ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಪ್ರಧಾನಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದರು.
ಮೈಸೂರು (ಸೆ.30): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಪ್ರಧಾನಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಗ್ರಹಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರವು ಸಮರ್ಥವಾಗಿ ವಾದ ಮಂಡಿಸಿ, ವಸ್ತುಸ್ತಿತಿ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗಿದೆ. ಆದರೂ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲೂ ಮನವರಿಕೆ ಮಾಡಿಕೊಡಲಾಗಿದೆ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ. ಹೀಗಾಗಿ, ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಪ್ರಾಧಿಕಾರದ ಆದೇಶ ಪಾಲನೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಸಂಕಷ್ಟ ಸೂತ್ರ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಪ್ರಧಾನಮಂತ್ರಿಗಳು ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥ ಆಗಿರುವುದರಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 100 ವರ್ಷಗಳಲ್ಲಿ ಕಂಡುಕೇರಳಿಯದ ಬರ ಈ ಬಾರಿ ಎದುರಾಗಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ಸಂಕಷ್ಟ ಸೂತ್ರ ಜಾರಿಯಾಗದಿರುವುದರಿಂದ ಸಮಸ್ಯೆ ಎದುರಾಗಿದ್ದು, ಸರ್ಕಾರ ನೆಲ, ಜಲ, ಭಾಷೆಯ ಸಂರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ನಿರಂತರ ಚಳವಳಿಗಳ ಮುಖಾಂತರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಚಳವಳಿಗಳಿಗೆ ತನ್ನದೇ ಆದ ಮಹತ್ವವಿದೆ. ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಬಂದ್ ನಡೆದಿದೆ. ಬಂದ್ ಶಾಂತಿಯುತವಾಗಿ ನಡೆದಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ
ದೇಶದ ಚರಿತ್ರೆ, ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಗಳು, ವೈಚಾರಿಕತೆ, ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡ ಪಠ್ಯಕ್ರಮ ಪರಿಚಯಿಸಬೇಕು ಎಂಬುದು ದೇಶದ ಕೂಗು. ಈ ನಿಟ್ಟಿನಲ್ಲಿ ಯುವಜನರನ್ನು ತಯಾರಿಸುವ ಕೆಲಸ ಮಾಡುತ್ತೇವೆ.
- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು