
ಬೆಂಗಳೂರು (ಅ.23): ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಇದು ಅಪ್ರಸ್ತುತವಾದ ವಿಚಾರ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಂತರ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಕೊಟ್ಟಿದ್ದಾರೆ. ಯಾರು ಕೂಡ ಮಾತನಾಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹಾಗಾಗಿ ನಾನು ಮಾತಾಡಲ್ಲ, ಬೇರೆಯವರ ಬಗ್ಗೆ ನಾನು ಏನು ಹೇಳಲ್ಲ. ಸಿಎಂ ಸಿದ್ದರಾಮಯ್ಯ ಗಟ್ಟಿಮುಟ್ಟಾಗಿದ್ದಾರೆ, ಒಳ್ಳೆಯ ಮಾರ್ಗದರ್ಶನ ಮಾಡ್ತಾ ಇದ್ದಾರೆ. ಒಳ್ಳೆಯ ಅಡಳಿತ ಕೊಡ್ತಾ ಇದ್ದಾರೆ ಎಂದರು.
ವಿಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಾ ಇದ್ದಾವೆ. ಮೊಸರಿನಲ್ಲಿ ಕಲ್ಲುವ ಹುಡುಕುವ ಕೆಲಸ ಮಾಡ್ತಾ ಇದ್ದಾರೆ. ಕರ್ನಾಟಕ ಜನ ಅವರಿಗೆ ಶಾಪ ಹಾಕುತ್ತಿದ್ದಾರೆ. ಮೊದಲು ಅವರು ಸರಿ ಮಾಡಿಕೊಳ್ಳಲಿ. ನವೆಂಬರ್ ಬಂತು ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ. ಬಿಹಾರ ಎಲೆಕ್ಷನ್ ನಡೆಯುತ್ತಿದೆ. ಎಲೆಕ್ಷನ್ ಬಳಿಕ ರಾಹುಲ್ ಗಾಂಧಿ ಪಿಎಂ ಆಗ್ತಾರೆ. ಬಿಹಾರ ಎಲೆಕ್ಷನ್‌ಗೂ ಇದಕ್ಕೂ ಸಂಬಂಧವಿಲ್ಲ.
ಯತೀಂದ್ರ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಹೈಕಮಾಂಡ್ ಅವರು ಅವರ ಕೆಲಸ ಮಾಡ್ತಾ ಇದ್ದಾರೆ ಎಂದು ತಿಳಿಸಿದರಲ್ಲದೇ ಸಿಎಂ ಹುದ್ದೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋದು ಬೇಡ, ನನ್ನ ಸಹೋದ್ಯೋಗಿಗಳಿಗೆ ನಾನು ಮನವಿ ಮಾಡ್ತೇನೆ. ಬಹಿರಂಗವಾಗಿ ಮಾತಾಡೋದು ಬೇಡ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಬಣದವರಿಗೆ ಖಂಡ್ರೆ ಮನವಿ ಮಾಡಿದರು.
ರಾಜ್ಯದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ದೀಪಾವಳಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿಗೆ ಅವಕಾಶ ನೀಡಲಾಗುವುದು. ರಾಸಾಯನಿಕ ಪಟಾಕಿ ಬಳಕೆಗೆ ಅವಕಾಶ ನೀಡಲಾಗುವುದಿಲ್ಲ. ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ನಿರ್ಮಲ ಕರ್ನಾಟಕಕ್ಕೆ ಎಲ್ಲರೂ ಪಣತೋಡೋಣ ಎಂದು ಹೇಳಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿ 50 ವರ್ಷಗಳಾಗಿವೆ. ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರ್ಮಲ ಕರ್ನಾಟಕಕ್ಕಾಗಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನೀರು ಸಂಸ್ಕರಣೆ ಮಾಡದೇ ಕಲುಷಿತ ನೀರನ್ನು ಕೆರೆ, ನದಿಗಳಿಗೆ ಬಿಡುತ್ತಿದ್ದರೆ; ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಮನುಕುಲದ ಒಳಿತಿಗಾಗಿ ನಾವು ಪರಿಸರ ಕಾಳಜಿ ಹೊಂದೋಣ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಮಾತನಾಡಿ, ಇಡೀ ದೇಶದಲ್ಲಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಂಬರ್ ಒನ್ ಸ್ಥಾನದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದ್ದು, ಇಡೀ ರಾಜ್ಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಪರಿಸರ ಪ್ರೇಮಿಗಳಿಗೆ ಪ್ರಶಸ್ತಿ ಮತ್ತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ 156 ಕೈಗಾರಿಕೆಗಳಿವೆ. ಕೊಪ್ಪಳ ಜಿಲ್ಲೆಯಲ್ಲಿ 490 ಕೈಗಾರಿಕೆಗಳಿವೆ. ಈ ಕೈಗಾರಿಕೆಗಳಲ್ಲಿ ಕಾಲ ಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಕಲ್ಯಾಣಿ, ಕೆರೆ, ಹಳ್ಳ ಸಂರಕ್ಷಣೆಗೂ ಒತ್ತು ನೀಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.