
ಬೆಂಗಳೂರು (ನ.12): ಗೃಹಲಕ್ಷ್ಮೀ ಫಲಾನುಭವಿಗಳ ಅನುಕೂಲಕ್ಕಾಗಿ ಗೃಹ ಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲಾಗುತ್ತಿದ್ದು, ನ.14ರಂದು ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಘಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ವಿಧಾನಸೌಧದಲ್ಲಿ ಮಂಗಳವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾದ ಸಹಕಾರ ಸಂಘಗಳ ಅಪರ ನಿಬಂಧಕ ಲಕ್ಷ್ಮೀಪತಯ್ಯ ಅವರು ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘದ ನೋಂದಣಿ ಪ್ರಮಾಣಪತ್ರ ಹಸ್ತಾಂತರಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಅನುಕೂಲಕ್ಕಾಗಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲಾಗುತ್ತಿದೆ. ಗೃಹಲಕ್ಷ್ಮೀ ಅಡಿಯಲ್ಲಿ 1.24 ಕೋಟಿ ಫಲಾನುಭವಿಗಳು ಯೋಜನೆಯಿಂದ ದೊರೆತ ಹಣವನ್ನು ಬೇರೆ ಮೂಲಗಳಲ್ಲಿ ತೊಡಗಿಸಿ ಆದಾಯ ಪಡೆಯುವಂತೆ ಸಂಘ ಸ್ಥಾಪಿಸಲಾಗುತ್ತಿದೆ. ಸಂಘದ ಮೂಲಕ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರು.ವರೆಗೆ ಸಾಲ ನೀಡುವುದು ಸೇರಿ ಮತ್ತಿತರ ಸವಲತ್ತುಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ನ.19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಬ್ಯಾಂಕ್ ಜನಮನ್ನಣೆ ಗಳಿಸಲಿ: ವಿಶ್ವದಲ್ಲೇ ದೊಡ್ಡದಾದ ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮೀ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ. 2000 ಜನ ಫಲಾನುಭವಿಗಳ ಹಣ ಸಂಗ್ರಹಿಸಲಾಗಿದ್ದು, ಇದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಗೃಹಲಕ್ಷ್ಮೀ ಯೋಜನೆಯ ಮಾದರಿದಲ್ಲೇ ಗೃಹಲಕ್ಷ್ಮೀ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮ ಹಾಕಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮೀ ಸೊಸೈಟಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಅಕ್ಕಾ ಪಡೆ ರಚನೆ: ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡುವ ಸಲುವಾಗಿ ಅಕ್ಕಾಪಡೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕಾ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಹೋಮ್ ಗಾರ್ಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳು ಅಕ್ಕಾ ಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಅಕ್ಕಾ ಪಡೆ ಶಾಲಾ ಕಾಲೇಜು, ಪಾರ್ಕ್, ಶಾಂಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದೆ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಹಾಯ ಮಾಡಲಿದೆ ಎಂದರು. ಡೀಪ್ ಫೇಕ್ ಹಾವಳಿ ಜಾಸ್ತಿ ಆಗುತ್ತಿದ್ದು, ಇದಕ್ಕೆ ಹೆಣ್ಣು ಮಕ್ಕಳು, ಹಿರಿಯ ಮಹಿಳೆಯರೇ ಟಾರ್ಗೆಟ್ ಆಗುತ್ತಿದ್ದಾರೆ. ಇದನ್ನು ತಡೆಯೋಕೆ ಅಕ್ಕಾ ಪಡೆ ಕೆಲಸ ಮಾಡಲಿದೆ. ಜೊತೆಗೆ ಆರಂಭಗೊಂಡ ಮೂರು ತಿಂಗಳಲ್ಲಿ ಮನೆ ಮನೆಗೆ ತೆರಳಲಿದೆ, ಜನರಿಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗುವ ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಬೇಕು, ಇದಕ್ಕೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ನೆರವು ಅಗತ್ಯ ಎಂದರು. ಇಂದಿರಾ ಗಾಂಧಿಯವರ ಹುಟ್ಟುಹಬ್ಬದ ದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮೂರೂ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ। ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.