* ರಾಜ್ಯಕ್ಕೆ ಮಹದಾಯಿ ನೀರು ಕೊಡುವುದಿಲ್ಲ ಎಂದವರಿಂದ ಈಗ ಪಾದಯಾತ್ರೆ ಯಾಕೆ?
* ಈ ಯೋಜನೆ ನಮ್ಮ ಸರ್ಕಾರದ ಕನಸಿನ ಕೂಸು. ಜಾರಿ ಮಾಡುವುದೇ ನಮ್ಮ ಮುಖ್ಯಗುರಿ
* ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಪ್ರಯತ್ನ
ನರಗುಂದ(ಏ.16): ಕರ್ನಾಟಕಕ್ಕೆ ಮಹದಾಯಿಯ ಹನಿ ನೀರೂ ಕೊಡವುದಿಲ್ಲ ಎಂದು ಹೇಳಿದ ಕಾಂಗ್ರೆಸ್ಸಿನವರು ಇಂದು ಮಹದಾಯಿ ನೀರಿಗಾಗಿ ಪಾದಯಾತ್ರೆ ಮಾಡುತ್ತಿರುವುದು ಯಾವ ಪುರಷಾರ್ಥಕ್ಕೆ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರಶ್ನೆ ಮಾಡಿದರು. ಪಟ್ಟಣದ ನೂತನ ಎಪಿಎಂಸಿ ಆವರಣದಲ್ಲಿ ನರಗುಂದ ವಿಧಾನಸಭೆ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹದಾಯಿ(Mahdayi) ಹಾಗೂ ಕಳಸಾ ಬಂಡೂರಿ(Kalasa Banduri) ನಾಲಾಗಳ 40-50 ಟಿಎಂಸಿ ನೀರು ಪ್ರತಿ ವರ್ಷ ವ್ಯರ್ಥವಾಗಿ ಗೋವಾ(Goa) ಸಮುದ್ರ ಸೇರುತ್ತಿದೆ. ಅದರ ಸ್ವಲ್ಪ ನೀರನ್ನು ಕುಡಿಯಲು ಮತ್ತು ಕೃಷಿಗೆ ತರಬೇಕೆಂದು ನಾವು ಈ ಹಿಂದೆ ಪಾದಯಾತ್ರೆ ಮಾಡಿದ ಸಮಯದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ. ರಾಜ್ಯ(ಗೋವಾ)ದಲ್ಲಿ ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದರು. ಆದರೆ, ಇಂದು ಅದೇ ಪಕ್ಷದ ಕೆಲ ನಾಯಕರು ಯೋಜನೆ ಜಾರಿ ಮಾಡಬೇಕು ಎಂದು ಪಾದಯಾತ್ರೆ ಮಾಡುವ ಮೂಲಕ ಈ ಭಾಗದ ರೈತರ ಮುಂದೆ ಮೊಸಳೆ ಕಣ್ಣೀರು ಸುರಿಸುವ ನಾಟಕ ಮಾಡುತ್ತಿದ್ದಾರೆ. ಆದ್ದರಿಂದ ಈ ಭಾಗದ ರೈತರು(Farmers) ಇಂಥ ಪಾದಯಾತ್ರೆ ಮಾಡುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದರು.
Santosh Suicide Case: ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳಾಗುವುದು ಬೇಡ: ಸಿಎಂ ಬೊಮ್ಮಾಯಿ
ಈಗಾಗಲೇ ಕಳಸಾ-ಬಂಡೂರಿ ನಾಲಾ ಯೋಜನೆಗೆ ನಮ್ಮ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅಂದಿನ ಬಜೆಟ್‌ನಲ್ಲಿ 500 ಕೋಟಿ ಮತ್ತು ನಾನು ಸಿಎಂ ಆದ ಮೇಲೆ .1000 ಕೋಟಿ ಮೀಸಲಾಗಿಟ್ಟಿದ್ದೇವೆ. ಬೇಗ ಈ ಯೋಜನೆಗೆ ಕಾನೂನು ತೊಡಕುಗಳನ್ನು ಬಗೆಹರಿಸಿ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವರ ಹತ್ತಿರ ಮನವಿ ಮಾಡಿಕೊಂಡಿದ್ದೇನೆ ಎಂದರು.
ಈ ಯೋಜನೆ ನಮ್ಮ ಸರ್ಕಾರದ ಕನಸಿನ ಕೂಸು. ಜಾರಿ ಮಾಡುವುದೇ ನಮ್ಮ ಮುಖ್ಯಗುರಿ. ಶಾಸಕ ಸಿ.ಸಿ. ಪಾಟೀಲ(CC Patil) ನನಗೆ ಬೆನ್ನಲುಬಾಗಿ ನಿಂತಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ರೈತರ ಮಕ್ಕಳಗೆ ವಿದ್ಯಾರ್ಥಿ ವೇತನ, ಬಡವರಿಗೆ ಮನೆಗಳು, ಬೆಳೆಗಳು ಹಾನಿಯಾದರೆ ಹೆಚ್ಚುವರಿ ಪರಿಹಾರ ನೀಡುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಳೆ ಏತ ನೀರಾವರಿ ಯೋಜನೆಗೆ ಹೊಸದಾಗಿ ಪೈಪ್‌ಲೈನ್ ಮಾಡಲು ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದೇನೆ. ಬೇಗ ಅನುದಾನ ಬಿಡುಗಡೆ ಮಾಡಿದರೆ ಈ ಕಾಮಗಾರಿ ಪ್ರಾರಂಭ ಮಾಡಿ ಏತ ನೀರಾವರಿ ಯೋಜನೆಯಿಂದ 10ರಿಂದ 11 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಿಎಂ ಬೊಮ್ಮಾಯಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ: ಅಂಗಡಿ ಮುಚ್ಚಿಸಿದ ಪೊಲೀಸರು, ವ್ಯಾಪಾರಸ್ಥರ ಆಕ್ರೋಶ
ಇದೇ ಸಂದರ್ಭದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮುಖ್ಯಮಂತ್ರಿ ಹಕ್ಕುಪತ್ರ ವಿತರಣೆ ಮಾಡಿದರು. ಈ ವೇಳೆ, ಕಳಸಾ -ಬಂಡೂರಿಗೆ .1000 ಕೋಟಿ ಅನುದಾನ ಮೀಸಲಿಟ್ಟಿದ್ದಕ್ಕೆ ಸಿಎಂ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಅನ್ನಪೂರ್ಣಾ ಯಲಿಗಾರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ಗುರಪ್ಪ ಆದಪ್ಪನವರ, ವೀರಯ್ಯ ಹಿರೇಮಠ, ಎಂ.ಎಸ್. ಪಾಟೀಲ, ಬಿ.ಬಿ. ಐನಾಪೂರ, ರುದ್ರಗೌಡ ಆಲೂರ, ಎಸ್.ಬಿ. ಕರಿಗೌಡರ, ವಾಸು ಜೋಗಣ್ಣವರ, ಮಲ್ಲಪ್ಪ ಮೇಟಿ, ಅಶೋಕ ಸಾಲೂಟಿಗಿ, ಬಸನಗೌಡ ಪಾಟೀಲ, ಬಾಬು ಹಿರೇಹೊಳಿ, ಶಂಕರಗೌಡ ಯಲ್ಲಪ್ಪಗೌಡ್ರ, ಬಿ.ಎನ್. ಪಾಟೀಲ, ಚಂದ್ರ ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ನಿಂಗಣ್ಣ ಗಾಡಿ, ಬಾಪುಗೌಡ ತಿಮ್ಮನಗೌಡ್ರ, ಬದರೀನಾಥ ಗುಜಮಾಗಡಿ, ಗೋವಿಂದರಾಜ ಗುಡಿಸಾಗರ, ಆರ್.ಆಚ್. ರಾಚನಗೌಡ್ರ, ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರೈತರಿಂದ ಮನವಿ:
ಮಹದಾಯಿ ಯೋಜನೆ ಶೀಘ್ರ ಜಾರಿ ಮಾಡಬೇಕೆಂದು ಮುಖ್ಯಮಂತ್ರಿಗೆ ರೈತರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸೇನಾ ಸಂಘಟಿನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ, ಕೃಷಿ ಸಚಿವ ಬಿ.ಸಿ. ಪಾಟೀಲ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಹೂಗಾರ, ಎಸ್.ಬಿ.ಗಣ್ಣವರ, ಪರಶುರಾಮ ಜಂಬಗಿ, ಚನ್ನು ನಂದಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ವಾಸು ಚವಾಣ, ಹನಮಂತ ಸರನಾಯ್ಕರ, ಡಿ.ಕೆ. ನಾಯ್ಕರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.