ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ: ಶ್ರೀರಾಮಲು ಹೇಳಿದ್ದಿಷ್ಟು

By Suvarna NewsFirst Published Jul 19, 2022, 10:12 PM IST
Highlights

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ದೃಷ್ಠಿಯಲ್ಲಿ ಪ್ರಸಕ್ತ 2022-23ನೇ ಸಾಲಿಗೆ 3000 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ಘೋಷಣೆ

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ(ಜು.19): ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ನಾವು ಬಿಟ್ಟರೆ ತಾವೇ ಇವರು ಸಿಎಂ ಆಗೋದು? ಎಂದು ಸಚಿವ ಶ್ರೀರಾಮಲು ಕಾಲೆಳೆದಿದ್ದಾರೆ. ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬಿಟ್ರೆ ತಾನೇ ಡಿಕೆಶಿ ಸಿಎಂ ಆಗೋದು?. ಮುಖ್ಯಮಂತ್ರಿ ಸ್ಥಾನ ಅಂದ್ರೇನು ಅವರ ಮನೆ ಕುರ್ಚಿನಾ? ಅವರು ಕನಸು ಕಾಣ್ತಿದಾರೆ. ಸಿಎಂ ಆಗೋದಕ್ಕೆ ನಾವು ಬಿಡೋದಿಲ್ಲ ಎಂದರು. 

ಸಿದ್ರಾಮಯ್ಯ ಉತ್ಸವ ಮೂರ್ತಿ

ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ಸಿದ್ರಾಮೋತ್ಸವ ನಡೆಯುತ್ತಿದೆ.  ಈ ಕಡೆ ಡಿಕೆಶಿ ಈ ರೀತಿ ಮಾತನಾಡುತ್ತಿದ್ದಾರೆ. ಯಾವುದೇ ಉತ್ಸವಗಳು ನಡೆಯಲಿ.. ಉತ್ಸವ ಮೂರ್ತಿಗಳು ದೇವಾಲಯದ ಹೊರಗೇ ಇರಬೇಕು. ಊರೆಲ್ಲಾ ಮೆರವಣಿಗೆ ಮಾಡಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಹೊರಗೆ ಇಡುತ್ತಾರೆ.‌ ಇದನ್ನು ಸಿದ್ರಾಮಯ್ಯ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಿದ್ದರಾಮಯ್ಯನವರ ಮುಂದಿನ ಪರಿಸ್ಥಿತಿಯು ಇದೆ ಆಗುತ್ತೆ.. ಅವರು ಉತ್ಸವ ಮೂರ್ತಿಯಾಗುತ್ತಾರೆ ಎಂದು ಶ್ರೀರಾಮಲು ಭವಿಷ್ಯ ನುಡಿದರು. 

ಮೀಸಲಾತಿ ಬಗ್ಗೆ ಸಂತಸದ ಸುದ್ದಿ ನೀಡಿದ ಸಚಿವ ರಾಮುಲು

ಬಾದಾಮಿಯಲ್ಲಿ ನೆಲೆ ಇಲ್ಲ

ಸಿದ್ರಾಮಯ್ಯ ಬಾದಾಮಿಯಲ್ಲಿ ನೆಲೆ ಕಳೆದುಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಅವರಿಗೆ ಸ್ಥಾನ ಇಲ್ಲ. ಇದು ಒಬ್ಬ ಮುಖ್ಯಮಂತ್ರಿ ಆಗಿರುವ ವ್ಯಕ್ತಿಯ ಪರಿಸ್ಥಿತಿ.‌ ಕಾಂಗ್ರೆಸ್ ಪಕ್ಷ ರಿಜೆಕ್ಟೆಡ್ ಪಾರ್ಟಿ ಎಂದು ಶ್ರೀರಾಮಲು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು. 

ಮೋದಿ ಇರೋವರೆಗೆ ಬಿಜೆಪಿ ಸಿಎಂ

ನಮ್ಮ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮೋದಿ ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಬೇರೆಯವರು ಸಿಎಂ ಆಗಲು ಸಾಧ್ಯವಿಲ್ಲ . ಅಲ್ಲಿಯವರೆಗೂ ಬಿಜೆಪಿಯವರೇ ಸಿಎಂ ಆಗಿರ್ತಾರೆ ಎಂದರು.‌ ಸಧ್ಯ ಸಿದ್ರಾಮಯ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು. 

ಬಾದಾಮಿ ಜನ ಪಶ್ಚಾತಾಪ

ಬಾದಾಮಿಯ ಜನರು ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ, ಶ್ರೀರಾಮುಲು ಅವರನ್ನು ಕಳೆದುಕೊಂಡಿದ್ದೇವೆ ಎಂದು ಈಗ ಪಶ್ಚಾತಾಪ ಮತ್ತು ನೋವು ಪಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯೆಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿರುವ ಸಿದ್ರಾಮಯ್ಯನಿಗೆ ಒಂದು ಕ್ಷೇತ್ರ ಸಿಗುತ್ತಿಲ್ಲ. ಅತ್ತಿಂದ ಇತ್ತ ಇತ್ತಿಂದ ಅತ್ತ ಒಂದು ಕ್ಷೇತ್ರಕ್ಕಾಗಿ ಅಡ್ಡಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ವಿರುದ್ಧ ಮತ್ತೆ ಸ್ಪರ್ಧಿಸುವಿರೋ ಎನ್ನುವ ಪ್ರಶ್ನೆಗೆ ಅದು ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷ ಎಲ್ಲಿ ಸ್ಪರ್ಧಿಸಲು ಸೂಚಿಸುತ್ತದೆಯೋ ಅಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. 

ಸಮಾಜವಾದಿ ಸಿದ್ಧಾಂತ ಗಾಳಿಗೆ

ಸಿದ್ದರಾಮಯ್ಯನವರ ಬಗ್ಗೆ ನಮಗೆ ಭಯ ಅನ್ನುವ ಪ್ರಶ್ನೆಯೇ ಇಲ್ಲ. ಅವರು ಸಮಾಜವಾದಿ ಸಿದ್ದಾಂತದಿಂದ ಬಂದವರು. ಈಗ ಈ ರೀತಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಸಮಾಜವಾದಿಯಿಂದ ಬಂದವರು ಈ ರೀತಿ ಉತ್ಸವ ಮಾಡುತ್ತಿರುವುದು ನಾನು ಮೊದಲ ಬಾರಿ ನೋಡುತ್ತಿದ್ದೇನೆ. ಈಗ ಸಿದ್ರಾಮಯ್ಯ ಸಮಾಜವಾದಿ ಸಿದ್ಧಾಂತಗಳನ್ನ ಗಾಳಿಗೆ ತೂರಿದ್ದಾರೆ ಎಂದು ವ್ಯಂಗ್ಯವಾಡಿದರು. 

ಜನಾರ್ಧನ ರೆಡ್ಡಿಗೇ ಕೇಳಿ 

ಮನಸ್ಸು ಮಾಡಿದ್ರೆ ಒಮ್ಮೆಯಾದ್ರು ರಾಜ್ಯದ ಸಿಎಂ ಆಗುತ್ತೇನೆ ಎನ್ನುವ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದನ್ನ ಅವರಿಗೇ ಕೇಳಿ ಎಂದರು. ಅದು ಅವರ ವೈಯಕ್ತಿಕ ಹೇಳಿಕೆ ಪಕ್ಷಕ್ಕೂ ಅವರ ಆ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ. ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಆಸೆಯ ಬಗ್ಗೆ ಏನೇ ಹೇಳಿಕೊಳ್ಳಬಹುದು ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಶ್ರೀರಾಮಲು ಚುಟುಕಾಗಿ ಉತ್ತರಿಸಿದರು.

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಿ.ಎಂ. ಬಳಿ ಮನವಿ

ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಕಲಬುರಗಿ ನಗರದ ಆರ್.ಟಿ.ಓ ಕ್ರಾಸ್ ಬಳಿ 9.50 ಕೋಟಿ ರೂ. ವೆಚ್ಚದಲ್ಲಿ ನೂತನ ಜಂಟಿ ಸಾರಿಗೆ ಆಯುಕ್ತರ ಕಚೇರಿ, ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಇಲ್ಲಿ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ದಿಗೆ ಹಲವಾರು ನಿರ್ಣಯ ಕೈಗೊಂಡಿದ್ದಾರೆ. ಹಿಂದುಳಿವಿಕೆಯನ್ನು ಹೋಗಲಾಡಿಸಲು ತಾವು ಸಹ ಇಲ್ಲಿ ಸಂಪುಟ ಸಭೆ ನಡೆಸಬೇಕೆಂದು ಸಿ.ಎಂ. ಬಸವರಾಜ ಬೊಮ್ಮಾಯಿ ಅವರಲ್ಲಿ ಕೋರಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಹ ಸಹಮತಿ ವ್ಯಕ್ತಪಡಿಸಿದ್ದಾರೆ ಎಂದರು. ಕಲಬುರಗಿಯ ನೂತನ ಆರ್.ಟಿ.ಓ ಕಟ್ಟಡವು 1.05 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ನೆಲ ಮಹಡಿ, ಮೊದಲನೇ ಮತ್ತು ಎರಡನೇ ಮಹಡಿ ಹೊಂದಿದೆ. ಇಂದು ಬೀದರದಲ್ಲಿಯೂ ಆರ್.ಟಿ.ಓ ಕಚೇರಿ ಹೊಸ ಕಟ್ಟಡಕ್ಕೆ ಪೂಜೆ ಸಲ್ಲಿಸಿ ಬಂದಿದ್ದೇನೆ ಎಂದರು.

ಆಜಾದಿ ಕಾ ಅಮೃತ್ ಮಹೋತ್ಸವವನ್ನು ನೆನಪಿನಲ್ಲಿ ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ದೇಶದ ಗೌರವಾನ್ವಿತ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿ ಇಡೀ ಸಚಿವ ಸಂಪುಟವನ್ನು ಆಹ್ವಾನಿಸಿ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗುವುದು ಎಂದು ಬಿ. ಶ್ರೀರಾಮುಲು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 8-10 ವರ್ಷಗಳ ಹಳೇ ಬಸ್‍ಗಳು ಇನ್ನು ಓಡಾಡುತ್ತಿವೆ. ಬಡ ಮತ್ತು ಮಧ್ಯಮ ವರ್ಗ ಸಾರಿಗೆಗೆ ಬಸ್‍ಗಳನ್ನೆ ಹೆಚ್ಚು ಅವಲಂಬಿಸಿದ್ದು, ಹೀಗಾಗಿ ಈ ಭಾಗಕ್ಕೆ ವಿಶೇಷವಾಗಿ 500 ಕೋಟಿ ರೂ. ವೆಚ್ಚದಲ್ಲಿ 7 ಜಿಲ್ಲೆಗಳಿಗೆ  ಹೊಸ ಬಸ್ ಖರೀದಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.

ತಾವು ಸಾರಿಗೆ ಸಚಿವರಾದ ನಂತರ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 30ಕ್ಕೂ ಹೆಚ್ಚು ಸೇವೆ ಆನ್‍ಲೈನ್ ಮೂಲಕ ನೀಡಲಾಗುತ್ತಿದೆ. ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿಸಲು ಮತ್ತು ಇಲಾಖೆಯ ಸುಧಾರಣೆಗೆ ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಕಾಂಗ್ರೆಸ್‌ನಲ್ಲಿ ಇಬ್ಬರು ರಾಕಿಗಳಿಂದ ಸಿಎಂ ಕುರ್ಚಿಗೆ ಕಿತ್ತಾಟ: ಶ್ರೀರಾಮುಲು

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ದೃಷ್ಠಿಯಲ್ಲಿ ಪ್ರಸಕ್ತ 2022-23ನೇ ಸಾಲಿಗೆ 3000 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ಘೋಷಿಸಿದೆ. ಇದರಲ್ಲಿ ಈಗಾಗಲೆ 1500 ಕೋಟಿ ರೂ. ಮೈಕ್ರೋ ನಿಧಿ ಕಾಮಗಾರಿಗಳ ಕ್ರಿಯಾ ಯೋಜನೆಗೆ  ಸರ್ಕಾರ ಅನುಮೋದನೆ ನೀಡಿದ್ದು, ಉಳಿದ 1500 ಕೋಟಿ ರೂ.ಗಳ ಮ್ಯಾಕ್ರೋ ನಿಧಿಯಡಿ ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಲು ನಿರ್ಧರಿಸಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಇದು ಅಂತಿಮವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿದ್ದರು.
 

click me!