ಸಸಾಲಟ್ಟಿ ಯೋಜನೆ ಯಾವ ಸರ್ಕಾರದಲ್ಲಿ ಮಂಜೂರಾತಿ ದೊರೆತಿರುವುದು ಪ್ರದರ್ಶಿಸಲಿ: ಸಚಿವ ಗೋವಿಂದ ಕಾರಜೋಳ ಸವಾಲ್
ರಬಕವಿ-ಬನಹಟ್ಟಿ(ಸೆ.28): ಸಸಾಲಟ್ಟಿಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ನಾವು ಎಂಬ ವಿಪಕ್ಷಗಳ ನಾಯಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಸಸಾಲಟ್ಟಿ ಏತನೀರಾವರಿ ಯೋಜನೆಗೆ ಯಾವ ಸರ್ಕಾರದ ಕಾಲದಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂಬುವುದನ್ನು ತಂದು ಪ್ರದರ್ಶಿಸಲಿ ಎಂದು ಸಚಿವ ಗೋವಿಂದ ಕಾರಜೋಳ ಸವಾಲ ಹಾಕಿದರು. ಸೋಮವಾರದಂದು ತಾಲೂಕಿನ ಹಳಿಂಗಳಿ ಕೃಷ್ಣಾನದಿ ತಟದಲ್ಲಿ ಕಾಮಗಾರಿ ವೀಕ್ಷಣೆ ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ನಾನೇ ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸುತ್ತೇನೆ. ಅದು ಬಿಟ್ಟು ಬೇಜವಾಬ್ದಾರಿಯಿಂದ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಬಾಯಿಗೆ ಬಂದಂತೆ ಹರಟುವುದು ಸರಿಯಲ್ಲ. ರೈತರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಯಲ್ಲಿ ಕೀಳು ರಾಜಕೀಯ ತರವಲ್ಲ ಎಂದರು.
ಸಸಾಲಟ್ಟಿ ಶಿವಲಿಂಗೇಶ್ವರ ಏತನೀರಾವರಿ ಯೋಜನೆಗೆ ಶಾಸಕ ಸಿದ್ದು ಸವದಿ ದುಂಬಾಲು ಬಿದ್ದಾಗ ಸಿಎಂ ಬಸವರಾಜ ಬೊಮ್ಮಾಯಿಯವರ ಮನವೊಲಿಸಿ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆದು ಒಟ್ಟು .266 ಕೋಟಿ ಮೊತ್ತದ ಬೃಹತ್ ಯೋಜನೆಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಘಟಪ್ರಭಾ ಎಡದಂಡೆ ಕಾಲುವೆಯ ಮುಂಗಾರು ಹಂಗಾಮಿನ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಹಳಿಂಗಳಿ ಗ್ರಾಮದ ಬಳಿಯಲ್ಲಿ ನೀರನ್ನು ಎತ್ತಿ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ಅಚ್ಚುಕಟ್ಟು ಪ್ರದೇಶದ 63 ಕ.ಮೀ ಯಿಂದ 103.00ರ ವರೆಗಿನ ನೀರಾವರಿ ಮುಂಗಾರು ಹಂಗಾಮಿನಲ್ಲಿ ನೀರೊದಗಿಸಲು 15 ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿತ್ತು. ಗುತ್ತಿಗೆಯನ್ನು ಪಡೆದಿರುವ ಓಸಿಯನ್ ಕನ್ಸ್‌ಸ್ಟ್ರಕ್ಷನ್ ಸಂಸ್ಥೆ ಕಾಲಮಿತಿಯಲ್ಲಿ ಎಲ್ಲ ವಿಭಾಗಗಳಲ್ಲಿನ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
undefined
ಸರ್ಕಾರಕ್ಕೆ ಮೀಸಲಾತಿ ಹೋರಾಟದ ಕಂಟಕ: ವಾಲ್ಮೀಕಿ ಜಯಂತಿಯಂದು ಪ್ರತಿಭಟನೆಗೆ ಸಿದ್ಧತೆ
ಈ ಸಂದರ್ಭದಲ್ಲಿ ಗುತ್ತಿಗೆದಾರ ಅಸಫ್‌ಅಲಿ ಮುಲ್ಕಿ ಜೊತೆಗೆ ಚರ್ಚೆ ನಡೆಸಿದ ಸಚಿವರು 3885 ಅಶ್ವಶಕ್ತಿಯ 8 ಮೋಟಾರುಗಳನ್ನು ತಯಾರಕರಿಗೆ ನಿಗದಿತ ಕಾಲದಲ್ಲಿ ಪೂರೈಸಲು ಕ್ರಮ ಕೈಗೊಳ್ಳುವಂತೆ ಮತ್ತು ಯೋಜನೆಯ ಕಾಲಮಿತಿಯಲ್ಲಿ ಕಾಮಗಾರಿ ನಡೆಯದ ಕಾರಣ ಪ್ರತಿ ವಾರವೂ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದರಲ್ಲದೇ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ನೊಟೀಸ್ ನೀಡಿ ಟೆಂಡರ್ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.
ಕಳೆದ ನಾಲ್ಕು ದಶಕಗಳಲ್ಲಿ ಆಗದ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದ್ದು, 2ನೇ ಹಂತದ ಯೋಜನೆಗೂ ಶೀಘ್ರದಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆಯಲಿದೆ. 110 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಘಟಕ, ಮುಖ್ಯ ಕಾಲುವೆಗೆ ನೀರು ತಲುಪಲು 8 ಹಂತಗಳಲ್ಲಿ ನೀರೆತ್ತುವ 3885 ಎಚ್‌ಪಿ ಬೃಹತ್ ಶಕ್ತಿಯ ಪಂಪ್‌ಗಳನ್ನು ಅಳವಡಿಕೆ, ಪೈಪ್‌ಲೈನ್ 2590 ವ್ಯಾಸವುಳ್ಳ 190 ಮೀ ಪೋರಬೇ ಒಳಗೊಂಡ ಇನ್‌ಟೆಕ್ ಕಾಲುವೆ ನಿರ್ಮಾಣ, ಒಟ್ಟು 31,080 ಎಚ್‌ಪಿ ಸಾಮರ್ಥ್ಯದ ಮೋಟಾರುಗಳಿಗೆ ನೀರೆತ್ತಲು ಬೇಕಾದ ನಿರ್ವಹಣೆ ಸಲಕರಣೆಗಳನ್ನು ಬಳಸಲಾಗುತ್ತಿದೆ. ಘಟಪ್ರಭಾ ಎಡದಂಡೆಯ 63 ಕ.ಮೀ ಡಿಲೇವರಿ ಪಾಯಿಂಟ್ ಗುರ್ತಿಸಲಾಗಿದೆ. ಈ ಯೋಜನೆಯಿಂದ 0 ಕಿಮೀ ದಿಂದ 109 ರಲ್ಲಿ ಬರುವ ಒಟ್ಟು 156337 ಹೆಕ್ಟೇರ್ ಪೈಕಿ 63 ಕಿಮೀ ಕೆಳಭಾಗದ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ ಮತ್ತು ರಾಯಬಾಗ ತಾಲೂಕಿನ 22918 ಹೆಕ್ಟೇರ್ ಜಮೀನಿಗೆ ಮುಂಗಾರು ಹಂಗಾಮಿನಲ್ಲಿ 120 ದಿನಗಳ ಕಾಲ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆ ಭಾಗದ ಬಾಧಿತ ಪ್ರದೇಶಗಳಿಗೂ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಕೆಲಸ ನಿರ್ವಹಣೆ ಬಗ್ಗೆ ಗುತ್ತಿಗೆದಾರರೆದರು ಅಸಂತೃಪ್ತಿ ವ್ಯಕ್ತಪಡಿಸಿದ ಸಚಿವರು ನಿಗದಿತ ಕಾಲದಲ್ಲಿ ಯೋಜನೆಯ ಅನುಷ್ಠಾನ ಆಗುವಂತೆ ಸಮರೋಪಾದಿಯಲ್ಲಿ ಕೆಲಸ ಮಾಡಲು ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಜಮೀನು ನೀಡಿದ ರೈತರಾದ ಜಿನ್ನಪ್ಪ ಚೌಗುಲೆ, ಮಹಾವೀರ, ಬಾಹುಬಲಿ, ಭರಮು, ಭೂಪಾಲ, ಅಜೀತ ಚೌಗುಲಾ, ಚಿದಾನಂದ ಬಸಗೊಂಡನವರ ಅವರನ್ನು ಸನ್ಮಾನಿಸಿದರು. ರಬಕವಿ-ಬನಹಟ್ಟಿತಾಲೂಕು ರೈತ ಸಂಘದ ಅಧ್ಯಕ್ಷ ಹೊನ್ನಪ್ಪ ಬಿರಡಿ, ಹಳಿಂಗಳಿ ಗ್ರಾಮಿಣ ಬಿಜೆಪಿ ಅಧ್ಯಕ್ಷ ಭುಜಬಲಿ ವೆಂಕಟಾಪುರ, ಪರಪ್ಪ ಹಿಪ್ಪರಗಿ ಸಚಿವರಿಗೆ ಸನ್ಮಾನಿಸಿದರು.
PFI Ban ಸ್ವಾಗತಿಸಿದ ಮುತಾಲಿಕ್: ಮುಧೋಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ, ಎಸ್.ಇ.ಪ್ರಶಾಂತ ಗಿಡದಾನಪ್ಪಗೋಳ, ಎಡಬ್ಲೂಇ ಚೇತನ ಅಬ್ಬಿಗೇರಿ, ಎಇ ಶ್ರೀಧರ ನಂದ್ಯಾಳ ಉಪಸ್ಥಿತರಿದ್ದರು. ಧುರೀಣರಾದ ಡಿ.ಆರ್.ಪಾಟೀಲ, ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುರೇಶ ಅಕ್ಕಿವಾಟ, ಮಗರ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಲಕ್ಕಪ್ಪ ಪಾಟೀಲ, ಕಿರಣ ದೇಸಾಯಿ, ಪ್ರವೀಣ ನಾಡಗೌಡ, ಪ್ರಸನ್ನ ದೇಸಾಯಿ, ಧನಪಾಲ ಯಲ್ಲಟ್ಟಿ, ಮಾಧುರಾವ್ ಪಾಟೀಲ, ಈರಣ್ಣ ತೇಲಿ, ಆದಿನಾಥ ಕೇಬೋಜಿ, ಭೂಪಾಲ ಚಿನಗಿ ಪಾಲ್ಗೊಂಡಿದ್ದರು. ಕಲ್ಯಾಣಕುಮಾರ ಯಲ್ಲಟ್ಟಿಸ್ವಾಗತಿಸಿದರು. ಪ್ರಾಚಾರ್ಯ ವೈ.ಎಚ್.ಅಲಾಸ ನಿರೂಪಿಸಿದರು. ಭುಜಬಲಿ ವೆಂಕಟಾಪುರ ವಂದಿಸಿದರು.
ಸಸಾಲಟ್ಟಿ ಶಿವಲಿಂಗೇಶ್ವರ ಏತನೀರಾವರಿ ಯೋಜನೆಗೆ ಶಾಸಕ ಸಿದ್ದು ಸವದಿ ದುಂಬಾಲು ಬಿದ್ದಾಗ ಸಿಎಂ ಬಸವರಾಜ ಬೊಮ್ಮಾಯಿಯವರ ಮನವೊಲಿಸಿ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆದು ಒಟ್ಟು .266 ಕೋಟಿ ಮೊತ್ತದ ಬೃಹತ್ ಯೋಜನೆಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. 15 ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿತ್ತು. ಗುತ್ತಿಗೆಯನ್ನು ಪಡೆದಿರುವ ಓಸಿಯನ್ ಕನ್ಸ್‌ಸ್ಟ್ರಕ್ಷನ್ ಸಂಸ್ಥೆ ಕಾಲಮಿತಿಯಲ್ಲಿ ಎಲ್ಲ ವಿಭಾಗಗಳಲ್ಲಿನ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಲು ಸೂಚಿಸಲಾಗಿದೆ ಅಂತ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.