ಸಿಎಂ ಗುಂಡು ಕಲ್ಲು ಇದ್ದ ಹಾಗೆ ಇದ್ದಾರೆ. ಸಿದ್ದರಾಮಯ್ಯ ಮೊದಲು ಹೇಗೆ ಇದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರು (ಆ.04): ಸಿಎಂ ಗುಂಡು ಕಲ್ಲು ಇದ್ದ ಹಾಗೆ ಇದ್ದಾರೆ. ಸಿದ್ದರಾಮಯ್ಯ ಮೊದಲು ಹೇಗೆ ಇದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಸಿಎಂ ಸಿದ್ದರಾಮಯ್ಯ ಡಿಸ್ಟರ್ಬ್ ಆಗಿದ್ದಾರೆ ಎಂಬ ವಿಚಾರ ಕುರಿತು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಬೊಕ್ಕಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬೊಕ್ಕಹಳ್ಳಿಗೆ ಬರದೇ ಇರೋದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಬೇರೆಡೆ ಪ್ರವಾಸಕ್ಕೆ ತೆರಳಲು ಸಮಯವಾಗಿದ್ದ ಕಾರಣಕ್ಕೆ ಬರಲು ಆಗಿಲ್ಲ.
ಶಿರಾಡಿ ಘಾಟ್ ಗೆ ಹೋಗಬೇಕಾಗಿದ್ದರಿಂದ ಅಲ್ಲಿಗೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈ ಭಾಗದವರು ಭೇಟಿ ಆಗಿ ಬಹಳ ದಿನಗಳಾಗಿತ್ತು. ನೆರೆ ಇರೋದ್ರಿಂದ ಜನರ ನೆರವಿಗೆ ಹೋಗಿ, ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಭೆ ಸೇರಿದ ಮೇಲೆ ರಾಜಕೀಯ ಚರ್ಚೆ ಆಗಿಯೇ ಆಗುತ್ತದೆ. ನೆರೆ, ಅಭಿವೃದ್ಧಿ, ರಾಜಕೀಯ ಬೇಜವಾಬ್ದಾರಿತನ, ವ್ಯಕ್ತಿಗತ ಚಾರಿತ್ರ್ಯ ಹರಣ, ಒಬ್ಬರ ಮೇಲೆ ಕಪ್ಪು ಮಸಿ ಬಳಿಯೋದೇ ಹೀಗೆ ಎಂಬೆಲ್ಲ ವಿಚಾರಗಳೂ ಚರ್ಚೆ ಆಗಿವೆ ಎಂದರು.
ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ತಿರಸ್ಕಾರ ಭಾವವಿತ್ತು, ಇದೀಗ ಪುರಸ್ಕಾರ ಬಂದಿದೆ: ಸಚಿವ ಮಧು ಬಂಗಾರಪ್ಪ
ಪಾದಯಾತ್ರೆಗೆ ಕಿಡಿ: ರಾಜ್ಯ ಜನರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಜನ ಜಾನುವಾರುಗಳಿಗೆ ನಷ್ಟ ಆಗ್ತಾ ಇದೆ. ಪ್ರಜ್ಞೆ ಇರುವವರು ಜನರ ಕಷ್ಟದಲ್ಲಿ ಭಾಗಿಯಾಗಬೇಕು. ಅಲ್ಲಿ ವಿಷಯವೇ ಇಲ್ಲದೇ ಇರುವುದಕ್ಕೆ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರ ಪಾತ್ರವೇನು ಇಲ್ಲ. ಇದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಜವಾಬ್ದಾರಿಯುತ ವಿರೋಧ ಪಕ್ಷ ಎನ್ನಬೇಕೋ ಅಥವಾ ಬೇಜವಾಬ್ದಾರಿ ಎನ್ನಬೇಕೋ ಹೇಳಿ ಎಂದು ಕಿಡಿಕಾರಿದರು.
ಸಂತ್ರಸ್ತರಿಗೆ 1.5 ಲಕ್ಷ ಮೌಲ್ಯ 100 ಹೊದಿಕೆಗಳನ್ನು ವಿತರಣೆ: ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಕಪಿಲಾ ನದಿಯ ಪ್ರವಾಹದಿಂದ ಹಾನಿಗೊಳಗಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್ ನೀಡಿರುವ ಸುಮಾರು 1.5 ಲಕ್ಷ ಮೌಲ್ಯದ 100 ಹೊದಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸಂತ್ರಸ್ತರಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಅವರು ಇದೇ ಗ್ರಾಮದವರಾಗಿದ್ದು, ನೆರೆ ಪ್ರವಾಹದಿಂದ ನೊಂದಿರುವ ಜನರಿಗೆ ನೆರವು ನೀಡಬೇಕು ಎಂಬ ಮನೋಭಾವನೆಯಿಂದಾಗಿ ತಲಾ 1.5 ಸಾವಿರ ಮೌಲ್ಯದ ಗುಣಮಟ್ಟದ 100 ಹೊದಿಕೆಗಳನ್ನು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ 100 ಕುಟುಂಬಗಳಿಗೆ ವಿತರಣೆ ನಡೆಸಿರುವುದು ಸಂತಸ ತಂದಿದೆ. ನೊಂದವರ ಸಂಕಷ್ಟಕ್ಕೆ ಆಗಬೇಕಿರುವುದು ಮನುಜ ಧರ್ಮ ಈ ಕಾರ್ಯದಿಂದಾಗಿ ಬೇರೆಯವರಿಗೆ ನೆರವು ನೀಡಲು ಪ್ರೇರಣೆ ದೊರಕಲಿದೆ ಎಂದರು.
ವಯನಾಡು ದುರಂತದ ಕಾರ್ಯಾಚರಣೆ ಮಾಡ್ತಿರೋ ಜಿಲ್ಲಾಧಿಕಾರಿ, ಕೇರಳಿಗರ ಮನ ಸೆಳೆದ ಕೋಟೆನಾಡಿನ ವೀರ ನಾರಿ ಮೇಘಶ್ರೀ!
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಮುಖಂಡರಾದ ಇಂಧನ್ ಬಾಬು, ದಕ್ಷಿಣಮೂರ್ತಿ, ಬಿ.ಪಿ. ಮಹದೇವು, ಹೊಸಕೋಟೆ ಕುಮಾರ್, ಗಿರಿಧರ್, ಅಭಿ, ಕೆಂಪಿಸಿದ್ದನಹುಂಡಿ ಗ್ರಾಪಂ ಅಧ್ಯಕ್ಷ ರವಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಗಾಯಿತ್ರಿ, ವಿಭಾಗಾಧಿಕಾರಿ ರಕ್ಷಿತ್, ಜಿಪಂ ಕಾರ್ಯದರ್ಶಿ ಕೃಷ್ಣರಾಜು, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ್ ವಡ್ಡಾರ್, ತಾಪಂ ಇಒ ಹೆರಾಲ್ಡ್ ರಾಜೇಶ್, ಆರ್.ಐ ಸರ್ವೇಶ್ ಇದ್ದರು.