ಎಚ್.ಡಿ.ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡುವುದಿಲ್ಲ. ಅವರಿಗೆ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುವುದೇ ಇಲ್ಲ. ರಾಜಕೀಯ ಮಾಡುವುದು ಬಿಟ್ಟರೆ ಅವರಿಗೇನೂ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.
ಮಂಡ್ಯ (ಏ.16): ಎಚ್.ಡಿ.ಕುಮಾರಸ್ವಾಮಿ (HD Kumaraswamy) ಯಾರನ್ನೂ ಸಿಎಂ ಮಾಡುವುದಿಲ್ಲ. ಅವರಿಗೆ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುವುದೇ ಇಲ್ಲ. ರಾಜಕೀಯ (Politics) ಮಾಡುವುದು ಬಿಟ್ಟರೆ ಅವರಿಗೇನೂ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath Narayan) ವ್ಯಂಗ್ಯವಾಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ಗೆ ಕಾಣುವುದು ಕುಮಾರಸ್ವಾಮಿ ಮತ್ತು ಅವರ ಕುಟುಂಬ ಮಾತ್ರ. ನಮ್ಮ ಪಕ್ಷದಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳುತ್ತಾರಷ್ಟೇ. ಅವರು ಯಾರನ್ನೂ ಸಿಎಂ ಹುದ್ದೆಗೆ ಕೂರಿಸುವುದಿಲ್ಲ. ಮಣ್ಣು ಸೇರುವುದರೊಳಗೆ ದಲಿತ ಸಿಎಂ ಮಾಡುತ್ತೇವೆ ಎನ್ನುವುದು ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಆಡುತ್ತಿರುವುದು ಹೊಸ ನಾಟಕ. ದಲಿತ ಮತಗಳನ್ನು ಸೆಳೆಯುವ ತಂತ್ರಗಾರಿಕೆಯಷ್ಟೇ ಎಂದು ಚಿವುಟಿದರು.
ಮಂತ್ರಿಗಿರಿಯನ್ನೇ ಕೊಡಲಿಲ್ಲ: ಜೆಡಿಎಸ್ (JDS) ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ (H Vishwanath) ಅವರನ್ನೇ ಮಂತ್ರಿ ಮಾಡಲಿಲ್ಲ. ಜೆಡಿಎಸ್‌ನಿಂದ ಗೆದ್ದಿದ್ದ ನಾಲ್ಕು ಜನ ಹಿಂದುಳಿದ ವರ್ಗದವರಿಗೂ ಮಂತ್ರಿಗಿರಿ ಕೊಡಲಿಲ್ಲ ಎಂದ ಮೇಲೆ ದಲಿತ ಸಿಎಂ (Dalit CM) ಮಾಡುತ್ತಾರೆ ಎನ್ನುವುದು ಕನಸಿನ ಮಾತು. ಇನ್ನು ಬಿಜೆಪಿಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಸಂಪೂರ್ಣವಾಗಿ ಹಿಂದುಳಿದವರಲ್ಲಿ ನಮ್ಮ ದೇಶದ ಕಾರ್ಯಕರ್ತರಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ, ಅಷ್ಟೇ ಏಕೆ ದಲಿತ ಸಮುದಾಯದ ರಾಮನಾಥ್ ಕೋವಿಂದ್ ರಾಷ್ಟ್ರದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಷ್ಟುಸಾಕ್ಷ್ಯ ಸಾಕಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣ ಹೆಬ್ಬಾಳ್ಕರ್ ತಲೆಗೆ ಸುತ್ತಿಕೊಳ್ಳಬಹುದು: ಹೊಸ ಬಾಂಬ್ ಸಿಡಿಸಿದ ಅಶ್ವತ್ಥ್
ಹೊಸ ನಾಟಕ ಶುರು: ಚುನಾವಣೆ ಸಮೀಪಿಸಿದಾಗಲೆಲ್ಲಾ ಹೊಸ ನಾಟಕವಾಡುತ್ತಾ ಜನರ ಮುಂದೆ ಬರುತ್ತಾರೆ. ಕುಮಾರಸ್ವಾಮಿ ಹುಟ್ಟಿದ್ದೇ ನಾಟಕದಲ್ಲಿ. ಜನರೆದುರು ಕಣ್ಣೀರು ಸುರಿಸುವುದು, ನಂಬಿದವರಿಗೆ ಮೋಸ ಮಾಡುವ ಕಲೆಯನ್ನು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ. ಇದುವರೆಗೂ ಅವರು ಜನರಿಗೆ ಮೋಸ ಮಾಡಿಕೊಂಡೇ ಬಂದಿದ್ದಾರೆ ಎಂದು ಟೀಕಿಸಿದರು. ಜಲಧಾರೆ ಕಾರ್ಯಕ್ರಮವೂ ಕುಮಾರಸ್ವಾಮಿ ನಾಟಕದ ಒಂದು ಭಾಗ. ರಾಮನಗರದಲ್ಲಿ ಏತ ನೀರಾವರಿಯನ್ನು ತೋರಿಸಿಕೊಟ್ಟಿದ್ದು ಬಿಜೆಪಿ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆ ರೂಪಿಸಿದ್ದರು. ಇದಕ್ಕಿಂತ ಬೇರೆ ಬೇಕಾ ಎಂದ ಸಚಿವರು, ಸುಳ್ಳು ಹೇಳುವುದು ಕುಮಾರಸ್ವಾಮಿ ಅವರ ಕಾಯಕ. ಇದರಿಂದ ಕುಮಾರಸ್ವಾಮಿ ತಾವೂ ಹಾಳಾಗುವುದಲ್ಲದೇ ಅವರನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ಈಈ ರೀತಿ ಸುಳ್ಳು ಹೇಳಿಕೊಂಡೇ ದಕ್ಷಿಣ ಕರ್ನಾಟಕಕ್ಕೆ ಕುಮಾರಸ್ವಾಮಿ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಚಾಟಿ ಬೀಸಿದರು.
ಕುಮಾರಸ್ವಾಮಿ ಸಹವಾಸ ಬೇಡ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೋಡಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಕುಮಾರಸ್ವಾಮಿ ಸಹವಾಸ ಬೇಡ ಸ್ವಾಮಿ. ನಾವು ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸಂಬಂಧ ಮತ್ತು ಒಡಂಬಡಿಕೆ ಇಟ್ಟುಕೊಳ್ಳುವುದಿಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಷ್ಟುಪಾಪದ ಕೆಲಸ ಮತ್ತೊಂದಿಲ್ಲ. ಜನ ತಿರಸ್ಕಾರ ಮಾಡಿರುವವರನ್ನು ನಾವೂ ಕೂಡ ತಿರಸ್ಕಾರ ಮಾಡುತ್ತೇವೆ. ನಾವು ಜೆಡಿಎಸ್‌ನ್ನು ಬಿಜೆಪಿಯಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಖಡಕ್ಕಾಗಿ ಹೇಳಿದರು.
Karnataka Politics: ನನ್ನತ್ರ ಎಲ್ಲರ ಫೈಲಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಭಾಸ್ಕರ್ ರಾವ್
ಮೈಷುಗರ್ ಆರಂಭಕ್ಕೆ ಅಡ್ಡಗಾಲು: ಕುಮಾರಸ್ವಾಮಿ ಅವರಿಗೆ ರಾಜಕೀಯ ಮಾಡುವುದೇ ಬದುಕು, ಇದನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ. ದಕ್ಷಿಣ ಕರ್ನಾಟಕಕ್ಕೆ ಅವರು ಮಾಡಿರುವ ಅನ್ಯಾಯವೇ ಸಾಕ್ಷಿ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಯನ್ನು ನಡೆಸಲಾಗಲಿಲ್ಲ ಎಂದರೆ ಏನನ್ನಬೇಕು. ಹೋಗಲಿ ನಾವೇ ಪುನಶ್ಚೇತನ ಮಾಡೋಣ ಎಂದರೂ ಅದಕ್ಕೂ ಅಡ್ಡಿಪಡಿಸುತ್ತಾರೆ. ಅವರಿಗೆ ರಾಜಕೀಯ ಮಾಡುವುದು ಬಿಟ್ಟರೇ ಬೇರೇನೂ ಗೊತ್ತಿಲ್ಲ ಎಂದು ಹರಿಹಾಯ್ದರು.