* ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಗೊಂದಲ
* ಒಬಿಸಿ ಮೀಸಲಾತಿ ವಿಚಾರವಾಗಿ ಚುನಾವಣೆ ವಿಳಂಬ
* ಚುನಾವಣೆ ಬಗ್ಗೆ ಮಹತ್ವದ ವಿಚಾರ ಬಿಚ್ಚಿಟ್ಟ ಸಚಿವ ಈಶ್ವರಪ್ಪ
ಕಲಬುರಗಿ. (ಫೆ.27): ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ (Taluk And Zilla Panchayat Elections) ಒಬಿಸಿ ಮೀಸಲಾತಿ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗುತ್ತಿದೆ.
ಇನ್ನು ಈ ಬಗ್ಗೆ ಕಲಬುರಗಿಯಲ್ಲಿ ಇಂದು(ಭಾಣುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa), ಒಬಿಸಿ ಮೀಸಲಾತಿ ಇಲ್ಲದೆ ಪಂಚಾಯತಿ ಚುನಾವಣೆ ನಡೆಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
undefined
TP, ZP Elections 'ಜಿ.ಪಂ,ತಾ.ಪಂ ಚುನಾವಣೆ, ಎಸ್ಸಿ,ಎಸ್ಟಿಗೆ ಮಾತ್ರ ಮೀಸಲಾತಿ'
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ (TP, ZP Elections) ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕೆಂಬ ವಿಚಾರದ ಕುರಿತಾಗಿ ಚರ್ಚೆ ನಡೆದಿದ್ದು, ಅಂತಿಮ ತೀರ್ಮಾನದ ನಂತರ ಪಂಚಾಯತ್ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಒಬಿಸಿ ಮೀಸಲಾತಿ ಇಲ್ಲದೆ ಜಿಪಂ, ತಾಪಂ ಚುನಾವಣೆ ನಡೆಸಬಾರದು ಎನ್ನುವುದು ನಮ್ಮ ನಿರ್ಧಾರವಾಗಿದ್ದು, ಸಿಎಂ ಜೊತೆಗೆ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಒಬಿಸಿ ಮೀಸಲಾತಿ ನೀಡುವ ಬಗ್ಗೆ ತೀರ್ಮಾನವಾಗಬೇಕಿದೆ. ಬಳಿಕ ಚುನಾವಣೆ ನಡೆಸಬಹುದು ಎಂದು ತಿಳಿಸಿದರು.
ಇದೇ ವೇಳೆ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಮೇಕೆದಾಟು ಯೋಜನೆ ಕಾಂಗ್ರೆಸ್ ಪಕ್ಷದ ಪಾರ್ಟ್ ಟು. ಅವರಿಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ. ಅವರ ಸರ್ಕಾರ ಇದ್ದಾಗ ಯೋಜನೆ ಯಾಕೆ ಜಾರಿ ಮಾಡಲಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕೈ ರಾಜಕೀಯ ಅಸ್ತ್ರವಾಗಿ ಬಳಸುತ್ತಿವೆ. ರಾಜ್ಯದಲ್ಲಿ ಹಿಜಾಬ್, ಹಿಂದೂ-ಮುಸ್ಲಿಂ ಗಲಾಟೆಗಳು ಆಗಲು ಕಾರಣ ಕಾಂಗ್ರೆಸ್.
ಹಿಂದೂ-ಮುಸ್ಲಿಂ ದೂರದೂರವಾಗಬೇಕು ಅಂತ ರಾಜಕೀಯ ಮಾಡ್ತಿದ್ದಾರೆ. ಮುಸ್ಲಿಂ ವೋಟ್ ಬ್ಯಾಂಕ್ಗಾಗಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಾತಿಗಳನ್ನು ಒಡೆದು ಅಧಿಕಾರ ಕಳೆದುಕೊಂಡಿದೆ. ಇದೀಗ ಹಿಂದೂ-ಮುಸ್ಲಿಂ ವಿವಾದ ಹೆಚ್ಚಿಸಿ, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮೊದಲ ವ್ಯಕ್ತಿ ಡಿ.ಕೆ.ಶಿವಕುಮಾರ್. ಆತನ ಮೇಲೆ ರಾಷ್ಟ್ರದ್ರೋಹಿ ಕೇಸ್ ಹಾಕಿ ಒಳಗೆ ಹಾಕಬೇಕು. ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರು ಜೊತೆ ಮಾತನಾಡಿದ್ದೇನೆ ಎಂದರು.
ಸಿದ್ದರಾಮಯ್ಯ ಸಲಹೆ
ಸುಪ್ರೀಮ್ ಕೋರ್ಟ್ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಮ್ ಕೋರ್ಟ್ ಹೇಳಿದೆ. ದೇಶದಲ್ಲಿಯೇ ಮೊದಲಬಾರಿ ಮನೆಮನೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ ಎಂದಿದ್ದಾರೆ.
ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಮ್ ಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರ ಕಾಲವ್ಯಯಮಾಡದೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು. ಇದೇ ವರದಿಯನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮುಂದೆ ತನ್ನ ವಾದ ಮಂಡಿಸಿ ಹಿಂದುಳಿದ ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.