'ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ'

By Suvarna NewsFirst Published Oct 19, 2020, 1:01 PM IST
Highlights

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯದ್ದೇ ಗೆಲುವು| ಜನರಿಗೆ ಸ್ಥಿರ ಸರಕಾರ ಬೇಕಿದೆ. ಆ ನಿಟ್ಟಿನಲ್ಲಿ ಜನರ ಆಲೋಚನೆ| ಸಿಕ್ಕ ಅವಕಾಶಗಳನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಳು ಮಾಡಿಕೊಂಡಿವೆ| ಇನ್ನೂ ಅಂಥ ಪಕ್ಷಗಳಿಗೆ ಮತ ಹಾಕಿ ಪ್ರಯೋಜನವಿಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ: ಡಿಸಿಎಂ|  

ಮೈಸೂರು(ಅ.19): ನೆರೆ ವಿಷಯವನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡಿದ್ದಾರೆ. 

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು(ಸೋಮವಾರ) ಬೆಳಗ್ಗೆ ತಾಯಿ ಚಾಮುಂಡಿ ದರ್ಶನ ಪಡೆದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರಕಾರದ ರಾಜೀನಾಮೆ ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ನೆರೆಯಲ್ಲೂ ರಾಜಕೀಯ ಮಾಡಬೇಕಾದ ಕರ್ಮ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಕುಟುಕಿದ್ದಾರೆ.

ಎನ್‌ಡಿಆರ್‌ಎಫ್‌ ಮಾನದಂಡವನ್ನು ಎಲ್ಲ ರಾಜ್ಯಗಳು ಒಪ್ಪಿಕೊಂಡಿವೆ. ಅದರ ನಿಯಮಗಳಂತೆ ರಾಜ್ಯಕ್ಕೂ ಕೇಂದ್ರದಿಂದ ನೆರವು ಬಂದಿದೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಹಣ ಬಂದಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ ಸರಕಾರ ರಾಜ್ಯದಲ್ಲಿ ನೆರೆ ಬಂದಾಗಲೆಲ್ಲ ಎಷ್ಟು ನೆರವು ನೀಡಿತ್ತು ಎಂಬುದನ್ನು ಕಾಂಗ್ರೆಸ್‌ ನಾಯಕರು ಮಾಹಿತಿ ಪಡೆಯಲಿ ಎಂದು ಡಿಸಿಎಂ ಹೇಳಿದರು.

ದೇವೇಗೌಡ-ಹೆಚ್‌ಡಿಕೆ ನಡೆಯಿಂದ ಬೇಸತ್ತ ಮತ್ತೊಬ್ಬ ಜೆಡಿಎಸ್‌ ನಾಯಕ ಕಾಂಗ್ರೆಸ್‌ ತೆಕ್ಕೆಗೆ..?

ಶೀಘ್ರವೇ ಕಾಲೇಜು ಆರಂಭ:

ಕಾಲೇಜುಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರಕಾರ ಮತ್ತು ಯುಜಿಸಿಯಿಂದ ಈಗಾಗಲೇ ರಾಜ್ಯಕ್ಕೆ ಸ್ಪಷ್ಟವಾದ ಮಾರ್ಗಸೂಚಿ ಬಂದಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಲೇಜುಗಳನ್ನು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಆಫ್‌ಲೈನ್‌ ತರಗತಿಗಳು ಆರಂಭವಾಗಬೇಕು ಎಂಬುದು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಹೀಗಾಗಿ ಸರಕಾರವು ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು ಅವರು.

ಗೆಲುವು ಬಿಜೆಪಿಯದ್ದೇ:

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜನರಿಗೆ ಸ್ಥಿರ ಸರಕಾರ ಬೇಕಿದೆ. ಆ ನಿಟ್ಟಿನಲ್ಲಿ ಜನರು ಆಲೋಚನೆ ಮಾಡುತ್ತಿದ್ದಾರೆ. ಹಿಂದೆ ಜನರು ಅನೇಕ ಸಲ ಅವಕಾಶ ಕೊಟ್ಟಿದ್ದರು. ಸಿಕ್ಕ ಅವಕಾಶಗಳನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಳು ಮಾಡಿಕೊಂಡರು. ಇನ್ನೂ ಅಂಥ ಪಕ್ಷಗಳಿಗೆ ಮತ ಹಾಕಿ ಪ್ರಯೋಜನವಿಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ಎಂದು ಡಿಸಿಎಂ ಹೇಳಿದರು.
ಅಧಿಕಾರಕ್ಕಾಗಿ ಸಮ್ಮಿಶ್ರ ಸರಕಾರ ಮಾಡಿಕೊಂಡಿದ್ದ ಆ ಎರಡೂ ಪಕ್ಷಗಳ ನಾಯಕರು ಅಧಿಕಾರ ಇದ್ದಾಗಲೂ ಕಚ್ಚಾಡುತ್ತಿದ್ದರು. ಈಗ ಅಧಿಕಾರ ಇಲ್ಲದಿದ್ದಾಗಲೂ ಕಚ್ಚಾಡುತ್ತಿದ್ದಾರೆ. ಅವರಿಗೆ ಕಚ್ಚಾಟದಲ್ಲಿ ಆಸಕ್ತಿ ಇದೆಯೇ ವಿನಾ ರಾಜ್ಯದ ಅಭಿವೃದ್ಧಿಯಲ್ಲಿ ಇಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ. 

click me!