
ಮಂಗಳೂರು (ಆ.31): ಬಿಜೆಪಿ ಸೋಮವಾರ ಆಯೋಜಿಸಿರುವ ‘ಧರ್ಮಸ್ಥಳ ಚಲೋ’ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹರಸಾಹಸ. ಧರ್ಮಸ್ಥಳ ಕ್ಷೇತ್ರವನ್ನು ಶ್ರೀರಕ್ಷೆ ಮಾಡುವುದಕ್ಕೆ ನಮ್ಮ ಸರ್ಕಾರ ಇದೆ, ನಾವೂ ಇದ್ದೇವೆ. ಈ ಥರ ಸಮಾವೇಶ ಮಂಜುನಾಥ ಸ್ವಾಮಿಗೆ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯ ಲಾಭಕ್ಕೋಸ್ಕರ ಇಷ್ಟೆಲ್ಲ ಹರಸಾಹಸ ಮಾಡ್ತಾ ಇದ್ದಾರೆ. ಇದರಲ್ಲಿ ರಾಜ್ಯದ ಹಿತವೂ ಇಲ್ಲ, ಜನತೆಯ ಹಿತವೂ ಇಲ್ಲ. ಅದಕ್ಕಿಂತ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ರಾಜ್ಯಕ್ಕೆ ಬರಬೇಕಾದ ಹಣ ಕೊಡಿಸಲು ಪ್ರಯತ್ನ ಮಾಡಲಿ, ರಾಜ್ಯದ ಜನತೆಯ ಪರವಾಗಿ ಹೋರಾಟ ಮಾಡಲಿ. ಇಂಥ ಸ್ವಾರ್ಥ ರಾಜಕಾರಣವನ್ನು ಅವರು ಬಿಡಬೇಕಾಗುತ್ತದೆ ಎಂದರು.
ಎಸ್‌ಐಟಿಯಿಂದ ನಿಜಾಂಶ ಬೆಳಕಿಗೆ: ಬಿಜೆಪಿ ಉದ್ದೇಶ ಏನು ಅಂತ ಎಲ್ಲರಿಗೂ ಗೊತ್ತಿದೆ. ಕೇವಲ ಧರ್ಮ, ಇಂಥ ವಿಚಾರಗಳನ್ನೇ ಇಟ್ಟುಕೊಂಡು ರಾಜಕೀಯ ಮಾಡ್ತಾರೆ. ಸಮಾವೇಶ ಮಾಡುವುದಾದರೆ ಮಾಡಲಿ. ಆದರೆ ಎಸ್‌ಐಟಿ ತಂಡ ಅದರ ಪಾಡಿಗೆ ತನಿಖೆ ಮಾಡಿಯೇ ಮಾಡುತ್ತದೆ, ನಿಜಾಂಶವನ್ನು ಹೊರ ತರಲಿದೆ. ಎಸ್‌ಐಟಿ ತನಿಖೆ ನಡೆಸುತ್ತಿರುವಾಗ ಬಿಜೆಪಿಯವರು ಪ್ರತಿಯೊಂದರಲ್ಲೂ ರಾಜಕೀಯ ಮಾಡಲು ಹೊರಟರೆ ಈ ಪಕ್ಷವನ್ನು ಏನಂತ ಹೇಳಬೇಕು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಬಿಜೆಪಿಯವರಿಗೆ ಈಗ ಯಾವ ವಿಷಯವೇ ಇಲ್ಲದೆ ಇರುವುದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಕೆಟ್ಟ ಹೆಸರು ತರಬೇಕು ಎಂಬ ಒಂದೇ ಉದ್ದೇಶದಿಂದ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ನಡೆದಾಗ ಬಿಜೆಪಿ ಸರ್ಕಾರವೇ ಇತ್ತು. ಏನು ಮಾಡಿದ್ರು ಗೊತ್ತಿದೆ. ಸುಮ್ಮನೆ ಆಧಾರ ರಹಿತವಾಗಿ ಬಾಯಿಗೆ ಬಂದಂತೆ ಮಾತಾಡೋದು ಸರಿಯಲ್ಲ. ಎಸ್‌ಐಟಿ ತಂಡವು ಯಾವ ಹಸ್ತಕ್ಷೇಪ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಈ ತಂಡ ಸತ್ಯವನ್ನು ಹೊರತರಲಿದ್ದಾರೆ ಎಂಬ ವಿಶ್ವಾಸ ನಮಗೆ ಇದೆ. ಅದಕ್ಕೆ ಬಿಜೆಪಿಯ ಬೆಂಬಲ ಏನೂ ಬೇಕಾಗಿಲ್ಲ. ಎನ್‌ಐಎ ಏನೂ ಬೇಕಾಗಿಲ್ಲ. ನಮ್ಮ ಪೊಲೀಸ್ ಇಲಾಖೆ ತನಿಖೆ ಮಾಡಲು ಶಕ್ತವಿದೆ. ಆ ಥರ ಏನಾದರೂ ನಿಜವಾದಂತಹ ಮಾಹಿತಿಗಳು ಬಂದರೆ ಖಂಡಿತವಾಗಿಯೂ ಆಲೋಚನೆ ಮಾಡಬಹುದು. ಕೊಡೋದೆ ಇಲ್ಲ ಅಂತ ನಾನು ಹೇಳ್ತಿಲ್ಲ. ಆದರೆ ಅಂತಹ ನಿಖರ ಮಾಹಿತಿ ಬೇಕಲ್ವಾ ಎಂದರು.
ಸಮಾವೇಶದ ಉದ್ದೇಶ ಸರಿ ಇಲ್ಲ: ಬಿಜೆಪಿಯವರು ಧರ್ಮಸ್ಥಳದಲ್ಲಿ ಸಮಾವೇಶ ಮಾಡಿ ಅಭಿಪ್ರಾಯ ಹೇಳಲು ನಿರ್ಬಂಧ ಏನಿಲ್ಲ. ಇದು ಪ್ರಜಾಪ್ರಭುತ್ವ. ಅವರಿಗೆ ಹಕ್ಕಿದೆ. ಆದರೆ ಉದ್ದೇಶ ಮಾತ್ರ ಸರಿ ಇಲ್ಲ. ರಾಜ್ಯದ ಜನರ ಹಿತವೇ ಅದರಲ್ಲಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು. ದ.ಕ. ಜಿಲ್ಲೆಯಲ್ಲಿ ಗಣೇಶೋತ್ಸವ ಸೇರಿದಂತೆ ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಕೆ ನಿರ್ಬಂಧದಿಂದ ಕೆಲವೆಡೆ ಸಮಸ್ಯೆ ಆಗಿದೆ ಅಂತ ಮಾಹಿತಿ ದೊರೆತಿದೆ. ಅದನ್ನು ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿ, ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.