ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನು ಮಾಡುವುದಕ್ಕೆ ಆಗುತ್ತದೆ. ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನಾವು ಹುಟ್ಟು ಹಾಕಿದ್ದೇವಾ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.24): ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನು ಮಾಡುವುದಕ್ಕೆ ಆಗುತ್ತದೆ. ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನಾವು ಹುಟ್ಟು ಹಾಕಿದ್ದೇವಾ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಅದು ಅವರವರಿಗೆ ಬಿಟ್ಟಿರುವ ವಿಚಾರ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಆಗಿದ್ದರೆ ಅದು ತಪ್ಪು.
ಈಗ ದೂರು ಇರುವುದು ಕಿರುಕುಳ ಕೊಟ್ಟು ಸಲಿಂಗ ಲೈಂಗಿಕ ಸಂಪರ್ಕ ಮಾಡಿದ್ದಾರೆಂದು. ಅದು ಕಾನೂನು ಪ್ರಕಾರ ಎಲ್ಲರೂ ಒಂದೇ ಅಲ್ವಾ, ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದಿದ್ದಾರೆ. ಅವರದೇ ಕುಟುಂಬದ ಲೈಂಗಿಕ ಹಗರಣದ ವಿಚಾರಗಳು ಬ್ಯಾಕ್ ಟು ಬ್ಯಾಕ್ ಬರುತ್ತಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಬ್ಯಾಕ್ ಟು ಬ್ಯಾಕ್ ಅಂದರೆ ನಾವು ಸೃಷ್ಟಿ ಮಾಡಿದ್ದಲ್ಲವಲ್ಲ, ಬ್ಯಾಕ್ ಟು ಬ್ಯಾಕೋ ಇಲ್ಲ ಫ್ರಂಟ್ ಟು ಫ್ರಂಟೋ ನಮಗೇನು ಗೊತ್ತು ಎಂದು ಸಚಿವ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.
ಮಾರುಕಟ್ಟೆಯಿಂದ ಬ್ಯಾನ್ ಆಗುತ್ತಾ ಕೆಂಪು ಕೆಂಪು ಕಬಾಬ್? ನಾನ್‌ವೆಜ್ ಪ್ರಿಯರಿಗೆ ಬಿಗ್ ಶಾಕ್
ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೀಗೆಲ್ಲ ಮಾಡಲಾಗುತ್ತದೆ ಎಂದು ಆರೋಪಿಸಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಗೆಲ್ಲಬೇಕು ಎಂದು ಅವರು ಕೆಲಸ ಮಾಡುತ್ತಾರೆ, ನಾವು ಗೆಲ್ಲಬೇಕು ಎಂದು ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಆದರೆ ಇದನ್ನೆಲ್ಲಾ ಅವರು ವೈಯಕ್ತಿಕವಾಗಿ ಬೆಳೆಸಿಕೊಂಡರೆ ನಾವೇನು ಮಾಡಲಾಗಲ್ಲ. ರಾಜಕೀಯದಲ್ಲಿ ನಮ್ಮ ಎದುರಾಳಿಯನ್ನು ನಾವು ಎದುರಿಸಬೇಕು. ಯಾರು ಕೂಡ ನಮ್ಮ ಎದುರಾಳಿ ಗೆದ್ದುಕೊಂಡು ಹೋಗಲಿ ಎಂದು ಬಿಡಲ್ಲ. ಇದರಲ್ಲಿ ವೈಯಕ್ತಿಕವಾಗಿ ತೆಗೆದುಕೊಳ್ಳುವಂತಹದ್ದು ಏನು ಇಲ್ಲ. ಇದನ್ನು ವೈಯಕ್ತಿಕ ಪ್ರತಿಷ್ಠೆ ಮಾಡಿಕೊಂಡು ಜನರ ಅನುಕಂಪ ಪಡೆದುಕೊಳ್ಳುವ ಪ್ರಯತ್ನ ಅಷ್ಟೆ ಇದು ಎಂದು ಲೇವಡಿ ಮಾಡಿದ್ದಾರೆ.
ಗ್ಯಾರೆಂಟಿ ಯೋಜನೆಗಳು ಸರಿಯಾಗಿ ಜಾರಿಯುತ್ತಿಲ್ಲ ಎಂದು ಮಾಡುವ ಆರೋಪ ಸುಳ್ಳು. ಚುನಾವಣಾ ನೀತಿ ಸಂಹಿತೆಯಿಂದ ಸರ್ಕಾರ ಈಗಷ್ಟೇ ಹೊರ ಬಂದಿದೆ. ಆದರೆ ಗ್ಯಾರೆಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎನ್ನುವ ಬರೀ ದ್ವೇಷ ಭಾಷಣ ಮಾಡುವ ಕುಮಾರಸ್ವಾಮಿ ಮತ್ತು ಪ್ರಲ್ಹಾದ್ ಜೋಷಿ ಅವರು ರಾಜ್ಯದಿಂದ ಮಂತ್ರಿಯಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸಲಿ. ಈಗಲಾದರೂ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕೆಲಸವಾಗಲಿ. ಅದರಲ್ಲಿ ಇವರು ವಕಾಲತ್ತು ವಹಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಪಂಚ ಯೋಜನೆಗಳಿರುತ್ತವೆ: ಶಾಸಕ ಬಸವರಾಜ ರಾಯರೆಡ್ಡಿ
ಅವರು ಪ್ರತೀ ಸಾರಿ ಜಿದ್ದಾಜಿದ್ದಿ ರಾಜಕಾರಣ ಅಂತ ಮಾತನಾಡುವುದು ಬೇಡ. ಕುಮಾರಸ್ವಾಮಿ ಅವರು ಈಗ ಕೇಂದ್ರದ ಸಚಿವರಾಗಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಜ್ಯದ ಪರವಾಗಿ ಕೆಲಸ ಮಾಡಲಿ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಯಾವುದೂ ನಿಲ್ಲುವುದಿಲ್ಲ, ನಾವು ರಾಜಕೀಯಕ್ಕಾಗಿ ಈ ಯೋಜನೆಗಳನ್ನು ಜಾರಿಗೆ ತಂದಿರಲಿಲ್ಲ. ಜನರ ಹಿತಕ್ಕಾಗಿ ನಾವು ಯೋಜನೆಗಳನ್ನು ತಂದಿದ್ದೆವು, ಯಾವುದೋ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ, ಮುನ್ನಡೆಯಾಗುತ್ತದೆ ಅಂತ ಯೋಜನೆ ಜಾರಿಗೆ ತಂದಿರಲಿಲ್ಲ. ಜನರಿಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಅದರಲ್ಲಿ ಇನ್ನೂ ಏನಾದರೂ ವೈಜ್ಞಾನಿಕವಾಗಿ ಸುಧಾರಣೆ ತರಲು ಸಾಧ್ಯವಿದೆಯೆ ಅಂತ ಚಿಂತಿಸುತಿದ್ದೇವೆ. ರಾಜ್ಯದ ಹಿತಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದಿದ್ದಾರೆ.