
ಹಾವೇರಿ (ಮಾ.31): ಕಾಂಗ್ರೆಸ್ ಈಗಾಗಲೇ ದಿವಾಳಿಯಾಗಿದ್ದು ಮುಂದಿನ ದಿನಗಳಲ್ಲಿ ಹರಾಜಿಗೆ ಬರಲಿದೆ ಎಂದು ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಜನರಿಗೆ ಟೋಪಿ ಹಾಕುವುದು, ಕಿವಿಯಲ್ಲಿ ಹೂವಿಡುವುದು, ಡೋಂಗಿ ಮಾತನಾಡುತ್ತಲೇ ಕಾಲ ಕಳೆದಿದ್ದಾರೆ ಎಂದರು. ಮೀಸಲಾತಿ ಹೆಚ್ಚಳದ ಬಳಿಕ ಕಾಂಗ್ರೆಸ್ ಕಂಗೆಟ್ಟಿದೆ. ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗುತ್ತೇವೆ. 140 ಸ್ಥಾನ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಯಶಸ್ವಿಯಾಗಿದೆ. ಇದರಿಂದ ಕಾಂಗ್ರೆಸ್ಸಿಗೆ ಮಾರಿ ಹಬ್ಬ ಶುರುವಾಗಿದೆ. ಕೆಲ ನಿರ್ಧಾರ ತೆಗೆದುಕೊಳ್ಳುತ್ತಿರುವ ಹಿನ್ನೆಲೆ ಅಭ್ಯರ್ಥಿಗಳ ಘೋಷಣೆ ಸ್ವಲ್ಪ ತಡವಾಗಿದೆ. ಕಾಂಗ್ರೆಸ್ ಸಮೀಕ್ಷೆಯಲ್ಲಿ ಅವರೇ ಮುಂದಿದ್ದಾರೆ. ಆದರೆ, ಉತ್ತರ ಪ್ರದೇಶ, ಗುಜರಾತ್ ಸಮೀಕ್ಷೆ ಏನಾಯ್ತು? ಎಂದು ಪ್ರಶ್ನಿಸಿರುವ ಅವರು, ಖಂಡಿತವಾಗಿ ಈ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ
ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿರುವ ಕುರಿತು ಉತ್ತರಿಸಿದ ರಾಮುಲು, ಡಿ.ಕೆ. ಶಿವಕುಮಾರ ಮೂರು ಬಿಟ್ಟವರು. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎಂದರೆ ಯುದ್ಧಕ್ಕೂ ಮೊದಲೇ ಅವರು ಸೋಲು ಒಪ್ಪಿಕೊಂಡಂತೆ. ಸೋಲಿನ ಭಯ ಅವರಿಗೆ ಪ್ರಾರಂಭವಾಗಿದೆ. ಅವರ ಮಾತಿಗೆ ನಮ್ಮ ಶಾಸಕರು ಮರಳಾಗುವುದಿಲ್ಲ. ಒಂದು ವೇಳೆ ಅವರ ಮಾತು ಕೇಳಿ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಸ್ವಪಕ್ಷಿಯರಿಗೆ ಕಿವಿಮಾತು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಅಂದೇ ಸಿದ್ದು ಸೋಲಿಸುತ್ತಿದ್ದೆವು: 2018ರಲ್ಲಿ ಜನರು ಬಿಜೆಪಿಗೆ ಬಹುಮತ ಕೊಟ್ಟಿದ್ದರು. ಆದರೆ ಇವರು ಹಿಂಬಾಗಿಲಿನಿಂದ ಎ ಟಿಂ ಮತ್ತು ಬಿ ಟಿಂ ಒಂದಾಗಿ ಸರ್ಕಾರ ಮಾಡಿದರು. ಅಂದು ಕೆಲ ಶಾಸಕರು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದು ಗೆದ್ದರು. ಮೊದಲು ನಿನ್ನ ಮನೆ ಸರಿ ಮಾಡಿಕೊಳ್ಳಲು ಆಗಲಿಲ್ಲ ಎಂದು ಡಿಕೆಶಿಗೆ ಲೇವಡಿ ಮಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ವರುಣಾದಲ್ಲಿ ನನ್ನನ್ನು ಸೋಲಿಸುವ ಪ್ರಯತ್ನ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಹಾಗೆ ಆಗಿದ್ದರೆ ಸಿದ್ದರಾಮಯ್ಯ ಬಾದಾಮಿಯಲ್ಲಿ ಕೂಡಾ ಗೆಲ್ಲುತ್ತಿರಲಿಲ್ಲ. ಅಲ್ಲಿ ಜೆಡಿಸ್‌ನಿಂದ ಬೇವಿನಮರದ ಸ್ಪರ್ಧಿಸಿ 20 ಸಾವಿರ ಮತ ಪಡೆದಿದ್ದರು. ಅವೆಲ್ಲ ಬಿಜೆಪಿ ಮತಗಳಾಗಿದ್ದವು. ಆ ಮತಗಳು ಬಿಜೆಪಿಗೆ ಬಿದ್ದಿದ್ದರೆ ರಾಮುಲುನೇ ಗೆಲ್ಲುತ್ತಿದ್ದ. ಹೊಂದಾಣಿಕೆ ಮಾಡಿಕೊಂಡು ಸೋಲಿಸುವುದಾದರೆ ಅಂದೇ ಸೋಲಿಸುತ್ತಿದ್ದೆವು ಎಂದು ತಿರುಗೇಟು ನೀಡಿದರು.
ಆಪ್ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು
ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ, ಈ ಕುರಿತು ಚರ್ಚೆ ನಡೆದಿದೆ. ಯಡಿಯೂರಪ್ಪ ಅವರು ಸಂಸದೀಯ ಮಂಡಳಿಯಲ್ಲಿ ಇದ್ದಾರೆ ಎಂದಷ್ಟೇ ಹೇಳಿದರು. ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸಿಎಂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ಪ್ರಶ್ನೆಗೆ, ಈ ಕುರಿತು ಇನ್ನು ತೀರ್ಮಾನವಾಗಿಲ್ಲ. ಚರ್ಚೆ ಕೂಡ ನಡೆದಿಲ್ಲ. ಸಿಎಂ ಶಿಗ್ಗಾಂವಿ ಕ್ಷೇತ್ರದಲ್ಲೇ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಛಾತಿಯಂತೆ ಬಸವರಾಜ ಬೊಮ್ಮಾಯಿ ಇದ್ದು ಎಲ್ಲ ಜಾತಿಗೆ ನ್ಯಾಯ ಕೊಟ್ಟು ಅಂಬೇಡ್ಕರ್ ಆಶಯಗಳಿಗೆ ತಕ್ಕಂತೆ ನಡೆದಿದ್ದಾರೆ ಎಂದರು.
ಶಾಸಕ ಗೋಪಾಲಕೃಷ್ಣ ರಾಜೀನಾಮೆ ಪ್ರಶ್ನೆಗೆ, 2018ರಲ್ಲಿ ಅವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಕ್ಕಿರಲಿಲ್ಲ. ಅವರ ಕುಟುಂಬಕ್ಕೆ ಅನ್ಯಾಯ ಆಗಬಾರದೆಂದು ಆ ಸಮಯದಲ್ಲಿ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಟ್ಟೇವು. ಇದೀಗ ಅವರ ರಾಜೀನಾಮೆಯಿಂದ ಕೂಡ್ಲಗಿ ಕ್ಷೇತ್ರದ ಕಾರ್ಯಕರ್ತರಿಗೆ ನೋವಾಗಿದೆ. ಅವರ ಆತುರದ ನಿರ್ಧಾರ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ. ಅವರು ಬಿಜೆಪಿಯಲ್ಲಿ ಇದ್ದಿದ್ದರೆ ಮತ್ತೆ ಗೆಲುವು ಸಾಧಿಸುತ್ತಿದ್ದರು. ಇದೀಗ ಅವರು ರಾಜೀನಾಮೆ ಕೊಟ್ಟಿದ್ದರೂ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಅಲ್ಲಿ ಮತ್ತೆ ಪಕ್ಷದ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.