ಕೋವಿಡ್-19 ಸೋಂಕು ನಿಯಂತ್ರಣದ ಉಸ್ತುವಾರಿ ವಿಚಾರದಲ್ಲಿ ಸಚಿವರುಗಳ ನಡುವೆ ಅಸಮಾಧಾನ ಸ್ಫೋಟಗೊಂಡಿರುವ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು ಹೀಗೆ.....
ಬಳ್ಳಾರಿ, (ಜೂನ್.27): ಕೊರೋನಾ ವೈರಸ್ ನಿಯಂತ್ರಣದ ಜವಾಬ್ದಾರಿ ವಿಚಾರದಲ್ಲಿ ಸಚಿವರುಗಳ ನಡುವೆ ಸಮನ್ವಯದ ಕೊರತೆಯಿದೆ, ತಮ್ಮನ್ನು ದೂರ ಇಡಲಾಗುತ್ತಿದೆ ಎನ್ನುವ ಆರೋಪಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಅಲ್ಲಗಳೆದಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್‌ಗೆ ಹೊಸ ಜವಾಬ್ದಾರಿ..!
ಈ ಬಗ್ಗೆ ಇಂದು (ಶನಿವಾರ) ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ಸುಧಾಕರ್ ನಮ್ಮ ಹುಡುಗ, ಸ್ನೇಹಿತ ಮತ್ತು ಆರ್. ಆಶೋಕ ಕೂಡ ನಮ್ಮ ಸ್ನೇಹಿತ ಅವರಿಗೆ ಉಸ್ತುವಾರಿವಹಿಸಿರೋದಕ್ಕೆ ಯಾವುದೇ ಅಸಮಾಧಾನ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾವು ಕೋವಿಡ್-19 ನಿಯಂತ್ರಣಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲಾ. ಸುಧಾಕರ ಮತ್ತು ಆಶೋಕ ಮತ್ತು ನನ್ನ ಮಧ್ಯೆ ರಾಗಿಕಾಳಿನಷ್ಟು ಅಸಮಾಧಾನ ಇಲ್ಲ. ನಾವು ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ನಾನು ರಾಜ್ಯದ ಸ್ಥಿತಿಗತಿಗಳನ್ನು ನೋಡಿಕೊಳ್ಳುತ್ತಿದ್ದರೆ, ಸುಧಾಕರ್ ಅವರಿಗೆ ಬೆಂಗಳೂರಿನ ಜವಾಬ್ದಾರಿ ನೀಡಲಾಗಿತ್ತು. ಸದ್ಯ ಸುಧಾಕರ್ ಅವರಿಗೆ ಸಮಸ್ಯೆ ಆಗಿದೆ. ಹಾಗಾಗಿ ಈಗ ಆರ್. ಅಶೋಕ್ ಅವರಿಗೆ ಬೆಂಗಳೂರಿನ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ರಾಮುಲು, ಸುಧಾಕರ್‌ಗೆ ಹೊಣೆಗಾರಿಕೆ ವಿಭಜನೆ: ಸಿಎಂ ನಿರ್ಧಾರಕ್ಕೆ ಇಬ್ಬರಿಗೂ ಅಸಮಾಧಾನ?
ಮೂವತ್ತು ಜಿಲ್ಲೆ ಪ್ರವಾಸ ಮಾಡಿದ್ದೇನೆ. ನಾನು ಆರೋಗ್ಯ ಮಂತ್ರಿ ಹೌದೋ ಅಲ್ವೋ.? ಹಾಗಿದ್ರೇ ಹೇಗೆ ಕಡೆಗಣನೆ ಆಗುತ್ತಿದೆ. ಬೆಂಗಳೂರಿನಲ್ಲಿ ಇರೋರಿಗೆ ಉಸ್ತುವಾರಿ ಕೊಟ್ರೇ ಕೆಲವೊಮ್ಮೆ ದಿಢೀರ್ ನಿರ್ಧಾರ ಅನುಕೂಲ ಆಗುತ್ತದೆ ಅಂತಾ ಕೊಟ್ಟಿರುತ್ತಾರೆ. ಬೇರೆ ರಾಜ್ಯದಿಂದ ಅಥವಾ ವಿದೇಶದಿಂದ ಯಾರಾದರೂ ಬಂದಾಗ ಕೆಲ ಇಂಪಾರ್ಟೆಂಟ್ ವಿಷಯ ಇದ್ದಾಗ ಬೆಂಗಳೂರು ಇರಬೇಕಾಗ್ತದೆ ಹೀಗಾಗಿ ಬೆಂಗಳೂರಿನವರಿಗೆ ಉಸ್ತುವಾರಿ ನೀಡಲಾಗಿದೆ ಎಂದು ತಿಳಿಸಿದರು.