
ಗದಗ (ನ.05): ಸಿದ್ದರಾಮಯ್ಯನಿಗೆ ಸ್ವಂತ ಕ್ಷೇತ್ರವೇ ಇಲ್ಲ, ಪರದೇಶಿಗಳಂತೆ ದಿನಕ್ಕೊಂದು ಊರು ಅಡ್ಡಾಡುವಂತಹ ಗಿರಾಕಿಗಳಿಗೆ ಉತ್ತರ ಕೊಡುವುದಿಲ್ಲ. ನಿನ್ನ ಕ್ಷೇತ್ರ ಯಾವುದು ಅಂತಾ ಮೊದಲು ಸ್ಪಷ್ಟಮಾಡಿಕೊ. ಆಮೇಲೆ ನನ್ನ ಬಗ್ಗೆ ಮಾತನಾಡು ಎಂದು ಶ್ರೀರಾಮುಲು ಆರ್‌ಎಸ್‌ಎಸ್ ಗಿರಾಕಿ? ಎಂದಿದ್ದ ಸಿದ್ದರಾಮಯ್ಯ ಅವರಿಗೆ ಏಕ ವಚನದಲ್ಲಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು. ಅವರು ಗದಗ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಪರದೇಶಿ, ಅವರಿಗೆ ಕ್ಷೇತ್ರ ಇಲ್ಲ, ನಾನು ಮೊಳಕಾಲ್ಮೂರುದಲ್ಲಿ ನಿಲ್ಲುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.
ಸತ್ಯವನ್ನು ಕಠೋರವಾಗಿ ಹೇಳುವವರನ್ನು ಏಕ ವಚನದಲ್ಲಿ ಬೈದು ಸುಮ್ಮನಾಗಿಸೋದು ಸಿದ್ದು ಮನಸ್ಥಿತಿ. ಕಥೆ ಸೃಷ್ಟಿ ಮಾಡಿಕೊಂಡು ಮಾಧ್ಯಮದ ಮುಂದೆ ಬಂದು ಬೈಯುವುದೇ ದೊಡ್ಡ ಸಾಧನೆ ಎಂದು ಕೊಂಡಿದ್ದಾನೆ. ಅವರು ಸಿಎಂ ಆಗಿದ್ದಾಗಲೇ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಬಾದಾಮಿಗೆ ಬಂದು ಚಿಮ್ಮನಕಟ್ಟಿಅವರನ್ನ ಮುಗಿಸಿದ, ಕಾಂಗ್ರೆಸ್ ಪಕ್ಷದಲ್ಲಿ ಎಸ್.ಆರ್. ಪಾಟೀಲ, ಜಿ. ಪರಮೇಶ್ವರ ಅವರನ್ನ ಮುಗಿಸಿದ, ಈಗ ಡಿಕೆ ಶಿವಕುಮಾರ ಅವರನ್ನ ಮುಗಿಸಬೇಕೆಂದು ಹೊರಟಿದ್ದಾನೆ.
ತಾಕತ್ತಿದ್ದರೆ ಬಾದಾಮಿಯಿಂದಲೇ ಸ್ಪರ್ಧಿಸಿ: ಸಿದ್ದುಗೆ ರಾಮುಲು ಸವಾಲು
ನನ್ನ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕಾಂಗ್ರೆಸ್ ಗಿರಾಕಿನಾ? ಎಂದರು. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಇದ್ದು ಬಂದವಾ. ಕಾಂಗ್ರೆಸ್ ವಿರುದ್ಧ ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿ, ನಂತರ ಕಾಂಗ್ರೆಸ್ ಸೇರಿ ಬ್ಲ್ಯಾಕ್ ಮೇಲ್ ಮಾಡುತ್ತಾ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಆದಾ ಎಂದರು. ಈ ಹಿಂದೆ ರಾಮುಲು ಕಾಂಗ್ರೆಸ್ ನಲ್ಲಿದ್ದವರು ಎಂಬ ಸಿದ್ದು ಮಾತಿಗೆ ಪ್ರತಿಕ್ರಿಯೆಸಿದ ಅವರು, ಸಿದ್ದರಾಮಯ್ಯ ಅವರಿಗೆ ಹಿಂದೆ ಏನಾಗಿತ್ತು ಅನ್ನೋ ಬಗ್ಗೆ ಗೊತ್ತಿಲ್ಲ. ಪುರಸಭೆಯಿಂದ ಆಗ ಐವರು ಗೆದ್ದಿದ್ದೆವು. ಆಗ ಕಾಂಗ್ರೆಸ್ ಟಿಕೆಚ್ ಕೇಳುವವರಿರಲಿಲ್ಲ.
ನಂತರ 1999ರಲ್ಲಿ ಸುಷ್ಮಾ ಸ್ವರಾಜ್ ಅವರು ನನ್ನ ಬಳ್ಳಾರಿ ನಗರ ಅಭ್ಯರ್ಥಿ ಮಾಡಿದ್ದರು. ಇತಿಹಾಸ ತಿಳಿದುಕೊಂಡು ಮಾತನಾಡಬೇಕು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿದ ಹಾಗೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾನೆ. ಈಗ ದೊಡ್ಡ ನಾಯಕರಂತೆ ವರ್ತಿಸುತ್ತಿದ್ದಾನೆ, ನಾನು ಹೋರಾಟದ ಹಿನ್ನೆಲೆಯಿಂದ ಬೆಳೆದವನು. ಸಿದ್ದರಾಮಯ್ಯ ಸಂಡೇ ವಕೀಲಕಿ ಮಾಡಿಕೊಂಡು ಬಂದವಾ, ಕೋರ್ಟಗೆ ಹೋಗಿಲ್ಲ ರಾಜಿ ಸಂಧಾನ ಮಾಡುವ ವಕೀಲ, ನಾನು ಅವನ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.
ಅಹಿಂದ ನಾಯಕನ ಅರ್ಹತೆ ಸಿದ್ದರಾಮಯ್ಯಗೆ ಇಲ್ಲ: ಸಚಿವ ಶ್ರೀರಾಮುಲು
2030ರೊಳಗೆ ರಾಜ್ಯದೆಲ್ಲಡೆ ಇಲೆಕ್ಟ್ರಿಕ್ ಬಸ್ ಸಂಚಾರ: 2030ರೊಳಗೆ ರಾಜ್ಯದ ಎಲ್ಲ ಕಡೆ ಇಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸುವ ದೃಷ್ಟಿಕೋನವನ್ನು ಹೊಂದಲಾಗಿದೆ ಎಂದು ಹೇಳಿದ ಸಾರಿಗೆ ಸಚಿವ ಶ್ರೀರಾಮುಲು, ಉತ್ತರ ಕರ್ನಾಟಕದಲ್ಲಿನ ಎಲ್ಲ ಕಡೆ ಹಳೆಯ ಬಸ್ಸುಗಳು ಇವೆ. ಅಂತಹ ಬಸ್ಸುಗಳನ್ನ ಬದಲಾವಣೆ ಮಾಡಬೇಕಾಗಿದೆ ಎಂದರು. ಈಗಾಗಲೇ ಬೆಂಗಳೂರಿನ ಕೆಲವೊಂದು ಕಡೆ ಇಲೆಕ್ಟ್ರಿಕ್ ಬಸ್ ಸಂಚರಿಸುತ್ತೀವೆ. ಈ ಭಾಗಕ್ಕೆ ಬರಬೇಕಾದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಮುಖ್ಯಮಂತ್ರಿಗಳು ಸಹ ಇದಕ್ಕೆ ಎಷ್ಟುಬೇಕಾದ್ರೂ ಅನುದಾನ ನೀಡತ್ತೇವೆ ಎಂದಿದ್ದಾರೆ. ಸಾರಿಗೆ ನೌಕರರ ಸಂಬಳ ಸಲುವಾಗಿ ಇದುವರೆಗೆ 4 ಸಾವಿರ ಕೋಟಿ ನೀಡಿದ್ದಾರೆ. ಬಹಳಷ್ಟುಕಡೆ ರಸ್ತೆ ಸರಿ ಇಲ್ಲದ್ದಕ್ಕೆ ಬಸ್ಸುಗಳು ಹೋಗ್ತಿಲ್ಲ, ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ನಡೆಯುತ್ತೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.