ಹಾಸನದಲ್ಲಿ ಆನೆ ದಂತ ಚೋರರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರದ ಬಿಜೆಪಿ ಸಂಸದೆ ಮೆನೇಕಾ ಗಾಂಧಿ, ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸಿಎಂ ಬೊಮ್ಮಾಯಿಗೆ ಪತ್ರ ಸಹ ಬರೆದಿದ್ದಾರೆ. ಇದಕ್ಕೆ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದು, ಮೆನೇಕಾ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್.
ಹಾಸನ. (ಜುಲೈ19): ದಂತಚೋರರ ಬೆನ್ನಿಗೆ ನಿಂತು, ಕೋರ್ಟ್ ನಿಂದ ಆರೋಪಿಗಳಿಗೆ ಬೇಲ್ ಕೊಡಿಸಿದ್ದಾರೆಂಬ ಗಂಭೀರ ಆರೋಪವೊಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಕೇಳಿಬಂದಿದೆ. ಆ ಗಂಭೀರ ಆರೋಪವನ್ನ ಮಾಡಿರೋದು ಬಿಜೆಪಿಯ ಹಿರಿಯ ನಾಯಕಿ, ಉತ್ತರ ಪ್ರದೇಶದ ಸಂಸದೆ ಮನೇಕಾ ಗಾಂಧಿ. ಈ ಆರೋಪವನ್ನು ಸಂಸದ ಪ್ರಜ್ವಲ್ ರೇವಣ್ಣ ತಳ್ಳಿಹಾಕಿದ್ದು, ಮೆನೇಕಾ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.
ಆರೋಪ ನಿರಾಕರಿಸಿದ ಪ್ರಜ್ವಲ್ ರೇವಣ್ಣ
ಈ ಗಂಭೀರ ಆರೋಪ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ, ಮನೇಕಾ ಗಾಂಧಿಯವರು ಹಿರಿಯ ಸಂಸದರು, ಅವರದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದೆ, ಪೂರ್ತಿ ಮಾಹಿತಿ ಪಡೆದು ಮಾತನಾಡಬೇಕಿತ್ತು. ದಿಶಾ ಸಭೆಯಲ್ಲಿ ಈ ವಿಚಾರ ನನ್ನ ಗಮನಕ್ಕೆ ಬಂತು, ಆನೆ ಸಾವನ್ನಪ್ಪಿರುವುದು ನನ್ನ ಗಮನಕ್ಕೆ ಬಂತು, ಆನೆ ಸಾವನ್ನಪ್ಪಿರುವುದು ನಮಗೆ ಗೊತ್ತಿಲ್ಲ, ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ, ಸಾಕ್ಷಿ ಇದ್ದರೆ ಕೊಡಿ ನಾನು ತಲೆಬಾಗುವೆ, ಆನೆ ಸಾವನ್ನಪ್ಪಿದ್ದರೆ ಅರಣ್ಯಇಲಾಖೆ ದೂರು ದಾಖಲು ಮಾಡಬೇಕು, ಆನೆ ದೇಹ ಹಾಸನದಲ್ಲಿ ಸಿಕ್ಕ ಹಿನ್ನೆಲೆ ಹಾಸನದಲ್ಲಿ ದೂರು ದಾಖಲಾಗಿದೆ. ಬೇಲ್ ನಾನು ಕೊಡಿಸಿದ್ದೇನೆ ಅಂತಾ ಆರೋಪ ಮಾಡಿದ್ದಾರೆ, ನಾನು ಹೇಗೆ ಬೇಲ್ ಕೊಡಿಸಲು ಸಾಧ್ಯ, ಬೇಲ್ ಕೋರ್ಟ್ ನೀಡುತ್ತೆ, ಇದರಲ್ಲಿ ನನ್ನ ಪಾತ್ರ ಏನಿದೆ.. ದಿಶಾಸಭೆಯಲ್ಲಿ ಕುಟುಂಬವೊಂದು ಹೇಳಿದಾಗ ಇದರ ಬಗ್ಗೆ ಗಮನಕ್ಕೆ ಬಂತು ಎಂದರು ಸ್ಪಷ್ಟಪಡಿಸಿದರು.
undefined
ಆನೆ ಕೊಂದು ದಂತ ಮಾರುತ್ತಿದ್ದವರ ರಕ್ಷಣೆಗೆ ನಿಂತ ಪ್ರಜ್ವಲ್ ರೇವಣ್ಣ? ಸೂಕ್ತ ತನಿಖೆಗೆ ಒತ್ತಾಯಿಸಿದ ಮೇನಕಾ ಗಾಂಧಿ!
ನಮ್ಮ ರಾಜ್ಯದ ಸಂಸದನ ಮೇಲೆ ಆರೋಪ ಮಾಡಿದ ಮೇಲೆ ಸಿಎಂ ಅವರು ಮೇನಕ ಗಾಂಧಿ ಅವರಿಗೆ ತಿಳುವಳಿಕೆ ನೀಡಬೇಕು ಹಾಗೂ ಅವರಿಗೆ ಸಿಎಂ ಪತ್ರ ಬರಿಬೇಕು, ನಾನು ಕೂಡಾ ಪತ್ರ ಬರೆಯುತ್ತೇನೆ. ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡಿದ್ದಾರೆ. ಹಾಸನದಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ. ನಾನು ಸಹಾಯ ಮಾಡಿರುವುದಕ್ಕೆ ಏನಾದ್ರು ಸಾಕ್ಷ್ಯ ಇದಿಯೇ..? ನಿಮ್ಮದೇ ಸರ್ಕಾರ ಅಧಿಕಾರ ಇದೆ ಮಾಹಿತಿ ತೆಗೆದುಕೊಂಡು ಮಾತನಾಡಿ. ನಾನು ಅಧಿಕಾರಿಗಳಿಗೆ ಒತ್ತಡ ಹಾಕಿದ್ರೆ ನೀವು ಹೇಳಿದ ಹಾಗೇ ಕೇಳ್ತಿನಿ, ನನ್ನ ಸಿಡಿಆರ್ ಬೇಕಾದ್ರೆ ತೆಗೆಸಿ ನೋಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಖಾರವಾಗಿಯೇ ಮನೇಕಾ ಗಾಂಧಿಗೆ ತಿರುಗೇಟು ಕೊಟ್ಟರು.
ಪರಿಸರದ ಬಗ್ಗೆ ಕಾಳಜಿ ಇಟ್ಟು, ಅನೇಕ ವಿಚಾರಗಳಲ್ಲಿ ಧ್ವನಿ ಎತ್ತುವ ಸಂಸದೆ ಮನೇಕಾ ಗಾಂಧಿ, ಈ ಪ್ರಕರಣದಲ್ಲೂ ಆಕ್ಷೇಪ ಎತ್ತಿದ್ದಾರೆ. ಕಾಡಾನೆಯನ್ನು ಸಾಯಿಸಿ, ಯಾರಿಗೂ ಗೊತ್ತಾಗದಂತೆ ಹೂತಿಟ್ಟು, ಅಲ್ಲಿಂದ ದಂತವನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ ಖದೀಮರಿಗೆ ಬೇಲ್ ಸಿಕ್ಕಿರುವ ಬಗ್ಗೆ ದನಿಯೆತ್ತಿದ್ದಾರೆ. ಆದ್ರೆ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಮೇಲಿನ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.
ಹೇಳಿಕೆ ನೀಡಿರೋ ಇಬ್ಬರು ಸಂಸದರಲ್ಲಿ ಯಾವ ಸಂಸದರು ಹೇಳುತ್ತಿರೋದು ಸತ್ಯ ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುತ್ತಾರೋ...? ಅರಣ್ಯ ಇಲಾಖೆ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಆದೇಶಿಸುತ್ತಾರೋ ಎಂಬುದು ಕಾದುನೋಡಬೇಕಿದೆ.
ಮೆನೇಕಾ ಗಾಂಧಿ ಪತ್ರ
ಮನೇಕಾ ಗಾಂಧಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯೋ, ಮೂಲಕ ಪ್ರಜ್ವಲ್ ರೇವಣ್ಣ ಹಾಗೂ ಅಧಿಕಾರಿಗಳ ಮೇಲೆ ಕೆಲವು ಆರೋಪ ಮಾಡಿದ್ದಾರೆ. ತಮ್ಮ ಪಾರ್ಟಿಯ ಕಾರ್ಯಕರ್ತರೆಂದು ದಂತ ಕಳ್ಳತನ ಮಾಡಿದ್ದ ಆರೋಪಿಗಳನ್ನ ಪ್ರಜ್ವಲ್ ರೇವಣ್ಣ ರಕ್ಷಣೆ ಮಾಡುತ್ತಿದ್ದು, ಪ್ರಕರಣವನ್ನ ಸೂಕ್ತ ತನಿಖೆ ನಡೆಸಬೇಕೆಂದು ಸಂಸದೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಡಾನೆ ದಂತ ಮಾರಲು ಯತ್ನಿಸುತ್ತಿದ್ದಾಗ ಮಾರ್ಚ್ 19 ರಂದು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯ ಪೊಲೀಸರಿಗೆ ಹಾಸನ ತಾಲೂಕಿನ ವೀರಾಪುರ ಗ್ರಾಮದ ಚಂದ್ರೇಗೌಡ ಹಾಗೂ ತಮ್ಮಯ್ಯ ಎಂಬ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ರು. ಪೊಲೀಸರು ಆರೋಪಿಗಳನ್ನ ಸ್ಥಳ ಮಹಜರ್ ಅಂತಾ ಕರೆದುಕೊಂಡು ಬಂದು, ಆನೆ ಕೊಂದು ಹೂತಿಟ್ಟಿದ್ದ ವೀರಾಪುರ ಜಾಗವನ್ನೂ ಪರಿಶೀಲಿಸಿದ್ರು. ಬಳಿಕ ಹೂತಿಟ್ಟಿದ್ದ ಜಾಗದಿಂದ ಕಾಡಾನೆ ಕಳೇಬರ ಹೊರತೆಗೆದು, ಅಂತ್ಯ ಸಂಸ್ಕಾರವನ್ನೂ ನಡೆಸಿದರು.
ಈ ವೇಳೆ ಸ್ಥಳಿಯ ಅರಣ್ಯ ಇಲಾಖೆಯೂ ಒಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಾ ಇದ್ರು. ಹೀಗಿರೋವಾಗ್ಲೇ ಪ್ರಕರಣದ ಬಗ್ಗೆ ಕೆಲವು ಆರೋಪಗಳನ್ನ ಮಾಡಿ, ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ಹಿರಿಯ ನಾಯಕಿ, ಮಾಜಿ ಸಚಿವೆ, ಸಂಸದೆ ಮನೇಕಾ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ..
ಸಿಎಂಗೆ ಮನೇಕಾ ಗಾಂಧಿ ಬರೆದಿರೋ ಪತ್ರದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರು ಸಿ.ಕೆ.ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಕೇಸನ್ನ ಹಾಸನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದಾರೆ, ಈ ಕೇಸ್ ಆರೋಪಿಗಳು ಪ್ರಜ್ವಲ್ ರೇವಣ್ಣ ಪಾರ್ಟಿಯ ಬೆಂಬಲಿಗರು ಎನ್ನುವ ಕಾರಣಕ್ಕೆ ಆರೋಪಿಗಳಿಗೆ ಬೇಲ್ ಕೊಡಿಸಿ, ಅವರ ಪರವಾಗಿ ಸಂಸದರು ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ.
ಅಲ್ಲದೇ ಈ ಕೇಸ್ ನಲ್ಲಿ ಆರೋಪಿಗಳ ರಕ್ಷಣೆಗೆ ಸ್ಥಳಿಯ ವಲಯ ಅರಣ್ಯ ಅಧಿಕಾರಿ ಭಾರೀ ಭ್ರಷ್ಟಾಚಾರ ಮಾಡಿದ್ದಾರೆ, ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್ ಎಫ್ ಓ ಪ್ರಯತ್ನ ಮಾಡುತ್ತಿದ್ದಾರೆಂದು ಪತ್ರದಲ್ಲಿ ಮನೇಕಾ ಗಾಂಧಿ ಉಲ್ಲೇಖಿಸಿದ್ದಾರೆ. ಇನ್ನು ಈ ಕೇಸ್ ನಲ್ಲಿ ಸಿಎಂ ಮಧ್ಯಪ್ರವೇಶ ಮಾಡಿ, ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಪತ್ರದ ಮೂಲಕ ಮನೇಕಾ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.