
ಬೆಂಗಳೂರು (ಜು.27): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ‘ಪಂಚ ಗ್ಯಾರಂಟಿ’ ಕಾರ್ಯಕ್ರಮವನ್ನು ರಾಜ್ಯದ ಜನರು ದೊಡ್ಡ ಪ್ರಮಾಣದಲ್ಲಿ ಸ್ವಾಗತಿಸಿ, ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮಗಳು ‘ಉಚಿತ’ ಅಲ್ಲ, ಜನರ ಹಕ್ಕಾಗಿದ್ದು ಜನರ ಹಣವನ್ನು ಪುನಃ ಅವರಿಗೇ ಹಿಂದಿರುಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿಶೇಷವಾಗಿ ‘ಶಕ್ತಿ’, ‘ಗೃಹಜ್ಯೋತಿ’ ಹಾಗೂ ‘ಗೃಹ ಲಕ್ಷ್ಮೀ’ ಕಾರ್ಯಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ ಎಂದಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ, ಸರ್ಕಾರದ ಜನಪ್ರಿಯತೆ ಕುಸಿಯುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ನಾಡಿ ಮಿಡಿತ ಅರಿಯಲು ಜುಲೈ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ಗ್ಯಾರಂಟಿ ಯೋಜನೆಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡ ಡಿಜಿಟಲ್ ಮಾಧ್ಯಮ ‘ಈ ದಿನ ಡಾಟ್ ಕಾಂ’ ಪ್ರಕಟಣೆ ತಿಳಿಸಿದೆ.
ಸಮೀಕ್ಷೆಯಲ್ಲಿ ಏನಿದೆ?: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ಕಾರ್ಯಕ್ಷಮತೆ ಹೇಗಿದೆ? ಗ್ಯಾರಂಟಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತರುವ ನಂಬಿಕೆ ಇದೆಯೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಜನರ ಅಭಿಪ್ರಾಯ ಪಡೆಯಲಾಗಿದ್ದು, ಸಮೀಕ್ಷೆಯಲ್ಲಿ ವ್ಯಕ್ತವಾದ ಪ್ರಮುಖ ಅಂಶಗಳು ಈ ರೀತಿ ಇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಶೇ.69ರಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಶೇ.42ರಷ್ಟು ಜನ ಸಂಪೂರ್ಣ ತೃಪ್ತಿ, ಶೇ.27ರಷ್ಟು ಜನರು ಸ್ವಲ್ಪ ಮಟ್ಟಿಗೆ ತೃಪ್ತಿ ಹಾಗೂ ಶೇ.6ರಷ್ಟುಮಂದಿ ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಒಟ್ಟು ಪ್ರತಿಕ್ರಿಯಿಸಿದ ಮಹಿಳೆಯರಲ್ಲಿ ಶೇ.70ರಷ್ಟು ಮಂದಿ ಸರ್ಕಾರದ ಬಗ್ಗೆ ಸಂತೋಷಪಟ್ಟಿದ್ದಾರೆ.
ಮಹದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಿದ್ದರಾಮಯ್ಯ
ಐದು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸುವ ವಿಶ್ವಾಸವಿದೆ ಎಂದು ಶೇ.61 ಮಂದಿ ಹೇಳಿದರೆ, ಶೇ.16ರಷ್ಟು ಮಂದಿ ವಿಶ್ವಾಸ ಇಲ್ಲ ಎಂದಿದ್ದಾರೆ. ಶೇ.23ರಷ್ಟುಜನ ಈಗಲೇ ಹೇಳಲು ಅಸಾಧ್ಯ ಎಂದಿದ್ದಾರೆ. ಒಟ್ಟಾರೆ ಪ್ರತಿಕ್ರಿಯಿಸಿದ ಶೇ.61 ಮಹಿಳೆಯರು, ಶೇ.60 ಪುರುಷರು ಯೋಜನೆ ಜಾರಿಗೊಳಿಸುವ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ.50ರಷ್ಟುಜನರು ಗ್ಯಾರಂಟಿ ಕಾರ್ಯಕ್ರಮ ಈಡೇರಿಕೆಗೆ ಮೊದಲ ಆದ್ಯತೆ ನೀಡಬೇಕು, ನಂತರದ ಆದ್ಯತೆ ಬೆಲೆ ಏರಿಕೆ ನಿಯಂತ್ರಣಕ್ಕೆ ಕೊಡಬೇಕು ಎಂದು ಹೇಳಿದ್ದಾರೆ. ಉಳಿದಂತೆ ಮೂರನೇ ಆದ್ಯತೆ ಭ್ರಷ್ಟಾಚಾರ ತಡೆಗೆ, ನಾಲ್ಕನೆ ಆದ್ಯತೆ ಸರ್ಕಾರಿ ಶಾಲೆ, ಆಸ್ಪತ್ರೆಗಳ ಸುಧಾರಣೆಗೆ, ಐದನೇ ಆದ್ಯತೆ ಉದ್ಯೋಗ ಸೃಷ್ಟಿಗೆ, ಆರನೆ ಆದ್ಯತೆ ಕೋಮು ಸೌಹಾರ್ದತೆ ಹೆಚ್ಚಿಸಲು ನೀಡಬೇಕು ಹಾಗೂ ಕೊನೆಯ ಆದ್ಯತೆ ಅಪರಾಧ ತಡೆಗಟ್ಟಲು ನೀಡಬೇಕು ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಅಗತ್ಯ: ಶೇ.68ರಷ್ಟು ಜನ ಗ್ಯಾರಂಟಿ ಯೋಜನೆ ಜಾರಿ ಅಗತ್ಯವಿತ್ತು ಎಂದಿರುವುದು ಸಮೀಕ್ಷೆಯಲ್ಲಿ ಕಂಡುಬಂದ ವಿಶೇಷವಾಗಿದೆ. ಆದರೆ ಶೇ.24ರಷ್ಟುಜನ ಯೋಜನೆಯನ್ನು ವಿರೋಧಿಸಿದ್ದಾರೆ. ಶೇ.8ರಷ್ಟು ಜನ ಗೊತ್ತಿಲ್ಲ ಎಂದಿದ್ದಾರೆ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ಕಡಿಮೆ ವೇತನದಾರರು ಇಂತಹ ಯೋಜನೆ ಅಗತ್ಯವಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಶೇ.70 ಸಣ್ಣ ಉದ್ಯಮಿಗಳು, ಆಟೋ ಚಾಲಕರು, ಅಂಗಡಿ ಮಾಲೀಕರು, ಉಬರ್/ಸ್ವಿಗ್ಗಿ ಚಾಲಕರು (ಶೇ.64) ಸ್ವಾಗತಿಸಿದ್ದಾರೆ. ಹಿಂದುಗಳಿಗಿಂತ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಹೆಚ್ಚು ಸ್ವಾಗತಿಸಿರುವುದು ಗಮನಾರ್ಹವಾಗಿದೆ.
ಶೇ.42.56ರಷ್ಟು ಜನರು ಗ್ಯಾರಂಟಿ ಕಾರ್ಯಕ್ರಮವನ್ನು ಸರಿಯಾಗಿ ಜಾರಿ ಮಾಡುತ್ತಿದ್ದಾರೆ ಎಂದು ಹೇಳಿದರೆ, ಶೇ.42.80ರಷ್ಟುಜನರು ಸರಿಯಾಗಿ ಜಾರಿ ಮಾಡುತ್ತಿಲ್ಲ ಎಂದಿದ್ದಾರೆ. ಆದರೆ ಶೇ.14.6ರಷ್ಟು ಜನರು ಯೋಜನೆಗಳ ಪರಿಕಲ್ಪನೆಯೇ ವಿಕೃತಿ ಎಂದು ಹೇಳಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ಪೂರಕ: ಶೇ.80ರಷ್ಟು ಜನರು ಶಕ್ತಿ ಯೋಜನೆ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಹಾಯ ಮಾಡುತ್ತದೆ ಎಂದಿದ್ದರೆ, ಶೇ.16ರಷ್ಟು ಜನರು ಮಹಿಳೆಯರಿಗೆ ಸಹಾಯ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ಸಣ್ಣ ಪುಟ್ಟವಿವಾದಗಳ ಹೊರತಾಗಿಯೂ ‘ಶಕ್ತಿ’ ಯೋಜನೆಯನ್ನು ಜನರು ಮೆಚ್ಚಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಉಚಿತ ಅಲ್ಲ, ಜನರ ಹಕ್ಕು: ಗ್ಯಾರಂಟಿ ಕಾರ್ಯಕ್ರಮ ಬಿಟ್ಟಿ/ ಉಚಿತ ಎಂಬ ಮಾತನ್ನು ತಳ್ಳಿ ಹಾಕಿರುವ ಶೇ.73ರಷ್ಟುಜನರು, ಯೋಜನೆಗಳು ಜನರ ಹಕ್ಕುಗಳಾಗಿವೆ. ಕಾರ್ಯಕ್ರಮಗಳ ರೂಪದಲ್ಲಿ ಜನರ ಹಣವನ್ನು ಅವರಿಗೇ ವಾಪಸ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಶೇ.19ರಷ್ಟುಜನರು ತೆರಿಗೆ ಪಾವತಿದಾರರಿಗೆ ಹೆಚ್ಚು ವೆಚ್ಚವಾಗುತ್ತದೆ ಎಂದಿದ್ದಾರೆ. ಶೇ.84ರಷ್ಟುಕೃಷಿ/ಪ್ರಾಸಂಗಿಕ ಕಾರ್ಮಿಕರು ಇವು ಉಚಿತವಲ್ಲ ಎಂದು ಭಾವಿಸಿದ್ದಾರೆ. 50 ಸಾವಿರ ರು.ಗಿಂತ ಹೆಚ್ಚಿನ ಆದಾಯ ಪಡೆಯುವ ಶೇ.41ರಷ್ಟುಜನರು ಈ ಯೋಜನೆ ವಿಪರೀತವಾಗಿವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಯುವ ನಿಧಿ ಯೋಜನೆಯಡಿ ಭತ್ಯೆ ನೀಡುವುದು ನಿರುದ್ಯೋಗಿ ಯುವಕರಿಗೆ ಸಹಾಯಕವಾಗಲಿದೆ ಎಂದು ಶೇ.66 ಮಂದಿ ಹೇಳಿದ್ದರೆ, ಯಾವುದೇ ಆದಾಯ ಮೂಲ ಇಲ್ಲದ ಶೇ. 23ರಷ್ಟುಜನರು ವಿರೋಧಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವೇತನ ಪಡೆಯುವ ಶೇ.67 ಮಂದಿ ಯೋಜನೆಯಿಂದ ಉಪಯೋಗವಿಲ್ಲ ಎಂದಿದ್ದಾರೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ, ಖಂಡನೀಯ ಎಂದು ಶೇ.57 ಮಂದಿ ಹೇಳಿದ್ದರೆ, ಶೇ.23 ಮಂದಿ ಕೇಂದ್ರದ ನಿರ್ಧಾರ ಸರಿ ಎಂದಿದ್ದರೆ, ಶೇ.19 ಮಂದಿ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಮೀಕ್ಷೆಯ ವಿಧಾನ: ರಾಜ್ಯದ 39 ವಿಧಾನಸಭಾ ಕ್ಷೇತ್ರದ 152 ಬೂತ್‌ಗಳಲ್ಲಿ 2455 ಜನರನ್ನು ರಾರಯಂಡಮ್ ಆಗಿ ಆಯ್ಕೆ ಮಾಡಿ ಸಮೀಕ್ಷೆ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 60 ಜನರ ಪೈಕಿ ಶೇ.55.2 ಪುರುಷರು, ಶೇ.44.8 ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇ.81 ಗ್ರಾಮೀಣ ಪ್ರದೇಶ, ಶೇ.19ರಷ್ಟುನಗರ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಅನಕ್ಷರಸ್ಥರಿಂದ ಹಿಡಿದು ಸ್ನಾತಕೋತ್ತರ ಪದವೀಧರರು ಪ್ರತಿಕ್ರಿಯಿಸಿದ್ದಾರೆ. ಶೇ.22 ಇತರೆ ಹಿಂದುಳಿದ ವರ್ಗ, ಶೇ.18 ಪರಿಶಿಷ್ಟರು, ಶೇ.10 ಲಿಂಗಾಯತರು, ಶೇ.13 ಒಕ್ಕಲಿಗರು ಹಾಗೂ ಶೇ.11 ಮುಸ್ಲಿಮರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್: ಸಚಿವ ದಿನೇಶ್ ಗುಂಡೂರಾವ್
ಸಮೀಕ್ಷೆಯ ಫಲಿತಾಂಶವೇನು?
* ಸರ್ಕಾರ ಐದೂ ಗ್ಯಾರಂಟಿ ಜಾರಿಗೊಳಿಸುವ ವಿಶ್ವಾಸವಿದೆ 61%
* ಗ್ಯಾರಂಟಿ ಯೋಜನೆಗಳ ಜಾರಿಗೆ ಮೊದಲ ಆದ್ಯತೆ ನೀಡಿ 50%
* ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು ಅತ್ಯಗತ್ಯವಾಗಿತ್ತು 68%
* ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ತಪ್ಪು 24%
* ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿವೆ 43%
* ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಪೂರಕ 80%
* ಗ್ಯಾರಂಟಿ ಯೋಜನೆ ಬಿಟ್ಟಿಯಲ್ಲ, ಅದು ನಮ್ಮದೇ ಹಣ 73%
* ನಿರುದ್ಯೋಗ ಭತ್ಯೆ ನೌಕರಿಯಿಲ್ಲದ ಯುವಕರಿಗೆ ವರದಾನ 66%
* ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದುದು ತಪ್ಪು 57%
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.