ಬಣಜಿಗರು ಸ್ವಾಭಿಮಾನಿಗಳು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಅವರಿಗಿದೆ. ನನಗೆ ಟಿಕೆಟ್ ತಪ್ಪಿಸಿದ ವೇಳೆ ಇಡೀ ರಾಜ್ಯದಲ್ಲಿನ ನಮ್ಮ ಸಮಾಜದ ಬೆಂಬಲ ನೀಡಿದರು.
ವಿಜಯಪುರ (ಜ.01): ಬಣಜಿಗರು ಸ್ವಾಭಿಮಾನಿಗಳು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಅವರಿಗಿದೆ. ನನಗೆ ಟಿಕೆಟ್ ತಪ್ಪಿಸಿದ ವೇಳೆ ಇಡೀ ರಾಜ್ಯದಲ್ಲಿನ ನಮ್ಮ ಸಮಾಜದ ಬೆಂಬಲ ನೀಡಿದರು. ಅದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ.ಎಚ್ ಪಾಟೀಲ ಮೆಮೋರಿಯಲ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕ ಘಟಕ ವತಿಯಿಂದ ವಿಜಯಪುರ - ಬಾಗಲಕೋಟ ಅವಳಿ ಜಿಲ್ಲೆ ಬಣಜಿಗ ಸಮಾಜದ ಸಂಘಟನಾ ಸಮಾವೇಶ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ಬಣಜಿಗ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರಣ ಇಲ್ಲದೆಯೆ ನನಗೆ, ಮಹದೇವಪ್ಪ ಯಾದವಾಡ ಅವರಿಗೆ ಟಿಕೆಟ್ ತಪ್ಪಿಸಿದರು.
ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ
ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ನಾವು ಸುಮ್ಮನಿರುವುದಿಲ್ಲ ಎಂಬುದನ್ನು ಚುನಾವಣೆಯಲ್ಲಿ ತೋರಿಸಿದ್ದಾರೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿವಸದಲ್ಲಿ ಸರಿಯಾದ ದಾರಿಯಲ್ಲಿ ಹೋಗಬೇಕು. ಇಲ್ಲದಿದ್ದರೆ ಇದೇ ರೀತಿ ಪೆಟ್ಟು ಬೀಳುತ್ತವೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಬಣಜಿಗ ಸಮಾಜಕ್ಕೆ ಶಿಕ್ಷಣದಲ್ಲಿ ೨ಎ ಮೀಸಲಾತಿ ನೀಡಿದೆ. ನನಗೆ ಕೊಟ್ಟ ಅಧಿಕಾರದಲ್ಲಿ ಸಮಾಜದ ಮತ್ತು ನಾಡಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ತೃಪ್ತಿ ತಂದಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಬಣಜಿಗ ಸಮಾಜದ ಹಿರಿಯರು ಯಾರಿಗೂ ತೊಂದರೆಯಾಗದಂತೆ ಒಳ್ಳೆಯ ಆಡಳಿತ ಮಾಡಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ನಾವು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಯಾವುದೇ ಕಾರ್ಯಗಳನ್ನು ಕೊಟ್ಟರು ನಿಭಾಯಿಸುವ ಶಕ್ತಿ ನಮ್ಮ ಸಮಾಜದಲ್ಲಿ ಇರುತ್ತದೆ. ನಮ್ಮ ತಂದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಹಾಗೇ ನಾನು ಮಾಡುವೆ ಎಂದು ಹೇಳಿದರು.
ರಾಮದುರ್ಗದ ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸುಚೇತಕ ಅಶೋಕ ಪಟ್ಟಣ ಮಾತನಾಡಿ, ಹಣ ಗಳಿಸುವುದಕ್ಕಿಂತ ಗುಣವಂತರಾಗಿ ಬದುಕಬೇಕು, ದುಡಿದ ಹಣದಲ್ಲಿ ಸಮಾಜ ಕಾರ್ಯಗಳಿಗೆ ಬಳಕೆ ಮಾಡಿ ಶರಣರಂತೆ ಆನಂದದಿಂದ ಬದುಕು ಸಾಗಿಸಬೇಕು ಎಂದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಎಂ.ಕೆ. ಪಟ್ಟಣಶೆಟ್ಟಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.
ಅಯೋಧ್ಯೆಗೆ ಬಂದು ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಕಾಂಗ್ರೆಸ್ ನಾಯಕರಿಗೆ ಸುನಿಲ್ ಕುಮಾರ್ ಸಲಹೆ
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಉಮೇಶ ಮಲ್ಲನ್ನವರ, ಬಿಜೆಪಿ ಮುಖಂಡ ಆನಂದ ಇಂಗಳಗಾವಿ, ಈಶ್ವರಪ್ಪ ಕೋರಿ, ಬಸವರಾಜ ಖೋತ, ಶಿವಾನಂದ ಉದಪುಡಿ, ಅಂದಪ್ಪ ಜವಳಿ, ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ವೀರಣ್ಣ ಮಳಗಿ, ಅಶೋಕ ವಾರದ ಮುಂತಾದವರು ಇದ್ದರು. ಅಶೋಕ್ ತಿಮಶೆಟ್ಟಿ ಸ್ವಾಗತಿಸಿದರು. ಬಸವರಾಜ ಮಂಟೂರ ನಿರೂಪಿಸಿದರು.