
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಮೇ.26) : ವಿಜಯಪುರ ನಗರದಲ್ಲಿ ಇಂದು(ಗುರುವಾರ) ಸ್ಟೇಡಿಯಂ ಬಳಿ ನೂತನವಾಗಿ ನಿರ್ಮಾಣ ಮಾಡಲಾದ ಕನಕದಾಸರ ಮೂರ್ತಿ ಉದ್ಘಾಟನೆಗೊಂಡಿತು. ಮೂರ್ತಿ ಉದ್ಘಾಟನೆಗೆಂದು ಸಚಿವ ಬೈರತಿ ಬಸವರಾಜ್ ಆಗಮಿಸಿದ್ದರು. ಆದ್ರೆ, ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಾಜದ ಮುಖಂಡರು ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಸಚಿವರಾದ ಬೈರತಿ ಬಸವರಾಜ್, ಎಂ.ಟಿ.ಬಿ ನಾಗರಾಜ್ ಆಗಮಿಸಿದ್ದರೆ ಇವರನ್ನ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇತರರು ಸ್ವಾಗತಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೂ ಮುಂಚೆ ಬೈರತಿ ಬಸವರಾಜ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ರು..
ಕಾಂಗ್ರೆಸ್ನ ಇಬ್ಬರು ಪ್ರಭಾವಿ ನಾಯಕರು ಬಿಜೆಪಿಗೆ ಬರಲು ನಾಟಕ ಮಾಡ್ತಿದ್ದಾರೆ- ಯತ್ನಾಳ್ ಬಾಂಬ್
ತಾಂಬೂಲ ಪ್ರಶ್ನೆ ಸಮರ್ಥಿಸಿಕೊಂಡ ಬೈರತಿ..!
ಮಳಲಿ ದರ್ಗಾದ ಕುರಿತಾಗಿ ಕೇರಳ ದೈವಜ್ಞರ ತಾಂಬೂಲ ಪ್ರಶ್ನೆ ವಿಚಾರವನ್ನ ಬೈರತಿ ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ. ಮಳಲಿ ದರ್ಗಾದ ಕುರಿತಂತೆ ವಿಳ್ಯದೆಲೆ ನೋಡುವ ವಿಚಾರ ಆ ಭಾಗದಲ್ಲಿನ ಜನ ಸುಮಾರು ವರ್ಷಗಳಿಂದ ಅನುಭವದ ಆಧಾರದಿಂದ ಅನುಸರಿಸಿಕೊಂಡು ಬಂದ ಪದ್ಧತಿ. ಅದರ ಅನುಭವದ ಆಧಾರದ ಮೇಲೆ ಅವರು ಹೇಳಿರುವುದು. ಮುಂದಿನ ದಿನಗಳಲ್ಲಿ ಅದರ ಸಾಧಕ ಬಾಧಕಗಳನ್ನ ಪರಾಮರ್ಶೆ ಮಾಡಿ ತೀರ್ಮಾನ ಮಾಡಲಾಗುತ್ತೆ ಎನ್ನುವ ಮೂಲಕ ತಾಂಬೂಲ ಪ್ರಶ್ನೆ ವಿಚಾರವನ್ನ ಸಮರ್ಥಿಸಿಕೊಂಡಿದ್ದಾರೆ. ಇನ್ನು ವಿರೋಧ ಪಕ್ಷಗಳದ್ದು ಮೊಸರಿನಲ್ಲಿ ಕಲ್ಲು ಹುಡುಕುವ ವಿಚಾರ, ರಾಜಕಾರಣಕ್ಕಾಗಿ ವಿರೋಧ ಮಾಡುವಂಥದಲ್ಲ. ಇದು ಮೂಢನಂಬಿಕೆ ಅಲ್ಲ, ಪರಂಪರೆ ಹಾಗೂ ನಂಬಿಕೆ ವಿಚಾರ. ಸುಮ್ಮನೆ ವಿರೋಧ ಪಕ್ಷಗಳು ವಿರೋಧಿಸುವುದು ತರವಲ್ಲ ಎಂದು ಭೈರತಿ ಬಸವರಾಜ್ ಹೇಳಿದರು.
ಪಠ್ಯಪುಸ್ತಕದಲ್ಲಿ ಕೇಸರಿಕರಣ ಆರೋಪ ತಳ್ಳಿಹಾಕಿದ ಬೈರತಿ..!
ಪಠ್ಯಪುಸ್ತಕದಲ್ಲಿ ಕೇಸರಿಕರಣ ವಿಚಾರವನ್ನ ತಳ್ಳಿಹಾಕಿದರು. ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ವಿಜಯೇಂದ್ರ ಟಿಕೆಟ್ ತಪ್ಪಿರುವ ಕುರಿತು ಪಕ್ಷದ ವರಿಷ್ಠರ ನಿರ್ಧಾರವದು ಪ್ರತಿಕ್ರಿಯಿಸಲಾರೆ ಎಂದು ಬಿಎಸ್ವೈ ಸಾಮರ್ಥ್ಯವನ್ನ ಹಾಡಿ ಹೊಗಳಿ ತಂದೆಯ ಸ್ಥಾನದ ಗೌರವ ನೀಡುತ್ತೇವೆ ಎಂದರು.
ವಿಜಯೇಂದ್ರ ಪರ ಬೈರತಿ, MTB ಬ್ಯಾಟಿಂಗ್..!
ಬಿವೈ ವಿಜಯೇಂದ್ರಗೆ ಟಿಕೇಟ್ ತಪ್ಪಿದ ವಿಚಾರವಾಗಿ ಎಂ ಟಿ ಬಿ ನಾಗರಾಜ್ ಹಾಗೂ ಬೈರತಿ ಬಸವರಾಜ್ ಮಾಧ್ಯಮಗಳಿಗೆ ತಮ್ಮದೆಯಾದ ಪ್ರತಿಕ್ರಿಯೆಗಳನ್ನ ನೀಡಿದ್ರು. ಇಬ್ಬರು ನಾಯಕರು ವಿಜಯೇಂದ್ರ ಪರ ಬ್ಯಾಟ್ ಬೀಸಿದರು. ಬೈರತಿ ಬಸವರಾಜ್ ಮಾತನಾಡಿ ವಿಜಯೇಂದ್ರ ನಮ್ಮ ಯುವ ನಾಯಕರು, ರಾಜ್ಯ ಸುತ್ತಿ ಕೆಲಸ ಮಾಡ್ತಿದ್ದಾರೆ. ನಮ್ಮ ಪಕ್ಷ ಗುರುತಿಸಿ ಅವರಿಗೆ ಅತ್ಯುನ್ನತ ಸ್ಥಾನ ನೀಡಲಿದೆ ಎಂದಿದ್ದಾರೆ. ಈ ವಿಚಾರದಲ್ಲಿ ಯಾರೂ ಕೂಡ ನಿರಾಶರಾಗಬೇಕಿಲ್ಲ ಎನ್ನುವ ಮೂಲಕ ವಿಜಯೇಂದ್ರ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.
ಯಡಿಯೂರಪ್ಪ ಶಕ್ತಿ ಕುಗ್ಗಿಸಲು ಆಗಲ್ಲ..!
ವಿಜಯೇಂದ್ರಗೆ ಟಿಕೇಟ್ ನೀಡದೆ, ಇತ್ತ ಬಿಎಸ್‌ವೈರನ್ನು ದೂರಿಡುವ ಕೆಲಸ ನಡೆಸುತ್ತಿದೆ ಎನ್ನುವ ಮಾತುಗಳ ಬಗ್ಗೆ ಮಾಧ್ಯಮಗಳ ಪ್ರತಿಕ್ರಿಯೆ ನೀಡಿದ ಬೈರತಿ ಬಸವರಾಜ್ ಯಡಿಯೂರಪ್ಪ ನಮ್ಮ ನಾಯಕರು, ಯಡಿಯೂರಪ್ಪನವರ ಗೌರವನ್ನ ಯಾರಿಂದಲೂ ಕಡಿಮೆ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪನವರ ಶಕ್ತಿ ಕುಗ್ಗಿಸಲು ಯಾರಿಂದಲು ಆಗಲ್ಲ. ಅವರ ಸಾಮರ್ಥ್ಯ ರಾಜ್ಯಕ್ಕೆ ಗೊತ್ತಿದೆ. ಅವರು ತಂದೆ ಸಮಾನ ಎನ್ನುವ ಮೂಲಕ ಬಿಎಸ್ವೈಗೆ ಜೈ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.