ಸ್ವಾಮೀಜಿ ಸತ್ಯ ಹೇಳಿದ್ರಾ, ಸುಳ್ಳು ಹೇಳಿದ್ರಾ ನನಗೆ ಗೊತ್ತಿಲ್ಲ. ನಾನು ಸ್ಥಳದಲ್ಲಿ ಇರಲಿಲ್ಲ, ನಾನು ಸಾಕ್ಷಿ ಅಲ್ಲ ಎಂದ ಸಚಿವ ಗೋವಿಂದ ಕಾರಜೋಳ
ತುಮಕೂರು(ಆ.21): 75ನೇ ವರ್ಷದ ಜನ್ಮದಿನೋತ್ಸವದ ನಂತರ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯಗೆ ಮಠ, ದೇವಾಲಯಗಳ ಬಗ್ಗೆ ಜ್ಞಾನೋದಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾರ್ಮಿಕವಾಗಿ ನುಡಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 75 ವರ್ಷಗಳ ಕಾಲ ತಿರಸ್ಕಾರದ ಮನೋಭಾವನೆಯಲ್ಲಿದ್ದರು. ಮುಪ್ಪಿನ ಕಾಲಕ್ಕೆ ಜ್ಞಾನೋದಯವಾಗಿದೆ. ಟೆಂಪಲ್‌ರನ್ ಮಾಡುತ್ತಾ, ಮಠಗಳಿಗೆ ಹೋಗುತ್ತಿದ್ದಾರೆ. ಹಿಂದೆ ಧರ್ಮ ಒಡೆಯಲು ಮಾಡಿದ ಕೆಲಸಕ್ಕೂ ಪಶ್ಚಾತಾಪ ಮಾಡಿಕೊಳ್ಳುತ್ತಿದ್ದಾರೆ. ಮಠಾಧೀಶರ ಬಳಿ ತೆರಳಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸಂತೋಷ, ಒಳ್ಳೆ ವಿಚಾರ ಎಂದರು.
ರಂಭಾಪುರಿ ಶ್ರೀ ಎದುರು ಸಿದ್ದು:
ರಂಭಾಪೂರಿ ಸ್ವಾಮೀಜಿ ಮುಂದೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾರಜೋಳ, ಸ್ವಾಮೀಜಿ ಸತ್ಯ ಹೇಳಿದ್ರಾ, ಸುಳ್ಳು ಹೇಳಿದ್ರಾ ನನಗೆ ಗೊತ್ತಿಲ್ಲ. ನಾನು ಸ್ಥಳದಲ್ಲಿ ಇರಲಿಲ್ಲ, ನಾನು ಸಾಕ್ಷಿ ಅಲ್ಲ ಎಂದರು.
“ಧರ್ಮಸಂಕಟ” ಪಶ್ಚಾತ್ತಾಪವಲ್ಲ...ಯುದ್ಧ ಗೆಲ್ಲುವ ರಣತಂತ್ರ!?
ಹೋರಾಟ ಮಾಡಿದ್ದ ಸಾವರ್ಕರ್:
ವೀರ ಸಾವರ್ಕರ್ ಹಾಗೂ ಅವರ ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕಾಲು ಕೆದರಿ ಹೋರಾಟ ಮಾಡಿ ಜೈಲಿ ಸೇರಿದರು. ಬ್ರಿಟಿಷನವರು ಅವರ ಮನೆತನದ ವಿರುದ್ಧ ಸಿಟ್ಟಿಗೆದ್ದು, ಅವರ ಮನೆ ಮಠ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದಕ್ಕೆ ಇತಿಹಾಸವಿದೆ. ಸಾವರ್ಕರ್ ಮನೆತನದ ಇತಿಹಾಸ ಗೊತ್ತಿಲ್ಲದವರು ಏನೇನೋ ಮಾತನಾಡಿದರೆ, ದೇಶದ ಜನ ಅವರನ್ನು ಕ್ಷಮಿಸುವುದಿಲ್ಲ. ಇವತ್ತಿನ ಕಾಂಗ್ರೆಸಿನವರು ಯಾರು ಕೂಡ ಸ್ವಾತಂತ್ರ್ಯ ಹೋರಾಟದ ಮೂಲದಿಂದ ಬಂದವರಲ್ಲ. ಮಹಾತ್ಮ ಗಾಂಧಿಯಂತಹ ದೇಶಕ್ಕಾಗಿ ಹೋರಾಟ ಮಾಡಿದ ಸೇನಾನಿ ಮನೆತನದವರು ಯಾರು ಕಾಂಗ್ರೆಸ್‌ನಲ್ಲಿ ಇಲ್ಲ. ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಸೇರಿಕೊಂಡವರೇ ಜಾಸ್ತಿ. ಈಗ ಇರುವ ಕಾಂಗ್ರೆಸ್‌ಗೆ ಒಂದು ಪ್ರಶ್ನೆ ಕೇಳುತ್ತೇನೆ. ಕಾಂಗ್ರೆಸ್‌ನಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಯಾರು ಅಂತ ಪಟ್ಟಿಕೊಡಿ. ಆಗ ಕಾಂಗ್ರೆಸ್‌ನವರು ಸ್ವಾತಂತ್ರ್ಯ ಹೋರಾಟದ ಮೂಲ ಮನೆತನದವರು ಅಂತ ಒಪ್ಪುತ್ತೇವೆ. 90 ಪರ್ಸೆಂಟ್ ಕಾಂಗ್ರೆಸ್ಸಿಗರು ಬಾಯಿ ಬಡುಕತನ ಮಾಡಿಕೊಂಡು, ನಾವು ಸ್ವಾತಂತ್ರ್ಯ ಹೋರಾಟಗಾರರು ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಾರಯರು ಸ್ವಾತಂತ್ರ್ಯ ಸೇನಾನಿಗಳ ಮನೆತನದವರಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ನೀಡಿದ ಮನೆತನದವರಲ್ಲ. ಆ ರಕ್ತದ ವಂಶಸ್ಥರು ಯಾರು ಅಲ್ಲ. ಈ ಮಾತನ್ನು ನೆಹರು ಹಾಗೂ ಅವರ ಮನೆತನದ ಬಗ್ಗೆ ಹೇಳ್ತಿಲ್ಲ. ಜವಾಹರ್‌ಲಾಲ್ ನೆಹರು ಹಾಗೂ ಅವರ ಕುಟುಂಬ, ಮಹಾತ್ಮಗಾಂಧಿಜೀ ಕುಟುಂಬ, ಸರ್ಧಾರ್ ವಲ್ಲಭಬಾಯ ಪಟೇಲ, ವೀರಸಾವರ್ಕರ್ ಕುಟುಂಬದವರು ಸ್ವತಂತ್ರ ಸೇನಾನಿಗಳು. ಅನೇಕ ಲಕ್ಷ ಲಕ್ಷ ಸ್ವಾತಂತ್ರ್ಯ ಸೇನಾನಿಗಳಿದ್ದಾರೆ ಎಂದರು.
ಮಾಧುಸ್ವಾಮಿ ಪಕ್ಷ ಬಿಡಲ್ಲ:
ಸಚಿವ ಮಾಧುಸ್ವಾಮಿ ಬಗ್ಗೆ ಅಪಪ್ರಚಾರ ಮಾಡುವ ಗ್ಯಾಂಗ್ ತಯಾರಾಗಿದೆ. ಅವರು ಯಾವತ್ತು ಬಿಜೆಪಿ ಬಿಡಲ್ಲ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದು ಕಾರಜೋಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.