ಬಿಜೆಪಿ, ಕಾಂಗ್ರೆಸ್‌ ಮುಖಂಡರ ನಡುವೆ ವಾಕ್ಸಮರ

By Kannadaprabha News  |  First Published Aug 25, 2023, 8:34 PM IST

ಶಾಸಕ ಕತ್ತಿ ಹೇಳಿಕೆಗೆ ತಿರುಗೇಟು: ಮೊದಲು ತಮ್ಮ ಕುಟುಂಬದ ಹಸ್ತಕ್ಷೇಪ ತಡೆಯಲಿ, ಜನಸಂರ್ಪಕಕ್ಕೆ ಸಿಗದ ಶಾಸಕ ನಿಖಿಲ್‌ ಕತ್ತಿ: ಕಾಂಗ್ರೆಸ್‌ ಮುಖಂಡರ ಆರೋಪ


ಹುಕ್ಕೇರಿ(ಆ.25): ಕ್ಷೇತ್ರದ ಆಡಳಿತದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಶಾಸಕ ನಿಖಿಲ್‌ ಕತ್ತಿ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್‌ ಮುಖಂಡರು, ಮೊದಲು ಕತ್ತಿ ಕುಟುಂಬ ಸದಸ್ಯರಿಂದ ಆಗುತ್ತಿರುವ ಶಿಷ್ಟಾಚಾರ ಉಲ್ಲಂಘನೆ ತಡೆಯಲಿ ಎಂದು ಶಾಸಕರಿಗೆ ಸವಾಲು ಹಾಕಿದ್ದಾರೆ.

ಪಟ್ಟಣದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಕೇಶ್ವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ಮುಡಸಿ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಪುರಸಭೆ ಸದಸ್ಯ ಚಿದಾನಂದ ಕರದನ್ನವರ, ಮಾಜಿ ಸದಸ್ಯ ದಿಲೀಪ ಹೊಸಮನಿ, ಕ್ಷೇತ್ರದ ಶಾಸಕರು ಹತಾಶೆಯಿಂದ ಎ.ಬಿ.ಪಾಟೀಲರ ತೇಜೋವಧೆಯಲ್ಲಿ ತೊಡಗಿದ್ದಾರೆ ಎಂದು ಮೂದಲಿಸಿದರು.

Latest Videos

undefined

ಇಸ್ರೋ ಸಾಧನೆ ಪ್ರಕಾಶ್ ರಾಜ್ ಮುಖಕ್ಕೆ ಕ್ಯಾಕರಿಸಿ ಉಗಿದಂತಾಗಿದೆ: ಪ್ರಮೋದ್ ಮುತಾಲಿಕ್

ಹೊಸ ಸರ್ಕಾರ ರಚನೆ ಬಳಿಕ ಆಡಳಿತ, ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳನ್ನು ವರ್ಗಾಯಿಸುವುದು ಸಹಜ ಪ್ರಕ್ರಿಯೆ. ಇದರಲ್ಲಿ ಯಾರ ಪ್ರಭಾವ ಹಾಗೂ ಶಿಫಾರಸ್ಸು ಮಾಡುವ ಪ್ರಶ್ನೆಯೇ ಉದ್ಭವಿಸದು. ಭ್ರಷ್ಟಾಚಾರ, ಕತ್ತಿ ಕುಟುಂಬದ ಕೈಗೊಂಬೆಯಂತೆ ವರ್ತಿಸುತ್ತಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸಲಾಗಿದೆ. ಇದರಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಶಾಸಕ ನಿಖಿಲ್‌ ಕತ್ತಿ ಹೇಳಿಕೆ ನಿರಾಧಾರ. ಈ ಕುರಿತು ಕತ್ತಿ ಅವರಲ್ಲಿ ಯಾವುದೇ ಸಾಕ್ಷ್ಯಾಧಾರ ಇದ್ದಲ್ಲಿ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಸಾಂವಿಧಾನಕವಾಗಿ ಯಾವುದೇ ಸ್ಥಾನಮಾನ ಹೊಂದಿರದ ಶಾಸಕರ ಚಿಕ್ಕಪ್ಪ ರಮೇಶ ಕತ್ತಿ, ಸಹೋದರರಾದ ಪೃಥ್ವಿ ಮತ್ತು ಪವನ ಕತ್ತಿ ಅವರು ಸರ್ಕಾರಿ ಕಾಮಗಾರಿಗಳ ಪೂಜೆ-ಉದ್ಘಾಟನೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಮನೆಗೆ ಕರೆಯಿಸಿ ಹೆದರಿಕೆ ಹಾಕುವ ಪರಿಪಾಠ ಕತ್ತಿ ಕುಟುಂಬಕ್ಕಿದೆ. ಶಾಸಕರು ಈ ಸಂಗತಿ ಮರೆತಂತಿದ್ದು ಮೊದಲು ಇದನ್ನು ತಿದ್ಧಿಕೊಳ್ಳಲಿ ಎಂದು ಕಾಂಗ್ರೆಸ್‌ ಮುಖಂಡರು ಹರಿಹಾಯ್ದರು.

ಕತ್ತಿ ಕುಟುಂಬದ ದ್ವೇಷದ ರಾಜಕಾರಣಕ್ಕೆ ಅನೇಕ ಅಮಾಯಕರು ಬಲಿಪಶುಗಳಾಗಿದ್ದಾರೆ. ವಿರೋಧಿ ಪಕ್ಷದವರನ್ನು ಶತ್ರುಗಳಂತೆ ನೋಡುತ್ತಾರೆ. ಪೊಲೀಸರ ಮೇಲೆ ಒತ್ತಡ ತಂದು ಕೆಲವರ ಮೇಲೆ ಖೊಟ್ಟಿಕೇಸ್‌ ದಾಖಲಿಸಿದ್ದಾರೆ. ಶಾಸಕರು ಜನರ ಅಹವಾಲು ಆಲಿಸದೇ, ಅಭಿವೃದ್ಧಿ ಕಡೆಗೆ ಗಮನಹರಿಸದೇ ವಿದೇಶ ಸುತ್ತುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

ಚಂದ್ರಯಾನ-3 ಸಕ್ಸಸ್: ವಿಕ್ರಮ‌ ಪರಾಕ್ರಮದ ಹಿಂದಿದ್ದಾರೆ ಬೆಳಗಾವಿಯ ವಿಜ್ಞಾನಿಗಳು..!

ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಎ.ಬಿ.ಪಾಟೀಲರ ಬಳಿ ಬಂದು ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದು ಅಧಿಕಾರಿಗಳ ಮೇಲೆ ಎಬಿ ಎಂದಿಗೂ ದಬ್ಬಾಳಿಕೆ, ಅಸಭ್ಯವಾಗಿ ವರ್ತಿಸಿಲ್ಲ. ಅಧಿಕಾರಿಗಳ ಎಬಿ ಭೇಟಿಯನ್ನೇ ತಪ್ಪಾಗಿ ಅರ್ಥೈಸಿಕೊಂಡ ನಿಖಿಲ್‌ ಕತ್ತಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಕ್ಷೇತ್ರದಲ್ಲಿ ಜನ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು ಶಾಸಕರು ಜನ ಸಂಪರ್ಕಕ್ಕೆ ಸಿಗುತ್ತಿಲ್ಲ. ಚುನಾವಣೆಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾಗಿ ಮತದಾರರಿಗೆ ಇದೀಗ ಮನವರಿಕೆಯಾಗುತ್ತಿದೆ. ನಿಖಿಲ್‌ ಕತ್ತಿ ಇಲ್ಲಸಲ್ಲದ ಆರೋಪ ಬದಿಗಿಟ್ಟು ಎಬಿ ಮಾರ್ಗದರ್ಶನ ಪಡೆದು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದರು. ಮುಖಂಡರಾದ ಅವಿನಾಶ ನಲವಡೆ, ಮೋಶಿನ್‌ ಪಠಾಣ, ಮಹೇಶ ಹಟ್ಟಿಹೊಳಿ, ಪ್ರಶಾಂತ ಕೋಳಿ, ಪ್ರವೀಣ ನೇಸರಿ ಮತ್ತಿತರರು ಉಪಸ್ಥಿತರಿದ್ದರು.

click me!