ಬೆಂಗಳೂರು (ಜು.11): ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ, ರಾಜ್ಯ ಉಸ್ತುವಾರಿ ಸಹ ಮಾಧ್ಯಮಗಳ ಎದುರೇ ಹೇಳಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟ ಸಂದೇಶ ನೀಡಿದ್ದು, ಇನ್ನು ಯಾವುದೇ ಚರ್ಚೆ ಅಗತ್ಯವಿಲ್ಲ ಎಂದು ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದಲ್ಲಿ ಚರ್ಚೆಯಲ್ಲಿರಲಿಲ್ಲ. ಮಾಧ್ಯಮಗಳು ಸೃಷ್ಟಿಸಿರುವ ವದಂತಿಗೆ ಹೈಕಮಾಂಡ್ ಹಾಗೂ ರಾಜ್ಯ ಉಸ್ತುವಾರಿಗಳು ಸ್ಪಷ್ಟನೆ ನೀಡಿದ್ದರು.
ಇದೀಗ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿರುವುದರಿಂದ ಇನ್ನು ಮುಂದೆ ಯಾವುದೇ ಚರ್ಚೆ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದರು. ಜನರು ಐದು ವರ್ಷ ಆಡಳಿತ ನಡೆಸಲು ನಮಗೆ ಅಧಿಕಾರ ನೀಡಿದ್ದಾರೆ. ಇದಕ್ಕೆ ವಿರುದ್ಧವಾಗಿ ಬಿಜೆಪಿಯವರೇ ಹೈಕಮಾಂಡ್‌ನಂತೆ ಮುಖ್ಯಮಂತ್ರಿ ಬದಲಾವಣೆ ಎಂದು ಮಾತನಾಡುತ್ತಾರೆ. ಆಪರೇಷನ್ ಕಮಲದ ರುಚಿ ನೋಡಿರುವ ಪರಿಣಾಮವದು. ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದು ಈಗ ಮತ್ತೊಮ್ಮೆ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯಿಲ್ಲ ಎಂದರು.
ಬಿಜೆಪಿ ವಿಪಕ್ಷವಾಗಿ ವಿರೋಧಿಸುತ್ತಿದೆ ಅಷ್ಟೆ: ಬಿಜೆಪಿ ವಿರೋಧ ಪಕ್ಷವಾಗಿ ಎಲ್ಲದಕ್ಕೂ ವಿರೋಧ ಮಾಡಬೇಕು, ಮಾಡುತ್ತಿದೆ ಅಷ್ಟೇ. ಹೋರಾಟ ಮಾಡುವುದು ಅವರ ಹಕ್ಕು, ಮಾಡಲಿ ಬಿಡಿ. ನಾವಂತು ಪ್ರಕರಣವನ್ನು ನ್ಯಾಯ ಸಮ್ಮತವಾಗಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ನಮಗೆಲ್ಲರಿಗೂ ನೋವಿದೆ. ನಾನು ಈ ವಿಚಾರವನ್ನು ಬೇರೆ ರಾಜ್ಯಗಳ ಘಟನೆಗೆ ಹೋಲಿಸುವುದಿಲ್ಲ. ಆದರೂ ಹೇಳುತ್ತೇನೆ, ಅಲ್ಲಿ ಘಟನೆಗಳು ಆದಾಗ ಯಾರಾದರೂ ರಾಜೀನಾಮೆ ಕೊಟ್ಟಿದ್ದರಾ? ತನಿಖೆ ಹಿನ್ನಲೆಯಲ್ಲಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಸಿಎಂ ಕುರ್ಚಿ ಹಾಗೂ ಕುರ್ಚಿಯ ಮೇಲೆ ಕೂತವರಿಬ್ಬರೂ ಬಿಗಿಯಾಗಿದ್ದಾರೆ. ಸಿಎಂ ಕುರ್ಚಿ ಯಾವತ್ತು ಅಲ್ಲಾಡಿಲ್ಲ. ಈಗಲೂ ಅಲ್ಲಾಡುವ ಪ್ರಶ್ನೆಯೇ ಬರುವುದಿಲ್ಲ. ಸಿಎಂ ಕುರ್ಚಿ ಗಟ್ಟಿ ಇರುತ್ತೆ, ಅದರ ಮೇಲೆ ಕುಳಿತವರು ಸಹ ಗಟ್ಟಿ ಇರುತ್ತಾರೆ ಎಂದರು. ಜಾತಿ ಗಣತಿ ವಿಚಾರ, ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪ್ರಮುಖವಾಗಿ ಜಾತಿ ಗಣತಿಯ ವಿಚಾರದ ಬಗ್ಗೆ ಸಿಎಂ ಚರ್ಚೆ ಮಾಡಿದ್ದಾರೆ. ನಾಳೆ ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.