
ಗದಗ(ಅ.19): ಉಪಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ. ಎಲ್ಲ ಪ್ಲಾನ್‌ಗಳನ್ನ ಬಿಜೆಪಿ ಛಿದ್ರ ಛಿದ್ರ ಮಾಡುತ್ತದೆ. ಸಿದ್ದರಾಮಯ್ಯ ತಂತ್ರ, ಡಿ ಕೆ ಶಿವಕುಮಾರ್ ಕುತಂತ್ರ ಯಾವುದು ನಡೆಯುವುದಿಲ್ಲ. ಉಪಚುನಾವಣೆಯ ಎರಡು ಸ್ಥಾನ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ನಮ್ಮ ಪಕ್ಷ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಡಿಕೆಶಿ ಈಗ ತಮ್ಮ ಸಹೋದರ ಡಿ.ಕೆ. ಸುರೇಶ್ ಕ್ಷೇತ್ರದ ವಿಧಾನಸಭೆ ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆ ಇದೆ. ಈ ಬಾರಿ ಆರ್.ಆರ್. ನಗರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಆಖಾಡವಾಗಿದೆ. ಸಹೋದರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುತ್ತೆ ಅಂತಾ ಹತಾಶರಾಗಿದ್ದಾರೆ. ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿಕೊಳ್ಳುತ್ತಾರೋ ಹಾಗೆಯೇ ಡಿಕೆಶಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್‌ಗೆ ಏನೂ ಮಾತನಾಡಬೇಕೆಂಬ ಅರಿವೇ ಇಲ್ಲ: ಸಿದ್ದರಾಮಯ್ಯ
ಸಮಾಜ ಕಲ್ಯಾಣ ಖಾತೆ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಾನು ಮಹತ್ತರ ಬದಲಾವಣೆ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಮಕ್ಕಳು ಓಲಂಪಿಕ್ಸ್ ನಲ್ಲಿ ಭಾಗವಹಿಸುವಷ್ಟು ಬದಲಾವಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಡಿಸಿಎಂ ಆಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಚುನಾವಣೆಯಲ್ಲಿ ನಾನು ಡಿಸಿಎಂ ಆಗಬೇಕು ಅಂತಾ ಜನರ ಅಭಿಪ್ರಾಯವಾಗಿತ್ತು. ಆದ್ರೆ ಚುನಾವಣೆ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಆಶೀರ್ವಾದ ಇದ್ರೆ ಆಗಬಹುದು ಎಂದಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ನಡೆಸಿದೆ ಎನ್ನಲಾದ ಭ್ರಷ್ಟಾಚಾರ ಹಗರಣ ವಿಚಾರದ ಬಗ್ಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಒಂದು ನೈಯಾಪೈಸೆಯಷ್ಟು ಭ್ರಷ್ಟಾಚಾರ ನಡೆದಿಲ್ಲ. ಆರೋಪದ ಕುರಿತು ನಾನು ಸಚಿವರಾದ ಸುಧಾಕರ್ ಹಾಗೂ ಅಶ್ವಥ್ ನಾರಾಯಣ ಸೇರಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಾಗಲೇ ವಿಧಾನಸಭೆಯಲ್ಲಿ ವಿಪಕ್ಷ ನಾಯಕರ ಆರೋಪಕ್ಕೆ ಉತ್ತರ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.