ಆಪರೇಶನ್‌ ಹಸ್ತ: ಯಾರು ಬೇಕು, ಬೇಡ ಅನ್ನೋದು ಪಕ್ಷ ತೀರ್ಮಾನಿಸುತ್ತೆ, ಸಚಿವ ರಾಜಣ್ಣ

By Kannadaprabha NewsFirst Published Aug 25, 2023, 8:46 PM IST
Highlights

ಪಕ್ಷಕ್ಕೆ ಬರುವವರಿಗೆ ಯಾರೂ ಬೇಡವೆಂದು ಹೇಳುವುದಿಲ್ಲ. ಹೋಗುವವರಿಗೆ ಇರಿ ಎಂದೂ ಹೇಳುವುದಿಲ್ಲ. ಎಲ್ಲಾ ರಾಜಕೀಯ ಪಕ್ಷದಲ್ಲಿ ಈ ತಂತ್ರಗಾರಿಕೆ ಇದ್ದೇ ಇರುತ್ತದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆ. ಪಕ್ಷಕ್ಕೆ ಯಾರು ಬೇಕು? ಯಾರು ಬೇಡ? ಎಂಬುದನ್ನು ಪಕ್ಷವೇ ತೀರ್ಮಾನ ಮಾಡುತ್ತದೆ. ಅದನ್ನು ಸರ್ಕಾರ ನಿರ್ಧರಿಸುವುದಿಲ್ಲ. ಪಕ್ಷದ ಮುಖಂಡರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ: ಸಚಿವ ಕೆ.ಎನ್‌.ರಾಜಣ್ಣ 

ಬಾಗಲಕೋಟೆ(ಆ.25): ರಾಜಕಾರಣ ನಿಂತ ನೀರಲ್ಲ, ಅದು ಸದಾ ಚಲನಾಶೀಲವಾಗಿರುತ್ತದೆ. ಫಾಸ್ಟ್‌ ಚೇಂಜಿಂಗ್‌ ಇರೋದೆ ರಾಜಕಾರಣದಲ್ಲಿ. ಕಾಂಗ್ರೆಸ್‌ ಪಕ್ಷಕ್ಕೆ ಬಂದವರಿಗೆ ಸ್ವಾಗತ ನೀಡುತ್ತೇವೆ ಆದರೆ, ಸೇರ್ಪಡೆಯನ್ನು ನಮ್ಮ ಪಕ್ಷ ತೀರ್ಮಾನಿಸುತ್ತದೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಆಪರೇಶನ್‌ ಹಸ್ತದ ವಿಚಾರವಾಗಿ ಮಾತನಾಡಿದ ಅವರು, ಪಕ್ಷಕ್ಕೆ ಬರುವವರಿಗೆ ಯಾರೂ ಬೇಡವೆಂದು ಹೇಳುವುದಿಲ್ಲ. ಹೋಗುವವರಿಗೆ ಇರಿ ಎಂದೂ ಹೇಳುವುದಿಲ್ಲ. ಎಲ್ಲಾ ರಾಜಕೀಯ ಪಕ್ಷದಲ್ಲಿ ಈ ತಂತ್ರಗಾರಿಕೆ ಇದ್ದೇ ಇರುತ್ತದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆ. ಪಕ್ಷಕ್ಕೆ ಯಾರು ಬೇಕು? ಯಾರು ಬೇಡ? ಎಂಬುದನ್ನು ಪಕ್ಷವೇ ತೀರ್ಮಾನ ಮಾಡುತ್ತದೆ. ಅದನ್ನು ಸರ್ಕಾರ ನಿರ್ಧರಿಸುವುದಿಲ್ಲ. ಪಕ್ಷದ ಮುಖಂಡರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಚಂದ್ರಯಾನಕ್ಕೆ ಅಪಹಾಸ್ಯ: ಪ್ರಕಾಶ ರೈ ಬಂಧನಕ್ಕೆ ಶ್ರೀರಾಮ ಸೇನೆಯ ಆಗ್ರಹ

ಚುನಾವಣೆ ವೇಳೆ ತಮ್ಮ ಭವಿಷ್ಯ ಕಟ್ಟಿಕೊಳ್ಳೋಕೆ ಪಕ್ಷಾಂತರ ನಡೆಯುತ್ತದೆ. ಆಯನೂರ ಮಂಜುನಾಥ ಪಕ್ಷ ಸೇರಿದ್ದಾರೆ, ಸೋಮಶೇಖರ್‌ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಪಕ್ಷದಿಂದ ಆ ಪಕ್ಷಕ್ಕೆ ಬರೋರು, ಹೋಗೋರು ಇದ್ದೇ ಇರುತ್ತಾರೆ. ಇದು ಸಹಜ ಪ್ರಕ್ರಿಯೆ ಎಂದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಸದೃಢ:

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಪಕ್ಷಕ್ಕೆ ಸೇರಿಸಿಕೊಳ್ಳೋಕೆ ನಾವು ಎಲ್ಲಾ ರೀತಿಯಿಂದಲೂ ವಿಚಾರ ಮಾಡುತ್ತೇವೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅವರ ಅಭಿಪ್ರಾಯ ಕೇಳಿ ಪಕ್ಷ ಮುಂದುವರೆಯುತ್ತದೆ. ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಂಡರೆ ನಮ್ಮ ಪಕ್ಷದಲ್ಲಿರುವ ನಿಷ್ಠಾವಂತರಿಗೆ ತೊಂದರೆ ಆಗಬಾರದು. ಹಾಗಾಗಿ ಎಲ್ಲವನ್ನು ನೋಡಿಕೊಂಡು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಬಿಡುತ್ತೇನೆ ಎನ್ನುವವರು ಹುಚ್ಚರಷ್ಟೇ:

ಕಾಂಗ್ರೆಸ್‌ ಪಕ್ಷದಲ್ಲಿ ಇರುವವರನ್ನು ಹಿಡಿದಿಟ್ಟುಕೊಳ್ಳಲು ಆಪರೇಶನ್‌ ಹಸ್ತದ ತಂತ್ರ ಏನು? ಎಂಬ ಪ್ರಶ್ನೆಗೆ ಕಾಂಗ್ರೆಸ್‌ ಬಿಟ್ಟು ಯಾರೂ ಹೋಗೋದಿಲ್ಲ. ಹೋಗುತ್ತೇನೆ ಎನ್ನುವವರು ಹುಚ್ಚರಷ್ಟೇ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ. ಅಧಿಕಾರದಲ್ಲಿ ಇದ್ದಾಗ ಯಾರೂ ಬಿಟ್ಟು ಹೋಗುವುದಿಲ್ಲ. ಇದೆಲ್ಲ ಸುಳ್ಳು ಎಂದರು.

ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕಾವೇರಿ ನೀರು ಬಿಡುಗಡೆ ತೀರ್ಮಾನ ಸರ್ಕಾರದ್ದಲ್ಲ

ಕಾವೇರಿ ನದಿ ನೀರು ವಿಚಾರವಾಗಿ ಸರ್ವಪಕ್ಷ ಸಭೆ ಕರೆದಿದ್ದು ವಿಳಂಬವಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಕೆ.ಎನ್‌.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷಗಳ ಕೆಲಸವೇ ಟೀಕೆ, ವಿರೋಧ ಮಾಡುವುದಾಗಿದೆ. ಅವರು ನಮ್ಮ ಕೆಲಸವನ್ನು ಸಮರ್ಥಿಸಬೇಕೆಂದು ನಿರೀಕ್ಷೆ ಮಾಡಿಲ್ಲ. ನೀರು ಬಿಡುವುದು, ನಿಲ್ಲಿಸುವುದು ಸರ್ಕಾರದ ಕೈಯಲ್ಲಿ ಇಲ್ಲ. ಅದು ಕಾವೇರಿ ವ್ಯಾಲಿ ಅಥಾರಿಟಿಯಲ್ಲಿದೆ. ಅವರದು ಸಂಪೂರ್ಣ ಟ್ರಿಬ್ಯೂನಲ್‌ ಅವಾರ್ಡ್‌ ಇದೆ. ಅದನ್ನು ಸಂಪೂರ್ಣ ಇಂಪ್ಲಿಮೆಂಟ್‌ ಮಾಡಲು ಪ್ರತ್ಯೇಕ ಎನ್‌ಟಿಟಿ ಇದೆ. ಅದರಲ್ಲಿ ನಿರ್ಣಯ ಮಾಡುತ್ತಾರೆ. ನೀರು ಬಿಡುವುದು, ನಿಲ್ಲಿಸುವ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ಅಂತಿಮ ತೀರ್ಮಾನ ಸರ್ಕಾರದ್ದಲ್ಲ ಎಂದು ತಿಳಿಸಿದರು.

ಸಾಹಿತಿಗಳಿಗೆ ಬೆದರಿಕೆ ದೊಡ್ಡ ಸಂಚು

ರಾಜ್ಯದಲ್ಲಿ ಸಾಹಿತಿಗಳಿಗೆ ಕೊಲೆ ಬೆದರಿಕೆ ಕುರಿತು ಮಾತನಾಡಿದ ಸಚಿವರು, ಕಲಬುರ್ಗಿಯವರ ಕೊಲೆಯಿಂದ ಹಿಡಿದು ಬಹಳಷ್ಟುಸಾಹಿತಿಗಳ ಕೊಲೆ ಆಗಿರುವಂಥದ್ದಿದೆ. ಈಗಲೂ ಸಾಹಿತಿಗಳಿಗೆ ಕೊಲೆ ಬೆದರಿಕೆ ಇದೆ. ಆದರಿದು ಸ್ಥಳೀಯವಾಗಿ ಇರುವಂಥ ಬೆದರಿಕೆಯಲ್ಲ. ಸಾಹಿತಿಗಳ ಬೆದರಿಕೆ ಒಂದು ದೊಡ್ಡ ಸಂಚಾಗಿದೆ. ಸಿದ್ಧಾಂತ ವಿರೋಧಿಸುವವರನ್ನ ಹತ್ಯೆ ಮಾಡುವಂತಹ ಹೊಸ ಸಂಚು ಇತ್ತೀಚಿಗೆ ಶುರುವಾಗಿದೆ. ನಾವೆಲ್ಲರೂ ಇದನ್ನು ಖಂಡಿಸಿದ್ದೇವೆ. ಈಗಾಗಲೇ ಸಾಹಿತಿಗಳಿಗೆ ಗೃಹ ಸಚಿವರು ಭದ್ರತೆ ಒದಗಿಸುವುದಾಗಿ ಹೇಳಿದ್ದು, ಅದರಂತೆ ಸರ್ಕಾರ ಭದ್ರತೆ ನೀಡಿದೆ ಎಂದು ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

click me!