3ರಿಂದ 4 ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ?: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jan 1, 2024, 1:37 AM IST
Highlights

ಮೈತ್ರಿ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯು ಒಟ್ಟು 28 ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಕೊಡುವ ನಿರೀಕ್ಷೆಯಿದೆ. ಈ ಪೈಕಿ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. 

ಬೆಂಗಳೂರು (ಜ.01): ಮೈತ್ರಿ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯು ಒಟ್ಟು 28 ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಕೊಡುವ ನಿರೀಕ್ಷೆಯಿದೆ. ಈ ಪೈಕಿ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಜೆಡಿಎಸ್‌ಗೆ ನೀಡುವ ಸಾಧ್ಯತೆಯಿದೆ. ಅದೇ ರೀತಿ ತುಮಕೂರು ಹಾಗೂ ಮೈಸೂರು ಕ್ಷೇತ್ರಗಳ ಪೈಕಿ ಒಂದು ಜೆಡಿಎಸ್‌ ಪಾಲಾಗಬಹುದು ಎನ್ನಲಾಗುತ್ತಿದೆ. ಇದುವರೆಗೆ ಕ್ಷೇತ್ರಗಳ ಹಂಚಿಕೆ ಸಂಬಂಧ ಗಂಭೀರವಾಗಿ ಮಾತುಕತೆ ನಡೆದಿಲ್ಲ. 

ಇಂತಿಷ್ಟೇ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಪಟ್ಟು ಹಿಡಿಯುವ ಮನಸ್ಥಿತಿಯಲ್ಲೂ ಜೆಡಿಎಸ್‌ ಇಲ್ಲ. ಬದಲಿಗೆ ಮುಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ ಎಂಬ ಭಾವನೆ ಹೊಂದಿರುವ ಜೆಡಿಎಸ್‌ ನಾಯಕರು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ವರ್ಷದಲ್ಲಿ ಕ್ಷೇತ್ರಗಳ ಹಂಚಿಕೆ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಸಮಾಲೋಚನೆ ನಡೆಯಲಿದೆ. ಅಷ್ಟರೊಳಗಾಗಿ ಬಿಜೆಪಿ ನಾಯಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿನ ತಮ್ಮ ಸಂಘಟನೆಯನ್ನು ಒರೆಗೆ ಹಚ್ಚಿ ನೋಡಲಿದ್ದಾರೆ. ಜತೆಗೆ ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಗೆಲುವು ಸುಲಭವಾಗಲಿದೆ ಎಂಬುದರ ಮಾಹಿತಿಯನ್ನೂ ಕ್ರೋಢೀಕರಿಸಲು ಉದ್ದೇಶಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯೋಗ್ಯ ಅಭ್ಯರ್ಥಿ: ಸಚಿವ ಮಂಕಾಳ ವೈದ್ಯ

ಹಾಸನ ಕ್ಷೇತ್ರದಲ್ಲಿ ಹೇಗಿದ್ದರೂ ಅಲ್ಲಿ ಸದ್ಯ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅವರೇ ಸಂಸದರಾಗಿದ್ದಾರೆ. ಜತೆಗೆ ಪಕ್ಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯವೇನೂ ಇಲ್ಲ. ಅಲ್ಲಿ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ. ಅಷ್ಟರ ಮಟ್ಟಿಗೆ ಈ ಎರಡು ಕ್ಷೇತ್ರಗಳು ಜೆಡಿಎಸ್‌ಗೆ ನೀಡುವುದು ಹೆಚ್ಚೂ ಕಡಮೆ ನಿರ್ಧಾರವಾಗಿದೆ. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಪೈಕಿ ಎರಡರಲ್ಲೂ ಹಾಲಿ ಬಿಜೆಪಿ ಸಂಸದರಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರು ವೈಯಕ್ತಿಕ ಹಾಗೂ ವಯೋಸಹಜ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. 

ಆದರೆ, ಅಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಆಕಾಂಕ್ಷಿಯಾಗಿದ್ದಾರೆ. ಕೋಲಾರದಲ್ಲಿ ಹಾಲಿ ಸಂಸದ ಮುನಿಸ್ವಾಮಿ ಮತ್ತೊಮ್ಮೆ ಸ್ಪರ್ಧಿಸುವ ಉಮ್ಮೇದು ಹೊಂದಿದ್ದಾರೆ. ಈ ಎರಡೂ ಕ್ಷೇತ್ರಗಳ ಸಮೀಕ್ಷೆ ಬಳಿಕ ಒಂದನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಂಭವವಿದೆ. ಅದೇ ರೀತಿ ತುಮಕೂರು ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ಪೈಕಿ ಎರಡರಲ್ಲೂ ಹಾಲಿ ಬಿಜೆಪಿ ಸಂಸದರೇ ಇದ್ದಾರೆ. ಈ ಪೈಕಿ ತುಮಕೂರಿನ ಸಂಸದ ಜಿ.ಎಸ್‌.ಬಸವರಾಜು ಅವರು ವಯೋಸಹಜ ಕಾರಣ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. 

ರಾಮಮಂದಿರ ಉದ್ಘಾಟನೆಗೆ ಇನ್ನೂ ಆಹ್ವಾನ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

ಆದರೆ, ಅಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಮಾಜಿ ಸಂಸದ ಮುದ್ದಹನುಮೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರೇ ಇಲ್ಲಿಂದ ಸ್ಪರ್ಧಿಸಿ ಸೋಲುಂಡಿದ್ದರು. ಇನ್ನು ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಮೂರನೇ ಬಾರಿ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ಈವೆರಡರ ಪೈಕಿ ಯಾವುದನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು ಎಂಬುದು ಕುತೂಹಲಕರವಾಗಿದೆ. ಇದೆಲ್ಲದರ ನಡುವೆ ಉತ್ತರ ಕರ್ನಾಟಕದ ರಾಯಚೂರು ಕ್ಷೇತ್ರದ ಬಗ್ಗೆಯೂ ಜೆಡಿಎಸ್‌ ಒಲವು ಹೊಂದಿದೆ. ಅಲ್ಲಿಯೂ ಕೂಡ ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಮತ್ತೊಮ್ಮೆ ಕಣಕ್ಕಿಳಿಯುವ ಸಿದ್ಧತೆಯಲ್ಲಿರುವುದರಿಂದ ಕಾದು ನೋಡಬೇಕು.

click me!