ಅಕ್ಕಿ ಪಡೆಯದ ಬಿಪಿಎಲ್‌ ಕಾರ್ಡುದಾರರಿಗೆ ಕುತ್ತು: ಸಚಿವ ಮುನಿಯಪ್ಪ ಹೇಳಿದ್ದೇನು?

By Kannadaprabha News  |  First Published Jul 27, 2023, 4:45 AM IST

ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್‌ ಕಾರ್ಡ್‌ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್‌ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. 


ಬೆಂಗಳೂರು (ಜು.27): ‘ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್‌ ಕಾರ್ಡ್‌ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್‌ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. ಹೀಗಾಗಿ ಅಂತಹವರನ್ನು ಪತ್ತೆ ಹಚ್ಚಿ ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ನಿರ್ಧರಿಸಿದ್ದು, ಇದಕ್ಕಾಗಿ ಮನೆ-ಮನೆ ಸಮೀಕ್ಷೆ ನಡೆಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಹಲವು ಬಿಪಿಎಲ್‌ ಕಾರ್ಡ್‌ದಾರರು ಹಲವು ತಿಂಗಳಿಂದ ಪಡಿತರ ಅಕ್ಕಿಯನ್ನೇ ಪಡೆದಿಲ್ಲ. ಅವರು ಕೇವಲ ಆಯುಷ್ಮಾನ್‌ ಭಾರತ್‌ ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಸೀಮಿತವಾಗಿ ಬಿಪಿಎಲ್‌ ಕಾರ್ಡ್‌ ಬಳಸುತ್ತಾರೆ.

ಹೀಗಾಗಿ ಅಗತ್ಯವಿಲ್ಲದವರ ಹೆಸರಿನಲ್ಲಿ ಅಕ್ಕಿ ದುರ್ಬಳಕೆ ಆಗುವುದನ್ನು ತಪ್ಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ ಬಿಪಿಎಲ್‌ ಕಾರ್ಡ್‌ದಾರರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಗೆ ಹಲವರು ಅಕ್ಕಿ ಪಡೆಯುತ್ತಿಲ್ಲ. ಅಕ್ಕಿ ಪಡೆದರೂ ಬೇರೆಯವರಿಗೆ ನೀಡುವುದು, ಕಾಳ ಸಂತೆಯಲ್ಲಿ ಮಾರುವುದು ಮಾಡುತ್ತಾರೆ. ಇಂತಹ ದುರ್ಬಳಕೆ ತಡೆಯಲು ಅಗತ್ಯವಿರುವವರಿಗೆ ಮಾತ್ರ ಅಕ್ಕಿ ಪೂರೈಸಲು ಮನೆ-ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

Tap to resize

Latest Videos

ಮಹದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ​​​​​: ಸಿದ್ದರಾಮಯ್ಯ

ಹೊಸ ಕಾರ್ಡ್‌ಗೆ 3 ಲಕ್ಷ ಅರ್ಜಿ: ಇನ್ನು ಹೊಸದಾಗಿ ಬಿಪಿಎಲ್‌ ಕಾರ್ಡ್‌ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವು ಹಲವು ವರ್ಷಗಳಿಂದ ವಿಲೇವಾರಿಗೆ ಬಾಕಿಯಿವೆ. ಸದ್ಯದಲ್ಲೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್‌ ನೀಡಲಾಗುವುದು. ಬಳಿಕ ಅವರಿಗೆ 10 ಕೆ.ಜಿ. ಅಕ್ಕಿ ಅಥವಾ 5 ಕೆ.ಜಿ. ಅಕ್ಕಿ, 5 ಕೆ.ಜಿ. ಅಕ್ಕಿಯ ನಗದು ಪಾವತಿಸಲಾಗುವುದು ಎಂದು ಹೇಳಿದರು.

3-4 ದಿನಗಳಲ್ಲಿ ಬಾಕಿ ಹಣ ವರ್ಗಾವಣೆ: ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲು ಹಣ ವರ್ಗಾವಣೆ ಬಾಕಿ ಇರುವ ಫಲಾನುಭವಿಗಳಿಗೆ 3-4 ದಿನಗಳಲ್ಲಿ ಹಣ ವರ್ಗಾಯಿಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 10 ರಿಂದ ಯೋಜನೆಗೆ ಚಾಲನೆ ನೀಡಲಾಗಿದ್ದು ಜುಲೈ 26ರವರೆಗೆ 28 ಜಿಲ್ಲೆಗಳ 97.27 ಲಕ್ಷ ಕಾರ್ಡ್‌ಗಳ 3.26 ಕೋಟಿ ಫಲಾನುಭವಿಗಳಿಗೆ ಬರೋಬ್ಬರಿ 566 ಕೋಟಿ ರು.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ 3.08 ಲಕ್ಷ ಕಾರ್ಡುಗಳ ಪೈಕಿ 10.83 ಲಕ್ಷ ಫಲಾನುಭವಿಗಳಿಗೆ ಇನ್ನೆರಡು ದಿನಗಳಲ್ಲಿ 17.47 ಕೋಟಿ ರು.ಗಳು ಪಾವತಿಯಾಗಲಿದೆ. ಉಡುಪಿ ಮತ್ತು ವಿಜಯನಗರ ಜಿಲ್ಲೆಯ 3.84 ಲಕ್ಷ ಕಾರ್ಡುಗಳ 15.55 ಲಕ್ಷ ಫಲಾನುಭವಿಗಳ 25.43 ಕೋಟಿ ರು.ಸಂದಾಯ ಬಾಕಿ ಉಳಿದಿದ್ದು ಡಿಎಸ್‌ಸಿ ಕೀ ಮ್ಯಾಪಿಂಗ್‌ ಬಳಿಕ ಹಣ ಖಾತೆಗೆ ಬಂದು ಸೇರಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

30.90 ಲಕ್ಷ ಕಾರ್ಡ್‌ದಾರರಿಗೆ ಹಣ ಸಂದಾಯ ಆಗಿಲ್ಲ: ಇನ್ನು 53,547 ಕಾರ್ಡ್‌ಗಳಲ್ಲಿ ಕುಟುಂಬದ ಮುಖ್ಯಸ್ಥರ ಮಾಹಿತಿ ಇಲ್ಲ. 4,845 ಕಾರ್ಡ್‌ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಕುಟುಂಬದ ಮುಖ್ಯಸ್ಥರ ಹೆಸರಿದೆ. 54,349 ಮಂದಿ ಆಧಾರ್‌ ಲಿಂಕ್‌ ಮಾಡಿಲ್ಲ. ಮಾಚ್‌ರ್‍, ಏಪ್ರಿಲ್‌, ಮೇ ತಿಂಗಳಲ್ಲಿ 5.32 ಲಕ್ಷ ಮಂದಿ ಪಡಿತರ ಅಕ್ಕಿ ಪಡೆದಿಲ್ಲ. 3ಕ್ಕಿಂತ ಕಡಿಮೆ ಸದಸ್ಯರ 3.40 ಲಕ್ಷ ಅಂತ್ಯೋದಯ ಕಾರ್ಡ್‌ಗಳು, ಜತೆಗೆ ಬ್ಯಾಂಕ್‌ ಖಾತೆ ಇಲ್ಲದಿರುವುದು, ಖಾತೆ ನಿಷ್ಕಿ್ರಯ, ತಪ್ಪಾಗಿ ಆಧಾರ್‌ ಸಂಖ್ಯೆ ನೀಡಿರುವುದು, ರೇಷನ್‌ ಕಾರ್ಡ್‌ಗೆ ಆಧಾರ್‌ ಜೋಡಣೆ ಆಗದಿರುವುದು, ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ದತ್ತಾಂಶ ಇಲ್ಲದಿರುವುದು ಸೇರಿ ವಿವಿಧ ತಾಂತ್ರಿಕ ಕಾರಣಗಳಿಂದ 21.69 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಅನ್ನಭಾಗ್ಯದ ಹಣ ಸೌಲಭ್ಯದಿಂದ ದೂರವುಳಿದಿವೆ. ಒಟ್ಟಾರೆ 30.90 ಲಕ್ಷ ಕಾರ್ಡ್‌ದಾರರಿಗೆ ನಗದು ಸಿಗದಂತಾಗಿದೆ. ಆದರೆ, ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಲಿಂಕ್‌ ಸಮಸ್ಯೆ ಪರಿಹರಿಸಿದರೆ ಆಗಸ್ಟ್‌ ತಿಂಗಳಲ್ಲಿ ಅಕ್ಕಿ ಬದಲು ಪ್ರತಿ ಫಲಾನುಭವಿಗೆ 170 ರು.ನಂತೆ 5 ಕೆ.ಜಿ. ಅಕ್ಕಿಯ ಹಣ ಖಾತೆಗಳಿಗೆ ಪಾವತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನರ್ಹರ ಕಾರ್ಡ್‌ ರದ್ದತಿ?: ರಾಜ್ಯದಲ್ಲಿ ಬಿಪಿಎಲ್‌ ಮಾನದಂಡಗಳನ್ನು ಉಲ್ಲಂಘಿಸಿ ಲಕ್ಷಾಂತರ ಮಂದಿ ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಆಹಾರ ಇಲಾಖೆಯು ಮನೆ- ಮನೆ ಸಮೀಕ್ಷೆ ಮಾಡಲು ಮುಂದಾಗಿದ್ದು, ತನ್ಮೂಲಕ ಮಾನದಂಡ ಮೀರಿ ಪಡೆದ ಬಿಪಿಎಲ್‌ ರದ್ದು ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಎರಡು ಮಾದರಿ ಬಿಪಿಎಲ್‌ ಕಾರ್ಡ್‌ ವಿತರಣೆಗೆ ಚಿಂತನೆ: ರಾಜ್ಯದಲ್ಲಿ ಎಷ್ಟು ಮಂದಿ ಬಿಪಿಎಲ್‌ ಕಾರ್ಡ್‌ದಾರರು ಅಕ್ಕಿ ಪಡೆಯಲು, ಎಷ್ಟುಮಂದಿ ಕೇವಲ ವೈದ್ಯಕೀಯ ಸೌಲಭ್ಯ ಪಡೆಯಲು ಬಳಸುತ್ತಿದ್ದಾರೆ ಎಂದು ಪರಿಶೀಲಿಸಿ ಆಂಧ್ರದ ಮಾದರಿಯಲ್ಲಿ ಪ್ರತ್ಯೇಕ ಕಾರ್ಡ್‌ ತರುತ್ತೀರಿಯೇ ಎಂಬ ಪ್ರಶ್ನೆಗೆ, ‘ಆ ಬಗ್ಗೆಯೂ ಚಿಂತನೆ ನಡೆದಿದೆ’ ಎಂದು ಮುನಿಯಪ್ಪ ಉತ್ತರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್‌ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆಯೂ ನಮ್ಮ ಇಲಾಖೆ ಗಮನಕ್ಕೆ ಬಂದಿದೆ. ಅಕ್ಕಿ ಅಗತ್ಯವಿಲ್ಲದವರಿಗೆ ಪ್ರತ್ಯೇಕ ಬಿಪಿಎಲ್‌ ಕಾರ್ಡ್‌ ನೀಡಿದರೆ ಅದು ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ 2016ರಲ್ಲಿ ನಿಗದಿ ಮಾಡಿದ್ದ ಮಾನದಂಡಗಳ ಪ್ರಕಾರ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಾಯಂ ನೌಕರರು, ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್‌ ಕಾರ್ಡ್‌ ಪಡೆಯುವಂತಿಲ್ಲ.

ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌: ಸಚಿವ ದಿನೇಶ್‌ ಗುಂಡೂರಾವ್‌

ಜತೆಗೆ ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ ಅಥವಾ ಅದಕ್ಕಿಂತ ಹೆಚ್ಚು ಒಣ, ನೀರಾವರಿ ಭೂಮಿ ಹೊಂದಿರುವ, ನಗರದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ನಿವಾಸ ಹೊಂದಿರುವ, ಟ್ರಾಕ್ಟರ್‌, ಕ್ಯಾಬ್‌, ಟ್ಯಾಕ್ಸಿ ಹೊರತಾಗಿ ಸ್ವಂತ ಬಳಕೆಯ ಕಾರು ಹೊಂದಿರುವ, ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಪಡೆಯುವಂತಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಇದೇ ಮಾನದಂಡ ಅಥವಾ ಈ ಕಾಲಕ್ಕೆ ತಕ್ಕಂತೆ ಪರಿಷ್ಕೃತ ಮಾನದಂಡ ನಿಗದಿಪಡಿಸಿ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಲೂ ಸಹ ಮನೆ-ಮನೆ ಸಮೀಕ್ಷೆ ನೆರವಾಗಬಹುದು ಎನ್ನಲಾಗಿದೆ.

click me!