
ಮೈಸೂರು (ನ.12): ದೆಹಲಿ ಬ್ಲಾಸ್ಟ್ ಬಿಹಾರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಪ್ರಭಾವ ಬೀರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕು. ಕೇಂದ್ರವೇ ತನಿಖೆ ನಡೆಸಿ ಇದಕ್ಕೆ ಉತ್ತರಿಸಲಿ ಎಂದರು.
ದೆಹಲಿ ಬ್ಲಾಸ್ಟ್ ಬಿಹಾರ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೆಹಲಿ ಬ್ಲಾಸ್ಟ್ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು. ಇದು ಬಿಜೆಪಿ ವಿರುದ್ಧವಾಗಿ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ ಎಂದು ಹೇಳಿದರು. ಬಾಂಬ್ ಬ್ಲಾಸ್ಟ್ ಗಳು ಆಗಬಾರದು. ಅಮಾಯಕರ ಜೀವಹಾನಿ ಬೇಸರದ ಸಂಗತಿ. ಬಾಂಬ್ ಸ್ಫೋಟದಲ್ಲಿ ಅಮಾಯಕ ಜನ ಸತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾಕೆ ಆಗುತ್ತೆ ಗೊತ್ತಿಲ್ಲ. ಭದ್ರತಾ ವೈಫಲ್ಯ ಬಗ್ಗೆ ನನಗೆ ಗೊತ್ತಿಲ್ಲ. ಭದ್ರತಾ ವೈಫಲ್ಯದ ಬಗ್ಗೆ ತನಿಖೆ ಆಗಲಿ ಎಂದು ಅವರು ಹೇಳಿದರು.
ಜಿಟಿಡಿಯನ್ನು ಪಕ್ಷಕ್ಕೆ ಕರೆದಿಲ್ಲ: ಜಿ.ಟಿ.ದೇವೇಗೌಡ ಅವರನ್ನು ಜೆಡಿಎಸ್ ಕೋರ್ ಕಮಿಟಿಯಿಂದ ತೆಗೆದು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಸೇರಿದ್ದು. ನಾನು ಯಾರನ್ನೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಬಂದರೆ ಯಾಕೆ ಬಂದ್ರಿ ಎಂದು ಕೇಳುವುದಿಲ್ಲ. ಅದು ಅವರವರಿಗೆ ಬಿಟ್ಟಿದ್ದು. ನಾನು, ಜಿ.ಟಿ ದೇವೇಗೌಡ ಒಂದೇ ಕ್ಷೇತ್ರದವರು. ಹೀಗಾಗಿ, ಸ್ನೇಹವಿದೆ ಅಷ್ಟೇ ಎಂದು ತಿಳಿಸಿದರು.
ಭಯೋತ್ಪಾದಕರ ಹೆಸರು ಹೇಳಲಿ: ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಭಯೋತ್ಪಾದಕರು ಎಂದು ಅವರ ಹೆಸರನ್ನು ಹೇಳಬೇಕು. ಇಂತಹ ಹಿಟ್ ಆ್ಯಂಡ್ ರನ್ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಹಾಗಾದರೆ, ಕಾಂಗ್ರೆಸ್ ನವರು ಭಯೋತ್ಪಾದಕರಾ?. ವಿಧಾನಸೌಧದಲ್ಲಿ ಇರುವವರು ನಾವೇ ತಾನೆ?. ಅವರು ಎಲ್ಲಿದ್ದಾರೆ ಎಂದು ಕುಟುಕಿದರು.
ತಮಿಳುನಾಡಿಗೆ 155 ಟಿಎಂಸಿ ಹೆಚ್ಚು ನೀರು: ರಾಜ್ಯದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಹೋಗಬೇಕಿತ್ತು. ಇಷ್ಟು ನೀರು ಹೋಗಿದೆ. ಇದಲ್ಲದೆ ಹೆಚ್ಚುವರಿಯಾಗಿ 155 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಸಮಸ್ಯೆ ಆಗಲ್ಲ ಎಂದು ಹೇಳಿದರು. ರಾಜ್ಯದಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಅದರಲ್ಲಿ ಮೈಸೂರಲ್ಲಿ 75 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಸಂಬಂಧ ಜಂಟಿ ಸರ್ವೇ ಮಾಡಿಸಿದ್ದು, ವರದಿ ಬಂದಿದೆ. ಬೆಳೆಹಾನಿ ಪರಿಹಾರವನ್ನು ಸಂಬಂಧಪಟ್ಟ ರೈತರ ಖಾತೆಗಳಿಗೆ ವಾರ-ಹದಿನೈದು ದಿನಗಳಲ್ಲಿ ಹಾಕಲಾಗುವುದು ಎಂದರು.
ಸಿಎಂ ಕೈಗಳಿಗೆ ಸನ್ ಬರ್ನ್: 2010ರಲ್ಲಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆ ವೇಳೆ ಎರಡು ಕೈ ಸನ್ ಬರ್ನ್ ಆಗಿತ್ತು. ಅಂದಿನಿಂದ ಇಂದಿನವರಗೆ ಬಹಳ ಆಯಿಟ್ಮೆಂಟ್ ಬಳಸಿದೆ. ಏನೂ ಪ್ರಯೋಜನ ಆಗಲಿಲ್ಲ. ಮೂರು ಜನ ಸ್ಕಿನ್ ಡಾಕ್ಟರ್ ಭೇಟಿ ಮಾಡಿದೆ. ಅವರು ಬರೆದುಕೊಟ್ಟಿದ್ದನ್ನು ಬಳಸಿದರೂ ಪ್ರಯೋಜನವಾಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೈನಲ್ಲಿ ಸುಟ್ಟ ರೀತಿಯ ಚರ್ಮ ಆಗಿದ್ದಕ್ಕೆ ಕಾರಣ ನೀಡಿದರು.
ಗ್ರಾ.ಪಂ. ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿ ವಾಸ ಮಾಡಬೇಕು. ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಮಾಡುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹೋಗುತ್ತಾರೆ. ಇದು ಸರಿಯಾದ ಪದ್ಧತಿಯಲ್ಲ. ತಾಲೂಕು ಕೇಂದ್ರದಲ್ಲಿ ವಾಸ ಮಾಡದ ಅಧಿಕಾರಿಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ನಾನು ಬೆಂಗಳೂರು ಸೇರಿದಂತೆ ಎಲ್ಲೇ ಇರಲಿ, ಸಮಸ್ಯೆ ಹೊತ್ತು ನೂರಾರು ಜನ ಬರ್ತಾರೆ. ಕಾರ್ಯಕ್ರಮಕ್ಕೆ ಹೋಗಿದ್ದರೆ ದಿನವಿಡೀ ಕಾದಿರ್ತಾರೆ. ರಾತ್ರಿ 9 ಗಂಟೆಗೆ ಬಂದರೂ ಕಾಯುತ್ತಿರುತ್ತಾರೆ.
ಬಹುತೇಕ ಜನರ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗುತ್ತವೆ. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ್ದೇ ಇರುತ್ತದೆ. ಪಹಣಿ, ಪೋಡಿ ಸೇರಿ ಹಲವು ಕಾರ್ಯಗಳ ವಿಚಾರಗಳು ಇರುತ್ತವೆ. ವೈಯಕ್ತಿಕ ಕಾರಣ ಇಟ್ಟುಕೊಂಡು ಬರುವುದು ಕಡಿಮೆ. ಪೊಲೀಸ್ ಇಲಾಖೆಯ ಹಲವು ಸಮಸ್ಯೆಗಳು ಜನರನ್ನ ಕಾಡುತ್ತವೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸಿದರೆ ಜನ ನನ್ನ ಬಳಿ ಬರುವುದು ಕಡಿಮೆ ಆಗುತ್ತದೆ ಎಂದರು. ಅಧಿಕಾರಿಗಳು ಜನರನ್ನು ಭೇಟಿ ಮಾಡಬೇಕು. ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಬೇಕು. ಕಾನೂನು ರೀತಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾನೂನು ಅಡ್ಡಿ ಇದ್ದಲ್ಲಿ ಅಂತವರಿಗೆ ಹಿಂಬರಹ ನೀಡಬೇಕು. ಅನಗತ್ಯವಾಗಿ ಜನರನ್ನ ಅಲೆಸುವುದು ದೊಡ್ಡ ಅಪರಾಧ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.