ಪ್ರಧಾನಿ ನಿಧಿ ಹಣ ರಾಜೀವ್‌ ಪ್ರತಿಷ್ಠಾನಕ್ಕೆ: ಕಾಂಗ್ರೆಸ್‌ ವಿರುದ್ಧ ಬಿಜೆಪಿ 3 ಗಂಭೀರ ಆರೋಪ!

By Kannadaprabha NewsFirst Published Jun 27, 2020, 9:11 AM IST
Highlights

ಪ್ರಧಾನಿ ನಿಧಿ ಹಣ ರಾಜೀವ್‌ ಪ್ರತಿಷ್ಠಾನಕ್ಕೆ!| ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮತ್ತೆ 3 ಗಂಭೀರ ಆರೋಪ| ಚೀನಾಕ್ಕೆ ಅನುಕೂಲ ಮಾಡಿಕೊಡಲು ಆರ್‌ಸಿಇಪಿಗೆ ಒಲವು| ರಾಜೀವ್‌ ಪ್ರತಿಷ್ಠಾನಕ್ಕೆ 1991ರಲ್ಲೂ 100 ಕೋಟಿ ನೆರವು

ನವದೆಹಲಿ(ಜೂ.27): ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ನೆರವು ಬಂದಿದೆ ಎಂದು ಆರೋಪ ಮಾಡಿದ್ದ ಬಿಜೆಪಿ, ಈಗ ಕಾಂಗ್ರೆಸ್‌ ಪಕ್ಷದ ವಿರುದ್ಧ ತನ್ನ ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಟ್ವೀಟರ್‌ನಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಕಾಂಗ್ರೆಸ್‌ ವಿರುದ್ಧ 3 ಗಂಭೀರ ಆರೋಪಗಳನ್ನು ಮಾಡಿದ್ದಾರೆ.

1. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯ ಹಣವನ್ನು ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಸರ್ಕಾರ ಅಕ್ರಮವಾಗಿ ದೇಣಿಗೆ ನೀಡಿದೆ.

2. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಚೀನಾಕ್ಕೆ ನೆರವು ನೀಡಲು ಆ ದೇಶದ ಜೊತೆ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು.

3. ಹಣಕಾಸು ಸಚಿವರಾಗಿದ್ದಾಗ ಬಜೆಟ್‌ ಭಾಷಣದಲ್ಲೇ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ 100 ಕೋಟಿ ರು. ನೆರವು ಘೋಷಿಸಿದ್ದರು.

'ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸುವುದೇ ಮೋದಿ ಸರ್ಕಾರದ ಉದ್ದೇಶ'

ಈ ಮೂರೂ ಆರೋಪಗಳನ್ನು ಅಲ್ಲಗಳೆದಿರುವ ಕಾಂಗ್ರೆಸ್‌ ಪಕ್ಷ, ಚೀನಾ ಬಿಕ್ಕಟ್ಟಿನಿಂದ ದೇಶದ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದೆ.

ಟ್ವೀಟರ್‌ನಲ್ಲಿ ನಡ್ಡಾ ದಾಖಲೆ ಬಿಡುಗಡೆ:

ಶುಕ್ರವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟರ್‌ನಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ, ‘ಮನಮೋಹನ ಸಿಂಗ್‌ ಅವಧಿಯಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಅಕ್ರಮವಾಗಿ ಸರ್ಕಾರದಿಂದ ದೇಣಿಗೆ ನೀಡಲಾಗಿತ್ತು. ಸಂಕಷ್ಟದಲ್ಲಿರುವ ಜನರ ನೆರವಿಗೆ ಬಳಸಬೇಕಾದ ನಿಧಿಯಿಂದ ಕಾಂಗ್ರೆಸ್‌ ಪಕ್ಷದ ಸಂಸ್ಥೆಗೆ ಹಣದ ನೆರವು ಹರಿಸಲಾಗಿತ್ತು. ಪ್ರತಿಷ್ಠಾನದ ಚೇರ್ಮನ್‌ ಯಾರಾಗಿದ್ದರು? ಸೋನಿಯಾ ಗಾಂಧಿ. ಪ್ರತಿಷ್ಠಾನದ ಆಡಳಿತ ಮಂಡಳಿಯಲ್ಲಿ ಯಾರಿದ್ದರು? ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಿ.ಚಿದಂಬರಂ ಮತ್ತು ಮನಮೋಹನ ಸಿಂಗ್‌’ ಎಂದು ಆರೋಪಿಸಿದರು.

ಬಿಎಸ್‌ವೈಗೆ ನಡ್ಡಾ ಭೇಷ್: ಕೊರೋನಾ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ!

ಮನಮೋಹನ ಸಿಂಗ್‌ ಅವಧಿಯಲ್ಲಿ ಕೇಂದ್ರ ಸರ್ಕಾರ ಚೀನಾದ ಎದುರು ಆರ್ಥಿಕವಾಗಿಯೂ ಸಂಪೂರ್ಣ ಶರಣಾಗಿತ್ತು. ಚೀನಾಕ್ಕೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಭಾರತಕ್ಕೆ ನಷ್ಟವಾಗುವ ರೀತಿಯಲ್ಲಿ ಚೀನಾ ಜೊತೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ)ಕ್ಕೆ ಸಹಿ ಹಾಕಲು ಮುಂದಾಗಿತ್ತು. ಆಗಿನ ವಾಣಿಜ್ಯ ಮಂತ್ರಿ ಕಮಲನಾಥ್‌ ಅವರೇ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ನಂತರ ಪ್ರಧಾನಿ ಮನಮೋಹನ ಸಿಂಗ್‌ ಅಧ್ಯಕ್ಷತೆಯ ಸಮಿತಿಯು ಈ ಒಪ್ಪಂದದಿಂದ ಭಾರತ ಹೊರಗುಳಿಯುವುದು ಒಳ್ಳೆಯದಲ್ಲ ಎಂದಿತ್ತು ಎಂದೂ ಆರೋಪಿಸಿದರು.

ಕಾಂಗ್ರೆಸ್‌ ವಿರುದ್ಧದ 3ನೇ ಆರೋಪದಲ್ಲಿ ನಡ್ಡಾ, 1991ರಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಮನಮೋಹನ ಸಿಂಗ್‌ ವಿತ್ತ ಮಂತ್ರಿಯಾಗಿದ್ದಾಗ ಮಂಡಿಸಿದ್ದ ಬಜೆಟ್‌ನಲ್ಲಿ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಪ್ರತಿ ವರ್ಷ 20 ಕೋಟಿ ರು.ನಂತೆ 100 ಕೋಟಿ ರು. ನೀಡುವ ಘೋಷಣೆ ಮಾಡಿದ್ದರು. ಇದು ಆ ವರ್ಷದ ಬಜೆಟ್‌ ಪುಸ್ತಕದ 16ನೇ ಪುಟದ 57ನೇ ಪ್ಯಾರಾದಲ್ಲಿದೆ ಎಂದು ಹೇಳಿದರು.

click me!