ಗೃಹ ಜ್ಯೋತಿ ಯೋಜನೆ ಜಾರಿಯಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಚಿತ್ರದುರ್ಗ (ಆ.07): ಗೃಹ ಜ್ಯೋತಿ ಯೋಜನೆ ಜಾರಿಯಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಇಂಧನ ಇಲಾಖೆ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಮಾತನಾಡಿದರು. ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ಯೋಜನೆ ಜಾರಿ ಮಾಡಿದ್ದೇವೆ. ಇಲ್ಲಿಯವರೆಗೆ ಮೂರು ಯೋಜನೆಗಳು ಜಾರಿಯಾಗಿವೆ.
ಜಿಲ್ಲೆಯಲ್ಲಿ 4.7 ಲಕ್ಷ ಗೃಹ ವಿದ್ಯುತ್ ಬಳಕೆದಾರರು ಇದ್ದು, ಇದರಲ್ಲಿ 3.37 ಲಕ್ಷ ಬಳಕೆದಾರರು ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ. ಜುಲೈ 1 ರಿಂದ ಯೋಜನೆಯ ಲಾಭ ಬಳಕೆದಾರರಿಗೆ ದೊರೆಯಲಿದೆ. ಪ್ರತಿ ಮನೆಯ 200 ಯುನಿಟ್ ಗೃಹ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುವುದು. ಜಿಲ್ಲೆಯ 4.7 ಲಕ್ಷ ಬಳಕೆದಾರಿಗೆ, ಪ್ರತಿ ತಿಂಗಳು ರೂ.22.27 ಕೋಟಿ ವಿದ್ಯುತ್ ಬಿಲ್ ಬರಲಿದ್ದು, ಇದನ್ನು ಸರ್ಕಾರದಿಂದ ಬೆಸ್ಕಾಂಗೆ ಪಾವತಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ಸರಬಾರಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ: ಸೂಕ್ತ ಕ್ರಮಕ್ಕೆ ವಿಶು ಶೆಟ್ಟಿ ಆಗ್ರಹ
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವಿರೇಂದ್ರ ಮಾತನಾಡಿ, ಗೃಹ ಜ್ಯೋತಿ ಯೋಜನೆ ಚಾಲನೆ ಕುರಿತು ರಾಜ್ಯದ ಜನತೆಗೆ ಮಾಧ್ಯಮಗಳು ತಲುಪಿಸಿ, ಪ್ರತಿಯೊಬ್ಬರು ನೊಂದಣಿ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು. ಚಿತ್ರದುರ್ಗ ತಾಲೂಕಿನ 95 ಸಾವಿರ ಗೃಹ ವಿದ್ಯುತ್ ಬಳಕೆದಾರರು ಇದ್ದಾರೆ. ಗೃಹ ಜ್ಯೋತಿ ನೊಂದಣಿಯಲ್ಲಿ ಜಿಲ್ಲೆಯಲ್ಲಿ ಚಿತ್ರದುರ್ಗ ತಾಲೂಕು ಮೂಂಚೂಣಿಯಲ್ಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಮಾತನಾಡಿ, ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಗಳಿಂದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸಾರ್ವಜನಿಕರು ಈ ಯೋಜನೆಗಳಿಗೆ ಹೆಚ್ಚು ಹೆಚ್ಚು ನೋಂದಣಿ ಮಾಡಿಕೊಳ್ಳುವಂತೆ ಕೋರಿದರು. ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಹಾಯವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಶೇ.80ರಷ್ಟುನೋಂದಣಿಯಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ಬಾಕಿ ಇರುವ 39 ಸಾವಿರ ಜನರು ನೋಂದಣಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 5 ಜನ ಫಲಾನುಭವಿಗಳಿವಗೆ ಶೂನ್ಯ ವಿದ್ಯುತ್ ಬಿಲ್‌್ಲ ವಿತರಿಸಲಾಯಿತು. ಬೆಸ್ಕಾಂನ ದಾವಣಗೆರೆ ವಲಯದ ಅಧೀಕ್ಷಕ ಇಂಜಿನಿಯರಿಂಗ್ ಜಗದೀಶ್ ಸ್ವಾಗತಿಸಿದರು. ಚಿತ್ರದುರ್ಗ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ವಂದಿಸಿದರು.
ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!
ವರ್ಷಕ್ಕೆ ಗೃಹಜ್ಯೋತಿಗೆ 4000 ಕೋಟಿ ರು. ಖರ್ಚು: ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವವರ ಪೈಕಿ, ಶೇ.87 ರಷ್ಟು ಬಿಪಿಎಲ್ ಕಾರ್ಡ್ ಹೊಂದಿದರುವವರು ಇದ್ದಾರೆ. ಇದರಲ್ಲಿ ಶೇ.99ರಷ್ಟುಜನರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಸರ್ಕಾರ ಪ್ರತಿ ವರ್ಷ 4000 ಕೋಟಿ ರು. ಖರ್ಚು ಮಾಡಲಿದೆ. ಜಿಲ್ಲೆಗೆ ಪ್ರತಿ ವರ್ಷ 300 ಕೋಟಿ ರು. ಖರ್ಚು ಬರಲಿದೆ. ಇದರಿಂದ ಗ್ರಾಹಕರ ಮೇಲಿನ ಹೊರೆ ತಪ್ಪಲಿದೆ. ಮುಂದಿನ ತಿಂಗಳು 4ನೇ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದರು.