ಲಿ ಜಾತಿ ಗಣತಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಲಿಂಗಾಯತರಲ್ಲಿ ಇರುವ 60-70 ಒಳಪಂಗಡಗಳೆಲ್ಲವೂ ಒಂದೇ ಸೂರಿನಡಿ ಬರಬೇಕು. ಹೀಗಾದರೆ ಮಾತ್ರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಲಾಭ ಸಿಗುತ್ತದೆ. ಇದನ್ನೇ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಹೇಳಿದರು.

ಅಯೋಧ್ಯೆಗೆ ಬಂದು ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಕಾಂಗ್ರೆಸ್ ನಾಯಕರಿಗೆ ಸುನಿಲ್ ಕುಮಾರ್ ಸಲಹೆ

ಜಾರಕಿಹೊಳಿ ಸ್ಪರ್ಧಿಸಿದರೆ ಜಯ: ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನಗಳನ್ನು ಗಳಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸತೀಶ್‌ ಜಾರಕಿಹೊಳಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದು ಈ ಬಾರಿ ಕಣಕ್ಕಿಳಿದರೆ ನೂರಕ್ಕೆ ನೂರು ಜಯಗಳಿಸಲಿದ್ದಾರೆ. ಪಕ್ಷ ಸೂಚಿಸಿದರೆ ಜಾರಕಿಹೊಳಿಯೂ ಸ್ಪರ್ಧೆ ಮಾಡಬೇಕಾಗುತ್ತದೆ, ಎಂ.ಬಿ.ಪಾಟೀಲ್‌ ಸಹ ಕಣಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದರು.

click me!