Karnataka Politics: ಮಂತ್ರಿಗಿರಿ ಸಿಗದ್ದಕ್ಕೆ ಈಶ್ವರಪ್ಪ ಬಹಿರಂಗ ಅತೃಪ್ತಿ

By Govindaraj SFirst Published Dec 20, 2022, 1:40 AM IST
Highlights

ನನ್ನ ವಿರುದ್ಧದ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಸಿಕ್ಕಿ ಹಲವು ತಿಂಗಳುಗಳಾದರೂ ಇದುವರೆಗೆ ಸಂಪುಟದಲ್ಲಿ ಮತ್ತೆ ಅವಕಾಶ ಸಿಗದೆ ಇರುವುದು ನನಗೆ ನೋವು ಹಾಗೂ ಅಪಮಾನ ಉಂಟುಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದಾರೆ. 

ಬಾಗಲಕೋಟೆ/ಬೆಂಗಳೂರು (ಡಿ.20): ನನ್ನ ವಿರುದ್ಧದ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಸಿಕ್ಕಿ ಹಲವು ತಿಂಗಳುಗಳಾದರೂ ಇದುವರೆಗೆ ಸಂಪುಟದಲ್ಲಿ ಮತ್ತೆ ಅವಕಾಶ ಸಿಗದೆ ಇರುವುದು ನನಗೆ ನೋವು ಹಾಗೂ ಅಪಮಾನ ಉಂಟುಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ನಾನು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನಕ್ಕೆ ಹೋಗುತ್ತಿಲ್ಲ. ಇದು ನನ್ನ ಸೌಮ್ಯ ಪ್ರತಿಭಟನೆ ಎಂದೂ ಅವರು ತೀಕ್ಷ್ಣವಾಗಿ ನುಡಿದಿದ್ದಾರೆ. ಸೋಮವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೋಷಮುಕ್ತನಾಗಿದ್ದರೂ ಯಾವ ಕಾರಣಕ್ಕೆ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಿದೆ. ನನ್ನ ವಿಷಯದಲ್ಲಿ ತೀರ್ಪು ಬಂದು ಕ್ಲೀನ್‌ಚಿಟ್‌ ಸಹ ನೀಡಲಾಗಿದೆ. 

ಮುಖ್ಯಮಂತ್ರಿಗಳು ಸಹ ಸಚಿವ ಸಂಪುಟಕ್ಕೆ ಮತ್ತೆ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. ಇಷ್ಟಾದರೂ ನನ್ನನ್ನು ವಾಪಸ್‌ ಸಂಪುಟಕ್ಕೆ ಸೇರ್ಪಡೆ ಮಾಡುತ್ತಿಲ್ಲ. ಇದರಿಂದ ನನಗೆ ನೋವಿನ ಜತೆಗೆ ಸಾಕಷ್ಟುಅವಮಾನವೂ ಆಗಿದೆ. ಇದನ್ನು ಅರ್ಥ ಮಾಡಿಸುವ ಉದ್ದೇಶದಿಂದ ಸದನದಿಂದ ಹೊರಗುಳಿದು ಸೌಮ್ಯ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಿಂದ ತಾವು ಆರೋಪ ಮುಕ್ತರಾದರೂ ತಮ್ಮನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಈಶ್ವರಪ್ಪ ಮುನಿಸಿಕೊಂಡಿದ್ದಾರೆ. ಈ ನಡುವೆ ಈಶ್ವರಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಭಯೋತ್ಪಾದಕರನ್ನು ಬೆಂಬಲಿಸಿದರೆ ಕಾಂಗ್ರೆಸ್‌ ಬ್ಯಾನ್‌: ಕೆ.ಎಸ್‌.ಈಶ್ವರಪ್ಪ

ರಾಜಕೀಯದಿಂದ ದೂರವಾಗುವ ಸುಳಿವು: ಚುನಾವಣೆ ಸಮೀಪಿಸುತ್ತಿರುವ ಈ ವೇಳೆ ಸಚಿವ ಸ್ಥಾನ ಪಡೆದು ನನಗೇನೂ ಆಗಬೇಕಿಲ್ಲ. ಆದರೆ ರಾಜಕಾರಣದಿಂದ ಗೌರವಯುತ ನಿರ್ಗಮನಕ್ಕೆ ಅಣಿಯಾಗುತ್ತಿರುವ ನನಗೆ ಅದಕ್ಕೂ ಮೊದಲು ನನ್ನ ವಿರುದ್ಧದ ಆರೋಪಗಳಿಂದ ಮುಕ್ತಿ ಪಡೆದ ಸಮಾಧಾನ ಬೇಕಾಗಿದೆ. ನನ್ನ ವಿರುದ್ಧದ ಆರೋಪದಿಂದ ಕಾನೂನು ಬದ್ಧವಾಗಿ ಮುಕ್ತಿ ಸಿಕ್ಕಿರಬಹುದು. ಆದರೆ ಜನತಾ ನ್ಯಾಯಾಲಯದ ಮುಂದೆ ಹಾಜರಾಗಲು ನನಗೆ ಮರಳಿ ಅಧಿಕಾರ ನೀಡಬೇಕಿತ್ತು. ಹಲವಾರು ಬಾರಿ ನನಗೆ ಸಂಪುಟ ವಿಸ್ತರಣೆ ದಿನಾಂಕ ತಿಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಈಗ ಸುಮ್ಮನಿರುವುದು ನಿಜಕ್ಕೂ ಬೇಸರ ಉಂಟುಮಾಡಿದೆ ಎಂದು ಈಶ್ವರಪ್ಪ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಸರ್ಕಾರಿ ಬಂಗಲೆ ತ್ಯಜಿಸಲು ಸಿದ್ಧರಾದರೂ ಮುಖ್ಯಮಂತ್ರಿಗಳು ಬೇಡ ಎಂಬ ಮಾತು ಹೇಳಿದರು. ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದ ಆರೋಪದಿಂದ ಮುಕ್ತರಾದ ಕೂಡಲೇ ನಿಮ್ಮನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ತಾವು ಕೊಟ್ಟಮಾತನ್ನು ಈಡೇರಿಸಲಾಗದ ಸ್ಥಿತಿಯಲ್ಲಿ ಬೊಮ್ಮಾಯಿ ಇದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಯಸಿರುವ ಕೆಲವು ಹಿರಿಯ ನಾಯಕರು ಇದರ ಹಿಂದಿದ್ದಾರೆ. ಇದು ದಶಕಗಳ ಕಾಲದಿಂದ ಪಕ್ಷ ಕಟ್ಟಿದ ನನಗೆ ಆಗಿರುವ ದೊಡ್ಡ ಅವಮಾನ. ಈ ಅವಮಾನ ಸಹಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ ಎಂದು ಈಶ್ವರಪ್ಪ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಲು ಅವಕಾಶ ಇಲ್ಲ: ಕೆ.ಎಸ್.ಈಶ್ವರಪ್ಪ

ಈಶ್ವರಪ್ಪ ಸಿಟ್ಟೇನು?
- ಬೆಳಗಾವಿಯ ಗುತ್ತಿಗೆದಾರನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈಶ್ವರಪ್ಪ
- ಆರೋಪಮುಕ್ತರಾದ ಕೂಡಲೇ ಸಂಪುಟಕ್ಕೆ ಮತ್ತೆ ತೆಗೆದುಕೊಳ್ಳುವ ಭರವಸೆಯನ್ನು ಆಗ ನೀಡಲಾಗಿತ್ತು
- ಕ್ಲೀನ್‌ಚಿಟ್‌ ಸಿಕ್ಕಿ ಹಲವು ತಿಂಗಳಾಗಿದ್ದರೂ ಸಂಪುಟದಲ್ಲಿ ಅವಕಾಶ ದೊರೆಯುತ್ತಿಲ್ಲ ಎಂದು ಆಕ್ರೋಶ
- ಜನತಾ ನ್ಯಾಯಾಲಯದ ಎದುರು ಹಾಜರಾಗಲು ಮರಳಿ ಸಚಿವ ಅಧಿಕಾರ ಬೇಕಿತ್ತು ಎನ್ನುವ ಸಚಿವ
- ಮಂತ್ರಿಗಿರಿ ಸಿಗುತ್ತಿಲ್ಲದಿರುವುದಕ್ಕೆ ಕೆಲ ಹಿರಿಯ ನಾಯಕರು ಸಂಚು ರೂಪಿಸಿದ್ದಾರೆ ಎನ್ನುವ ಈಶ್ವರಪ್ಪ

click me!