
ಮಂಗಳೂರು (ಅ.22): ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಜಿಎಸ್‌ಟಿ ದರ ಕಡಿತದ ಮೂಲಕ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಇಳಿಸಿರುವುದು ಐತಿಹಾಸಿಕ ನಿರ್ಧಾರ. ಆದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತಪ್ಪು ನಿರ್ಧಾರಗಳಿಂದ ಆರ್ಥಿಕ ಸ್ಥಿತಿ ಹಳ್ಳ ಹಿಡಿಸಿರುವ ಸಿಎಂ ಸಿದ್ದರಾಮಯ್ಯನವರು ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಜನಪ್ರಿಯತೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಹೇಳಿಕೆ ನೀಡುವ ಮೂಲಕ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಪುತ್ತೂರಿಗೆ ಸೋಮವಾರ ಭೇಟಿ ನೀಡಿದ್ದ ಸಿದ್ದರಾಮಯ್ಯನವರು ಕರ್ನಾಟಕ ಸೇರಿ ಇಡೀ ದೇಶದ ಜನರಿಗೆ ಅನುಕೂಲ ತಂದಿರುವ ಜಿಎಸ್‌ಟಿ ತೆರಿಗೆ ಇಳಿಕೆ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಕ್ಯಾ. ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಹತಾಶೆಯ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡ ಎನ್ನುವಂತಿದೆ. ಅವರ 15,000 ಕೋಟಿ ರು. ಕರ್ನಾಟಕ್ಕೆ ನಷ್ಟ ಎಂಬ ಹೇಳಿಕೆಗೆ ಯಾವುದೇ ಆಧಾರವಿಲ್ಲ.
ತಮ್ಮ ಸರ್ಕಾರದ ಆರ್ಥಿಕ ಅಧೋಗತಿಯನ್ನು ಮುಚ್ಚಿ ಹಾಕುವುದಕ್ಕೆ ಪದೇಪದೇ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಮೋದಿ ಸರ್ಕಾರ ಜಿಟಿಎಸ್ ಸ್ಲ್ಯಾಬ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಲಾಭವುಂಟು ಮಾಡಿದೆ. ಆದರೆ, ಯಾವುದೇ ಅಂಕಿ-ಅಂಶ ಅಥವಾ ದಾಖಲೆಯಿಲ್ಲದೆ ಸಿದ್ದರಾಮಯ್ಯನವರು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಚೌಟ ಟೀಕಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 80ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಮ್ಮ ದೇಶದ ಸುಸ್ಥಿರ ಅಭಿವೃದ್ಧಿಯ ಬಗ್ಗೆ ವಿಷಯ ಮಂಡಿಸಿದ್ದಾರೆ. ಆ ಮೂಲಕ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.ಭಾರತದಿಂದ ಸರ್ವ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಪಿಪಿ ಚೌಧರಿ ನೇತೃತ್ವದ ನಿಯೋಗ ನ್ಯೂಯಾರ್ಕ್‌ನಲ್ಲಿ ಅ.8 ರಿಂದ 14ರವರೆಗೆ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಗವಹಿಸುತ್ತಿದೆ.
ಈ ತಂಡದಲ್ಲಿ ಕರ್ನಾಟಕದಿಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸ್ಥಾನ ಪಡೆದಿರುವುದು ಮಾತ್ರವಲ್ಲ ಈ ವಿಶ್ವ ವೇದಿಕೆಯಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿ ಕುರಿತಂತೆ ವಿಚಾರ ಮಂಡಿಸುವ ಮೂಲಕ ಗಮನಸೆಳೆದಿದ್ದಾರೆ. ಈ ಅಧಿವೇಶನದಲ್ಲಿ ಕ್ಯಾ. ಚೌಟ ಅವರು ‘2030ಕ್ಕೆ ಐದು ವರ್ಷಗಳು-ಸುಸ್ಥಿರ ಅಭಿವೃದ್ಧಿಗಾಗಿ ಬಹುಪಕ್ಷೀಯ ಪರಿಹಾರಗಳು’ ವಿಷಯದ ಮೇಲೆ ಭವಿಷ್ಯ ಭಾರತದ ರಾಷ್ಟ್ರೀಯ ನಿಲುವನ್ನು ಮಂಡಿಸಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಬಹುಪಕ್ಷೀಯ ಸಹಕಾರ ಮತ್ತು ಸಂಪನ್ಮೂಲಗಳ ಸ್ಥಿರತೆ ಅತ್ಯಗತ್ಯ. ಅಲ್ಲದೆ, ಭಾರತ ಅಭಿವೃದ್ಧಿ ಹೊಂದದ(LDCs) ಮತ್ತು ಭೂ-ಆವೃತ ಅಭಿವೃದ್ಧಿಶೀಲ(LLDCs) ರಾಷ್ಟ್ರಗಳಿಗೆ ತನ್ನ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ದಕ್ಷಿಣ-ದಕ್ಷಿಣ ಸಹಕಾರದ ಮಹತ್ವವನ್ನು ಭಾರತ ಪ್ರತಿಪಾದಿಸುತ್ತಿರುವುದಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.