ದಾವಣಗೆರೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ, ಟಿಕೆಟ್‌ ಹಂಚಿಕೆ: ಶೋಭಾ ಕರಂದ್ಲಾಜೆ

By Kannadaprabha News  |  First Published Mar 31, 2023, 11:30 PM IST

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುಕ್ರವಾರ ನಗರದಲ್ಲಿ ನಡೆಯಿತು.


ದಾವಣಗೆರೆ (ಮಾ.31): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುಕ್ರವಾರ ನಗರದಲ್ಲಿ ನಡೆಯಿತು. ಇಲ್ಲಿನ ವಿನೋಬ ನಗರದ ದಾವಣಗೆರೆ-ಹರಿಹರ ಅರ್ಬನ್‌ ಬ್ಯಾಂಕ್‌ ಸಮುದಾಯ ಭವನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ, ಹಿರಿಯ ನಾಯಕರಾದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ, ಶಶಿಲ್‌ ನಮೋಶಿ ಸಮ್ಮುಖದಲ್ಲಿ 7 ಕ್ಷೇತ್ರಗಳಿಗೂ ತಲಾ 1 ಗಂಟೆಯಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಗುಪ್ತ ಚುನಾವಣೆ ನಡೆಸುವ ಮೂಲಕ ಪಕ್ಷ ಹೊಸ ಹೆಜ್ಜೆ ಇಟ್ಟಿತು.

3-4 ಹೆಸರು ಬರೆದು ಮತದಾನ: ಬಿಜೆಪಿ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಪ್ರಮುಖರು, ಜನ ಪ್ರತಿನಿಧಿಗಳು ಹೀಗೆ ಪ್ರತಿ ಕ್ಷೇತ್ರಕ್ಕೆ 80ರಿಂದ 100 ಜನರಂತೆ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬರು ಕನಿಷ್ಠ 3, ಗರಿಷ್ಠ 4 ಜನರ ಹೆಸರನ್ನು ಆಯ್ಕೆಗೆ ಹೆಸರು ಬರೆದು, ಹಾಕಲು ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳ ಆಯ್ಕೆಗೆ 3-4 ಹೆಸರನ್ನು ಬರೆದು ಹಾಕಲು ಬಂದಿದ್ದವರು ತಮ್ಮ ಹೆಸರನ್ನು ಸಹ ಆಕಾಂಕ್ಷಿಯಾಗಿ ಹಾಕಲು ಅನುವು ಮಾಡಲಾಗಿತ್ತು. ಪ್ರತಿಯೊಬ್ಬರೂ 3 ಅಥವಾ 4 ಹೆಸರನ್ನು ಬರೆದು, ಮತದಾನದ ಪೆಟ್ಟಿಗೆಗೆ ಹಾಕಿದರು. 

Tap to resize

Latest Videos

ಆಪ್‌ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು

ದಾವಣಗೆರೆ ಉತ್ತರ, ದಕ್ಷಿಣ, ಜಗಳೂರು, ಹರಿಹರ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಪೈಕಿ ಯಾರಿಗೆ ಅವಕಾಶ ನೀಡುವುದು ಸೂಕ್ತವೆಂಬ ಕಾರಣಕ್ಕೆ ಚುನಾವಣೆ ನಡೆಯಿತು. ಕೆಲವರಂತೂ ಒಂದೇ ಹೆಸರನ್ನು ಬರೆದು, ಪೆಟ್ಟಿಗೆಗೆ ಹಾಕಿದರೆ, ಮತ್ತೆ ಕೆಲವರು ಹಾಲಿ ಶಾಸಕರಿಗೆ ಮತ್ತೆ ಕೆಲವರು ತಮ್ಮ ಹೆಸರನ್ನು ಸೇರಿಸಿ, ಮತ ಪೆಟ್ಟಿಗೆಗೆ ಹಾಕಿದರು. ಪ್ರತಿ ಕ್ಷೇತ್ರಕ್ಕೆ 1 ಗಂಟೆಯಂತೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಸರದಿಯಂತೆ ಪ್ರತಿ ಕ್ಷೇತ್ರದಿಂದ ಪಾಲ್ಗೊಳ್ಳಬೇಕಿದ್ದವರು 80-100 ಜನರಂತೆ ಬಂದು ತಮ್ಮ ನೆಚ್ಚಿನ ಆಕಾಂಕ್ಷಿಗಳ ಹೆಸರನ್ನು ಬರೆದು, ಗುಪ್ತಮತದಾನದ ಪೆಟ್ಟಿಗೆಗೆ ಹಾಕಿದರು.

ಅಭಿಪ್ರಾಯ ಪಡೆದು ಶಿಫಾರಸ್ಸು: ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಕ್ಷದ ಹಿರಿಯರ ಅಪೇಕ್ಷೆಯಂತೆ ಕಾರ್ಯಕರ್ತರ ಅಭಿಪ್ರಾಯವನ್ನು ಕೇಳಿ, ಟಿಕೆಟ್‌ ಹಂಚಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಬೂತ್‌ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು, ಜನ ಪ್ರತಿನಿಧಿಗಳ ಅಭಿಪ್ರಾಯ ತಿಳಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ, ರಾಜ್ಯ ಕೋರ್‌ ಕಮಿಟಿಗೆ ಶಿಫಾರಸ್ಸು ಮಾಡುತ್ತೇವೆ. ನಂತರ ಕೋರ್‌ ಕಮಿಟಿ ಕೇಂದ್ರ ಸಮಿತಿ ಅನುಮತಿ ಪಡೆದು, ಅಭ್ಯರ್ಥಿಗಳ ಅಂತಿಮ ಪಟ್ಟಿಸಿದ್ಧಪಡಿಸುತ್ತದೆ. ಪ್ರಜಾತಂತ್ರ, ಪ್ರಜಾಪ್ರಭುತ್ವದಡಿ ನಡೆಯುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ತಿಳಿಸಿದರು. 

ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮುಖಂಡ ಶಶಿಲ್‌ ನಮೋಶಿ, ಶಾಸಕರಾದ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ, ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾ ಜಯರುದ್ರೇಶ್‌, ಬಿ.ಪಿ.ಹರೀಶ, ಯಶವಂತರಾವ್‌ ಜಾಧವ್‌, ಚಂದ್ರಶೇಖರ ಪೂಜಾರ, ಎಂ.ಬಸವರಾಜ ನಾಯ್ಕ, ಜಿ.ಎಸ್‌.ಶ್ಯಾಮ್‌, ಆಲೂರು ಲಿಂಗರಾಜ, ಹನುಮಂತ ನಾಯ್ಕ, ಅಣಬೇರು ಜೀವನಮೂರ್ತಿ ಸೇರಿದಂತೆ ಅನೇಕರಿದ್ದರು.

ಕಾರ್ಯಕರ್ತರ ಕೆಲಸ ವರ್ಷ ಪೂರ್ತಿ: ಬೂತ್‌ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಪೇಜ್‌ ಪ್ರಮುಖರು, ಜಿಲ್ಲೆಗಳ ತಂಡಗಳನ್ನು ಕೇವಲ ಚುನಾವಣೆಗಾಗಿ ಮಾಡುವುದಿಲ್ಲ. ವರ್ಷಪೂರ್ತಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಸರ್ಕಾರವಿದ್ದಾಗ ಜನರಿಗೆ ಸರ್ಕಾರದ ಸಾಧನೆಗಳನ್ನು ತಿಳಿಸುವ, ಯೋಜನೆ, ಸೌಲಭ್ಯಗಳನ್ನು ತಿಳಿಸುವ, ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದ ಪಕ್ಷ ನಮ್ಮದು. ಅಧಿಕಾರ ಇಲ್ಲದಿದ್ದಾಗ ಜನರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಪಕ್ಷಕ್ಕೆ ಕಾರ್ಯಕರ್ತರೆ ದೊಡ್ಡ ಶಕ್ತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆ: ಆತ್ಮವಿಶ್ವಾಸ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಣೆ

ಜನಪರ ಕೆಲಸ ಮಾಡಿದವರಿಗೆ ಟಿಕೆಟ್‌ ಸಿಗಲಿದೆ. ಕೇಂದ್ರದ ನಾಯಕರು ಸಹ ಇದಕ್ಕೆ ಸಮ್ಮತಿಸುತ್ತಾರೆಂಬ ವಿಶ್ವಾಸವಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಸಿಗುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಲು ಮತ್ತೊಂದು ಶಕ್ತಿಯನ್ನು ರಾಜ್ಯದ ಜನತೆ ನೀಡುವ ವಿಶ್ವಾಸವಿದೆ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

click me!